ನವದೆಹಲಿ: ಭಾರತದ ಕುಸ್ತಿಪಟುಗಳಾದ ಸರಿತಾ ಮೊರ್, ದಿವ್ಯಾ ಕ್ಯಾಕ್ರನ್ ಹಾಗೂ ಪಿಂಕಿ ಏಷ್ಯಾ ಕುಸ್ತಿ ಚಾಂಪಿಯನ್ಷಿಪ್ನ ಮಹಿಳೆಯರ ವಿಭಾಗದಲ್ಲಿ ಸ್ವರ್ಣ ಪದಕ ಜಯಿಸಿದ್ದಾರೆ. ಕೆಡಿ ಜಾಧವ್ ಒಳಾಂಗಣ ಸ್ಟೇಡಿಯಂನಲ್ಲಿ ಕೂಟದ ಮೂರನೇ ದಿನವಾದ ಗುರುವಾರ ನಡೆದ ಚಾಂಪಿಯನ್ಷಿಪ್ನ 59 ಕೆಜಿ ವಿಭಾಗದಲ್ಲಿ ಸರಿತಾ 3-2 ರಿಂದ ಮಂಗೋಲಿಯಾದ ಬ್ಯಾಟ್ಸೆಟ್ಸೆಗ್ ಅಟ್ಲಾಂಟಸೆಟ್ಸೆಗ್ ಎದುರು ಜಯ ದಾಖಲಿಸಿದರು.
2017ರ ಬಳಿಕ ಮೊದಲ ಬಾರಿಗೆ ಏಷ್ಯನ್ ಚಾಂಪಿಯನ್ಷಿಪ್ನಲ್ಲಿ ಸರಿತಾ ಭಾಗವಹಿಸಿದ್ದರು. 55ಕೆಜಿ ವಿಭಾಗದಲ್ಲಿ ಭಾರತದ ಪಿಂಕಿ 2-1 ರಿಂದ ಮಂಗೊಲಿಯಾದ ಹಾಲಿ ಚಾಂಪಿಯನ್ ಡುಲ್ಗುನ್ ಬೊರ್ಲೆಮಾ ಅವರನ್ನು ಮಣಿಸಿ ಸ್ವರ್ಣ ಗೆದ್ದರು. ಇದರೊಂದಿಗೆ ಪಿಂಕಿ ಏಷ್ಯನ್ ಚಾಂಪಿಯನ್ಷಿಪ್ನಲ್ಲಿ ಮೊದಲ ಸ್ವರ್ಣ ಸಾಧನೆ ಮಾಡಿದರು. 68 ಕೆಜಿ ವಿಭಾಗದಲ್ಲಿ ದಿವ್ಯಾ ಕ್ಯಾಕ್ರನ್ ಮೂರನೇ ದಿನ ಮೊದಲ ಸ್ವರ್ಣ ಗೆದ್ದುಕೊಟ್ಟರು. ಒಂದೇ ದಿನ ಭಾರತಕ್ಕೆ ಮೂರು ಸ್ವರ್ಣ ಪದಕಗಳು ಒಲಿದಿದ್ದು ವಿಶೇಷ. ನವಜೋತ್ ಕೌರ್, 2018ರಲ್ಲಿ ಸ್ವರ್ಣ ಜಯಿಸುವ ಮೂಲಕ ಏಷ್ಯನ್ ಚಾಂಪಿಯನ್ಷಿಪ್ನಲ್ಲಿ ಈ ಸಾಧನೆ ಮಾಡಿದ ಭಾರತದ ಮೊದಲ ಬಾಕ್ಸರ್ ಎನಿಸಿಕೊಂಡಿದ್ದರು. 50ಕೆಜಿ ವಿಭಾಗದಲ್ಲಿ ಭಾರತದ ನಿರ್ಮಲಾ ದೇವಿ 2-3 ರಿಂದ ಜಪಾನ್ನ ಮಿಹೊ ಇಗಾರಾಶಿ ಎದುರು ಸೋಲನುಭವಿಸಿದರು. ಭರ್ಜರಿ ನಿರ್ವಹಣೆ ತೋರಿದರೂ ಸ್ವರ್ಣ ಒಲಿಸಿಕೊಳ್ಳಲು ನಿರ್ಮಲಾ ವಿಫಲರಾದರು.