ಕ್ರೀಡೆ

ಸ್ವರ್ಣ ಗೆದ್ದ ರವಿ ದಹಿಯಾ: ಏಷ್ಯನ್ ಕುಸ್ತಿ, ಭಜರಂಗ್ ಪೂನಿಯಾಗೆ ಬೆಳ್ಳಿ

ನವದೆಹಲಿ: ಭಾರತ ರವಿ ದಹಿಯಾ, ಏಷ್ಯನ್ ಕುಸ್ತಿ ಚಾಂಪಿಯನ್​ಷಿಪ್​ನ ಪುರುಷರ 57 ಕೆಜಿ ವಿಭಾಗದ ಫ್ರೀಸ್ಟೈಲ್​ನಲ್ಲಿ ಸ್ವರ್ಣ ಸಾಧನೆ ಮಾಡಿದ್ದಾರೆ. ಚಾಂಪಿಯನ್​ಷಿಪ್​ನ 5ನೇ ದಿನವಾದ ಶನಿವಾರ ಭಾರತದ ಪೈಲ್ವಾನ್​ಗಳು ಒಂದು ಸ್ವರ್ಣ ಹಾಗೂ 3 ಬೆಳ್ಳಿ ಸಾಧನೆ ಮಾಡಿದ್ದಾರೆ.

ಕೆಡಿ ಜಾಧವ್ ಒಳಾಂಗಣ ಸ್ಟೇಡಿಯಂನಲ್ಲಿ ನಡೆದ ಸ್ಪರ್ಧೆಯಲ್ಲಿ ರವಿ ದಹಿಯಾ 10-0 ಯಿಂದ ತಜಿಕಿಸ್ತಾನದ ಎಚ್ ವೊಹಿಡೊವ್ ಅವರನ್ನು ಮಣಿಸಿದರು. ಪಂದ್ಯದಲ್ಲಿ ಸಂಪೂರ್ಣ ಹಿಡಿತ ಸಾಧಿಸಲು ಯಶಸ್ವಿಯಾದ ರವಿ ದಹಿಯಾ ಸುಲಭ ಗೆಲುವು ದಾಖಲಿಸಿದರು. ಇದರೊಂದಿಗೆ ಪುರುಷರ ಫ್ರೀಸ್ಟೈಲ್ ವಿಭಾಗದ ಸ್ಪರ್ಧೆಯ ಮೊದಲ ದಿನ ಸ್ವರ್ಣ ಪದಕಕ್ಕೆ ಕೊರಳೊಡ್ಡಿದರು.

65 ಕೆಜಿ ವಿಭಾಗದ ಸ್ಪರ್ಧೆಯಲ್ಲಿ ಭಜರಂಗ್ ಪೂನಿಯಾ 2-10 ರಿಂದ ಜಪಾನ್​ನ ತಕುಟೊ ಒಟೊಗುರೊ ಎದುರು ನಿರಾಸೆ ಅನುಭವಿಸಿದರು. 2018ರ ವಿಶ್ವ ಚಾಂಪಿಯನ್​ಷಿಪ್ ಫೈನಲ್​ನಲ್ಲೂ ಭಜರಂಗ್ ಜಪಾನ್ ಪೈಲ್ವಾನ್ ಎದುರು ಸೋಲನುಭವಿಸಿದ್ದರು. 79 ಕೆಜಿ ವಿಭಾಗದ ಫೈನಲ್​ನಲ್ಲಿ ಭಾರತದ ಗೌರವ್ ಬಲಿಯಾನ್ 5-7 ರಿಂದ ರ್ಕಿಗಿಸ್ಥಾನದ ಬುಡಾಜಾಪೊವ್ ಎದುರು ಸೋಲುಭವಿಸಿದರು. ಸಮಬಲದಿಂದ ಕೂಡಿದ್ದ ಹಣಾಹಣಿಯಲ್ಲಿ ಅಂತಿಮ ಕ್ಷಣದಲ್ಲಿ ಗೌರವ್ ನಿರಾಸೆ ಅನುಭವಿಸಿದರು. 97 ಕೆಜಿ ವಿಭಾಗದ ಸ್ವರ್ಣ ಸಮರದಲ್ಲಿ ಭಾರತ ಸತ್ಯವ್ರತ್ ಕಡಿಯಾನ್ ಇರಾನ್​ನ ಗೊಲೆಜಿ ಎದುರು ಸೋಲನುಭವಿಸಿದರು. ಕಂಚಿನ ಪದಕದ ಹಣಾಹಣಿಯಲ್ಲಿ ನವೀನ್ ಕುಮಾರ್ 70 ಕೆಜಿ ವಿಭಾಗದಲ್ಲಿ ಸೋಲನುಭವಿಸಿದರು.