ಬೆಂಗಳೂರು: ಕರ್ನಾಟಕ ಕಬಡ್ಡಿ ಪ್ರೀಮಿಯರ್ ಲೀಗ್ (ಕೆಕೆಪಿಎಲ್) ಮೊದಲ ಆವೃತ್ತಿಗೆ 2026ರ ಅಕ್ಟೋಬರ್ 1ರಂದು ಚಾಲನೆ ದೊರೆಯಲಿದೆ. 2014ರಿಂದ ದೇಶಾದ್ಯಂತ ನಡೆಯುತ್ತಿರುವ ಪ್ರೊ ಕಬಡ್ಡಿ ಲೀಗ್ ಮಾದರಿಯಲ್ಲಿಯೇ ಕರ್ನಾಟಕ ಕಬಡ್ಡಿ ಪ್ರೀಮಿಯರ್ ಲೀಗ್ ಅನ್ನು ಆಯೋಜಿಲಾಗುತ್ತಿದೆ.
ರಾಜ್ಯದ ಪ್ರತಿಭಾನ್ವಿತ ಕಬಡ್ಡಿ ಆಟಗಾರರಿಗೆ ವೇದಿಕೆ ಕಲ್ಪಿಸುವ ಹಾಗೂ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಆಡಲು ಪ್ರೋತ್ಸಾಹಿಸುವ ಉದ್ದೇಶದಿಂದ ಮೊದಲ ಬಾರಿಗೆ ಕೆಕೆಪಿಎಲ್ ಅನ್ನು ಪರಿಚಯಿಸಲಾಗಿದೆ.
ಕೋರಮಂಗಳದ ಒಳಾಂಗಣ ಕ್ರೀಡಾಂಗಣದಲ್ಲಿ ಅ.1ರಿಂದ 8ರವರೆಗೆ ನಡೆಯಲಿರುವ ಎಂಟು ದಿನಗಳ ಈ ಕಬಡ್ಡಿ ಉತ್ಸವಕ್ಕೆ ನಾಡಿನ ಸನ್ಮಾನ್ಯ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಅಧಿಕೃತ ಚಾಲನೆ ನೀಡಲಿದ್ದಾರೆ. ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ. ಖಾದರ್, ಭಾರತ ಕಬಡ್ಡಿ ತಂಡದ ಮಾಜಿ ನಾಯಕ ಹಾಗೂ ಭಾರತ ಮತ್ತು ಪಿಕೆಎಲ್ ನ ಕೋಚ್ ಬಿ.ಸಿ. ರಮೇಶ್ ಸೇರಿದಂತೆ ಹಲವು ಗಣ್ಯರು ಉದ್ಘಾಟನಾ ಸಮಾರಂಭಕ್ಕೆ ಸಾಕ್ಷಿಯಾಗಲಿದ್ದಾರೆ.
ಈ ವೇಳೆ, ಲೀಗ್ ಆಯೋಜಕರು, ಎಂಟು ಫ್ರಾಂಚೈಸಿಗಳ ಮಾಲೀಕರು, ಕೋಚ್ ಗಳು ಹಾಗೂ ಪ್ರಮುಖ ಆಟಗಾರರು ಉಪಸ್ಥಿತರಿರಲಿದ್ದಾರೆ.
ಈಗಾಗಲೇ ಎಂಟು ಫ್ರಾಂಚೈಸಿಗಳು ರಾಜ್ಯದ ಯುವ ಮತ್ತು ಅನುಭವಿ ಆಟಗಾರರನ್ನು ಒಳಗೊಂಡ ತಂಡಗಳನ್ನು ರಚಿಸಿಕೊಂಡಿದ್ದು, ಪ್ರಶಸ್ತಿ ಗೆಲ್ಲಲು ಸಜ್ಜಾಗಿವೆ. ಉತ್ತರ ಕನ್ನಡ ಸ್ಟಾಲ್ ಲಯನ್ಸ್, ವಿಜಯಪುರ ಲಯನ್ಸ್, ಮೈಸೂರು ಮಹಾಸೇನೆ, ಮಂಗಳೂರು ಇಂಡಿಯನ್ಸ್, ಚಾಲುಕ್ಯ ಸೇನೆ ಬಾಗಲಕೋಟೆ, ಬೆಂಗಳೂರು ಬಿಸನ್ಸ್, ಬೆಳಗಾವಿ ಬುಲ್ಸ್ ಮತ್ತು ಹೊಯ್ಸಳ ಎಂಪೈರ್ ಹಾಸನ ಸೇರಿದಂತೆ ಒಟ್ಟು 8 ತಂಡಗಳು ಚೊಚ್ಚಲ ಪ್ರಶಸ್ತಿಗಾಗಿ ಹೋರಾಟ ನಡೆಸಲಿವೆ.
7 ದಿನಗಳು ನಡೆಯುವ ಗುಂಪು ಹಂತದಲ್ಲಿ ಪ್ರತಿ ದಿನವೂ ನಾಲ್ಕು ಪಂದ್ಯಗಳು ನಡೆಯಲಿದ್ದು, ಕಬಡ್ಡಿ ಅಭಿಮಾನಿಗಳಲ್ಲಿ ರೋಚಕತೆಯನ್ನು ಉಣಬಡಿಸಲು ನಿರ್ಧರಿಸಲಾಗಿದೆ.
ಲೀಗ್ ಮಾದರಿ: ಪಿಕೆಎಲ್ ಮಾದರಿಯಲ್ಲೇ ಪಿಪಿಕೆಎಲ್ ಟೂರ್ನಿ ನಡೆಯಲಿದೆ. ಗೆದ್ದ ಪ್ರತಿ ತಂಡವು 2 ಅಂಕಗಳನ್ನು ಪಡೆಯಲಿದೆ. ಒಂದು ವೇಳೆ ಪಂದ್ಯ ಟೈಆದರೆ ಮತ್ತೆ ಐದು ನಿಮಿಷ ಆಡಿಸಿ ಫಲಿತಾಂಶ ನಿರ್ಧರಿಸಲಾಗುತ್ತದೆ.
31 ಪಂದ್ಯಗಳ ರೌಂಡ್ ರಾಬಿನ್ ಸುತ್ತಿನ ಬಳಿಕ ಅಂಕಪಟ್ಟಿಯಲ್ಲಿ ಅಗ್ರ ನಾಲ್ಕು ತಂಡಗಳು ಪ್ಲೇಆಫ್ ಹಂತಕ್ಕೆ ಮುನ್ನೆಡೆಯಲಿವೆ. ಸೆಮಿಫೈನಲ್ ಪಂದ್ಯಗಳಲ್ಲಿ ಗೆದ್ದ ಎರಡು ತಂಡಗಳು ಅಕ್ಟೋಬರ್ 8ರಂದು ಪ್ರಶಸ್ತಿಗಾಗಿ ಪೈಪೋಟಿ ನಡೆಸಲಿವೆ.
ಉದ್ಘಾಟನಾ ದಿನದ ಪಂದ್ಯಗಳು
ಮೈಸೂರು ಮಹಾಸೇನೆ - ಚಾಲುಕ್ಯ ಸೇನೆ ಬಾಗಲಕೋಟೆ (ಸಂಜೆ -6ಕ್ಕೆ )
ಉತ್ತರ ಕನ್ನಡ ಸ್ಟಾಲ್ ಲಯನ್ಸ್ – ವಿಜಯಪುರ ಲಯನ್ಸ್ (ಸಂಜೆ 7ಕ್ಕೆ )
ಹೊಯ್ಸಳ ಎಂಪೈರ್ ಹಾಸನ – ಮಂಗಳೂರು ಇಂಡಿಯನ್ಸ್ (ರಾತ್ರಿ 8ಕ್ಕೆ)
ಬೆಳಗಾವಿ ಬುಲ್ಸ್ – ಬೆಂಗಳೂರು ಬಿಸನ್ಸ್ (ರಾತ್ರಿ 9ಕ್ಕೆ)
ಹೆಚ್ಚಿನ ಮಾಹಿತಿಗಾಗಿ: https://karnatakakabaddi.com/
ಸ್ಥಳ: ಕೋರಮಂಗಲ ಒಳಾಂಗಣ ಕ್ರೀಡಾಂಗಣ, ಬೆಂಗಳೂರು