ಏಷ್ಯನ್ ಗೇಮ್ಸ್: ಜಪಾನ್‌ನ ಐಚಿ-ನಗೋಯಾದಲ್ಲಿ ನಡೆಯುತ್ತಿರುವ ಏಷ್ಯನ್ ಕ್ರೀಡಾಕೂಟದಲ್ಲಿ ಭಾರತೀಯ ಕ್ರೀಡಾಪಟುಗಳ ಬಂಗಾರದ ಬೇಟೆ ಮುಂದುವರಿದಿದೆ. ಭಾರತದ ಸ್ಟಾರ್ ಬಾಕ್ಸರ್ ಲವ್ಲಿನಾ ಬೊರ್ಗೊಹೈನ್ ಮಹಿಳೆಯರ 75 ಕೆಜಿ ವಿಭಾಗದಲ್ಲಿ ಚಿನ್ನದ ಪದಕಕ್ಕೆ ಮುತ್ತುಕ್ಕುವ ಮೂಲಕ ದೇಶದ ಕೀರ್ತಿಯನ್ನು ವಿಶ್ವಮಟ್ಟದಲ್ಲಿ ಮತ್ತೊಮ್ಮೆ ಬೆಳಗಿದ್ದಾರೆ.
ಫೈನಲ್ ಪಂದ್ಯದಲ್ಲಿ ಚೀನಾದ ಬಾವೊ ಜಿಯಿ ವಿರುದ್ಧ ಅದ್ಭುತ ಪ್ರದರ್ಶನ ನೀಡಿದ ಲವ್ಲಿನಾ, 5-0 ಅಂತರದ ಸರ್ವಾನುಮತದ ತೀರ್ಪಿನೊಂದಿಗೆ ಭರ್ಜರಿ ಜಯ ಸಾಧಿಸಿದ್ದು, ಈ ಗೆಲುವಿನೊಂದಿಗೆ ಭಾರತದ ಒಟ್ಟು ಚಿನ್ನದ ಪದಕಗಳ ಸಂಖ್ಯೆ 12 ಕ್ಕೇರಿದೆ.
ಲವ್ಲಿನಾ ಪಾಲಿಗೆ ಈ ಜಯ ಸ್ಮರಣೀಯವಾಗಿ ಉಳಿಯಲಿದೆ. ಏಕೆಂದರೆ ಜನ್ಮದಿನದಂದೇ ಚಿನ್ನದ ಪದಕ ಗೆದ್ದಿರುವ ಬೊರ್ಗೊಹೈನ್, ಹುಟ್ಟು ಹಬ್ಬದ ಸಂಭ್ರಮದ ಜೊತೆಗೆ ದೇಶಕ್ಕಾಗಿ ಗೋಲ್ಡ್ ಮೆಡೆಲ್ ಅನ್ನು ಗೆದ್ದಿರುವುದು ವೈಯಕ್ತಿಕ ಹಾಗೂ ಸಾರ್ವಜನಿಕ ಸಂತೋಷ ಎರಡಕ್ಕೂ ದಾರಿ ಮಾಡಿಕೊಟ್ಟಿದೆ.
ಈ ಐತಿಹಾಸಿಕ ಗೆಲುವಿನೊಂದಿಗೆ ಲವ್ಲಿನಾ ಭಾರತೀಯ ಮಹಿಳಾ ಬಾಕ್ಸಿಂಗ್‌ನಲ್ಲಿ ಹೊಸ ಇತಿಹಾಸ ಬರೆದಿದ್ದಾರೆ. ಭಾರತದ ಬಾಕ್ಸಿಂಗ್ ದಂತಕಥೆ ಎಂ.ಸಿ. ಮೇರಿ ಕೋಮ್ ನಂತರ ಏಷ್ಯನ್ ಗೇಮ್ಸ್‌ನಲ್ಲಿ ಚಿನ್ನದ ಪದಕ ಗೆದ್ದ ಕೇವಲ ಎರಡನೇ ಭಾರತೀಯ ಮಹಿಳಾ ಬಾಕ್ಸರ್ ಎಂಬ ಹೆಗ್ಗಳಿಗೆ ಇವರು ಪಾತ್ರರಾಗಿದ್ದಾರೆ. ಈ ಹಿಂದೆ ಮೇರಿ ಕೋಮ್ 2014ರ ಇಂಚಿಯಾನ್ ಏಷ್ಯನ್ ಗೇಮ್ಸ್‌ನಲ್ಲಿ ಚಿನ್ನ ಗೆದ್ದು ಈ ಸಾಧನೆ ಮಾಡಿದ್ದರು.
ಬಾಕ್ಸಿಂಗ್‌ಗೂ ಮುನ್ನ ಬಿಲ್ಲುಗಾರಿಕೆಯಲ್ಲೂ ಭಾರತದ ವನಿತೆಯರು ಇತಿಹಾಸ ನಿರ್ಮಿಸಿದ್ದಾರೆ. ಮಹಿಳಾ ರಿಕರ್ವ್ ಬಿಲ್ಲುಗಾರಿಕೆ ತಂಡದ ಫೈನಲ್‌ನಲ್ಲಿ ಹಾಲಿ ವಿಶ್ವ ಚಾಂಪಿಯನ್ ದಕ್ಷಿಣ ಕೊರಿಯಾವನ್ನು ಮಣಿಸಿ ಚಿನ್ನದ ಪದಕ ಪಡೆದಿದ್ದಾರೆ.
2024ರ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಚಿನ್ನ ಗೆದ್ದಿದ್ದ ಬಲಶಾಲಿ ಕೊರಿಯನ್ ತಂಡವನ್ನು ಸೋಲಿಸುವ ಮೂಲಕ ಭಾರತದ ವನಿತೆಯರ ಬಿಲ್ವಿದ್ಯೆ ಪ್ರಾವಿಣ್ಯತೆ ಎಷ್ಟಿದೆ ಎಂದು ಜಗತ್ತಿನ ಮುಂದೆ ಸಾಬೀತುಪಡಿಸಿದ್ದಾರೆ. ಇದೇ ವೇಳೆ ಮಿಶ್ರ ರಿಕರ್ವ್ ತಂಡದ ಸ್ಪರ್ಧೆಯಲ್ಲಿ ಭಾರತ ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟುಕೊಂಡಿದೆ, (ಏಜೆನ್ಸೀಸ್).