ಲಕ್ಷ್ಯಸೇನ್-ಪಿವಿ ಸಿಂಧು 
ಏಷ್ಯನ್​ ಗೇಮ್ಸ್

ಏಷ್ಯನ್​ ಗೇಮ್ಸ್​ನಲ್ಲಿ ಕಳಪೆ ನಿರ್ವಹಣೆ!: ಸಿಂಧು, ಲಕ್ಷ್ಯಸೇನ್​ಗೆ ಭಾರತೀಯ ಕ್ರೀಡಾ ಪ್ರಾಧಿಕಾರ​ ಅನುದಾನವಿಲ್ಲ!

ಸ್ಟಾರ್​ ಷಟ್ಲರ್​ಗಳಾದ ಪಿವಿ ಸಿಂಧು, ಲಕ್ಷ್ಯಸೇನ್​ ಸಹಿತ ಭಾರತದ ಬ್ಯಾಡ್ಮಿಂಟನ್​ ಆಟಗಾರರಿಗೆ ಹಾಲಿ ಯುರೋಪಿಯನ್​ ಚರಣದ ಅಂತಾರಾಷ್ಟ್ರೀಯ ಬ್ಯಾಡ್ಮಿಂಟನ್​ ಟೂರ್ನಿಗಳಲ್ಲಿ ಭಾಗವಹಿಸಲು ಭಾರತೀಯ ಕ್ರೀಡಾ ಪ್ರಾಧಿಕಾರ (ಸಾಯ್​) ಯಾವುದೇ ಆರ್ಥಿಕ ನೆರವು ನೀಡಿಲ್ಲ. ಇದರಿಂದಾಗಿ ಬ್ಯಾಡ್ಮಿಂಟನ್​ ತಾರೆಯರು ಸ್ವಂತ ಹಣ ಮತ್ತು ವೈಯಕ್ತಿಕ ಪ್ರಾಯೋಜಕರ ನೆರವಿನಿಂದ ಟೂರ್ನಿಗಳಲ್ಲಿ ಸ್ಪರ್ಧಿಸುವಂತಾಗಿದೆ.

ನವದೆಹಲಿ: ಸ್ಟಾರ್​ ಷಟ್ಲರ್​ಗಳಾದ ಪಿವಿ ಸಿಂಧು, ಲಕ್ಷ್ಯಸೇನ್​ ಸಹಿತ ಭಾರತದ ಬ್ಯಾಡ್ಮಿಂಟನ್​ ಆಟಗಾರರಿಗೆ ಹಾಲಿ ಯುರೋಪಿಯನ್​ ಚರಣದ ಅಂತಾರಾಷ್ಟ್ರೀಯ ಬ್ಯಾಡ್ಮಿಂಟನ್​ ಟೂರ್ನಿಗಳಲ್ಲಿ ಭಾಗವಹಿಸಲು ಭಾರತೀಯ ಕ್ರೀಡಾ ಪ್ರಾಧಿಕಾರ (ಸಾಯ್​) ಯಾವುದೇ ಆರ್ಥಿಕ ನೆರವು ನೀಡಿಲ್ಲ. ಇದರಿಂದಾಗಿ ಬ್ಯಾಡ್ಮಿಂಟನ್​ ತಾರೆಯರು ಸ್ವಂತ ಹಣ ಮತ್ತು ವೈಯಕ್ತಿಕ ಪ್ರಾಯೋಜಕರ ನೆರವಿನಿಂದ ಟೂರ್ನಿಗಳಲ್ಲಿ ಸ್ಪರ್ಧಿಸುವಂತಾಗಿದೆ. ಸರ್ಕಾರ ಆರ್ಥಿಕ ಸಹಾಯವಿಲ್ಲದೆ ಆಡಿದ ನಡುವೆಯೂ ಪಿವಿ ಸಿಂಧು ಮತ್ತು ಲಕ್ಷ್ಯಸೇನ್ ​ ಕಳೆದ ವಾರ ಹೈಲೋ ಓಪನ್​ನಲ್ಲಿ ಆಡಿ ಪ್ರಶಸ್ತಿ ಗೆದ್ದಿರುವುದು ವಿಶೇಷವಾಗಿದೆ. ಸರ್ಕಾರ ಅನುದಾನ ನಿಲ್ಲಿಸಿರುವ ಬಗ್ಗೆ ಪ್ರವಾಸಕ್ಕೆ ತೆರಳುವ ಮುನ್ನಾದಿನವಷ್ಟೇ ಗೊತ್ತಾಯಿತು. ಬಳಿಕ ಸ್ವಂತ ಹಣ ಮತ್ತು ಒಲಿಂಪಿಕ್​ ಗೋಲ್ಡ್​ ಕ್ವೆಸ್ಟ್​ (ಒಜಿಕ್ಯು) ನೆರವಿನಿಂದ ಟೂರ್ನಿಗಳಲ್ಲಿ ಭಾಗವಹಿಸಿದೆ ಎಂದು ಪಿವಿ ಸಿಂಧು ತಿಳಿಸಿದ್ದಾರೆ.

ಕಳೆದ ಏಷ್ಯನ್​ ಗೇಮ್ಸ್​ನಲ್ಲಿ ಬ್ಯಾಡ್ಮಿಂಟನ್​ ಆಟಗಾರರು ತೋರಿದ ಕಳಪೆ ನಿರ್ವಹಣೆಯಿಂದಾಗಿ ಅನುದಾನ ನಿಲ್ಲಿಸಲಾಗಿದೆ ಎಂದು ಭಾರತೀಯ ಬ್ಯಾಡ್ಮಿಂಟನ್​ ಸಂಸ್ಥೆ (ಬಿಎಐ) ಅಧಿಕಾರಿಗಳು ಆರೋಪಿಸಿದ್ದರೆ, ಸಾಯ್​ ಇದನ್ನು ತಳ್ಳಿಹಾಕಿದೆ. ಯುರೋಪಿಯನ್​ ಚರಣದ ಟೂರ್ನಿಗಳ ಬಗ್ಗೆ ಬಿಎಐ ಮುಂಚಿತವಾಗಿ ಮಾಹಿತಿ ನೀಡದ ಕಾರಣ ಅನುದಾನ ವಿತರಿಸಲಾಗಿಲ್ಲ ಎಂದು ಸಾಯ್​ ವಿವರಣೆ ನೀಡಿದೆ. ಅಲ್ಲದೆ ಮುಂಬರುವ ದಿನಗಳಲ್ಲಿ ಸ್ಪಷ್ಟ ಮಾಹಿತಿ ನೀಡಿದರೆ ಅನುದಾನ ಒದಗಿಸಲಾಗುವುದು ಎಂದಿದೆ.

ವಿಶ್ವ ರ್ಯಾಂಕಿಂಗ್​ನಲ್ಲಿ 6ನೇ ಸ್ಥಾನಕ್ಕೇರಿದ ಪಿವಿ ಸಿಂಧು

ಸತತ 2 ವಾರಗಳಲ್ಲಿ ಜಪಾನ್​ ಓಪನ್​ ಮತ್ತು ಹೈಲೋ ಓಪನ್​ ಪ್ರಶಸ್ತಿ ಜಯಿಸಿದ್ದರಿಂದ ಅನುಭವಿ ಷಟ್ಲರ್​ ಪಿವಿ ಸಿಂಧು, ವಿಶ್ವ ಬ್ಯಾಡ್ಮಿಂಟನ್​ ಮಹಿಳಾ ಸಿಂಗಲ್ಸ್​ ರ್ಯಾಂಕಿಂಗ್​ನಲ್ಲಿ 6ನೇ ಸ್ಥಾನಕ್ಕೇರಿದ್ದಾರೆ. ಇದು 2022ರ ಡಿಸೆಂಬರ್​ ಬಳಿಕ ಅವರ ಅತ್ಯುತ್ತಮ ರ್ಯಾಂಕ್​ ಆಗಿದೆ. ಸೂಪರ್​ 500 ಪ್ರಶಸ್ತಿ ಗೆಲುವಿನಿಂದ ಅವರು 9,200 ಅಂಕ ಗಳಿಸಿ 2 ಸ್ಥಾನ ಬಡ್ತಿ ಪಡೆದಿದ್ದಾರೆ. ವಾರದ ಹಿಂದಷ್ಟೇ ಅವರು ಅಗ್ರ 10ರೊಳಗೆ ಮರಳಿದ್ದರು.