ಏಷ್ಯನ್ ಗೇಮ್ಸ್: ಜಪಾನ್ಲ್ಲಿ ನಡೆಯುತ್ತಿರುವ ಏಷ್ಯನ್ ಕ್ರೀಡಾಕೂಟದಲ್ಲಿ ಭಾರತದ ಪದಕಗಳ ಬೇಟೆ ಮುಂದುವರಿದಿದ್ದು, ಶುಕ್ರವಾರ (ಅ. 2) ನಡೆದ ರಿಕರ್ವ್ ಬಿಲ್ಲುಗಾರಿಕೆ ವಿಭಾಗದಲ್ಲಿ ಭಾರತೀಯ ಮಹಿಳಾ ತಂಡವು ಪ್ರಬಲ ದಕ್ಷಿಣ ಕೊರಿಯಾ ತಂಡವನ್ನು ಮಣಿಸಿ ಚೊಚ್ಚಲ ಬಂಗಾರದ ಪದಕವನ್ನು ಕೊರಳಿಗೇರಿಸಿಕೊಂಡಿದೆ.
ಶುಕ್ರವಾರ ಬೆಳಿಗ್ಗೆ ನಡೆದ ರೋಚಕ ಹಾಗೂ ಹೈ-ವೋಲ್ಟೇಜ್ ಫೈನಲ್ ಪಂದ್ಯದಲ್ಲಿ ಭಾರತ ಮತ್ತು ದಕ್ಷಿಣ ಕೊರಿಯಾ ತಂಡಗಳು ಮುಖಾಮುಖಿಯಾಗಿದ್ದವು. ವಿಶ್ವದಲ್ಲೇ ಬಿಲ್ಲುಗಾರಿಕೆಯಲ್ಲಿ ಅತಿ ಹೆಚ್ಚು ಪ್ರಭಾವ ಹೊಂದಿರುವ ಹಾಗೂ ಪ್ರಶಸ್ತಿ ಗೆಲ್ಲುವ ಫೇವರಿಟ್ ಎನಿಸಿದ್ದ ಕೊರಿಯಾ ತಂಡವನ್ನು ಭಾರತ ವನಿತೆಯರು 5-3 ಅಂತರದಿಂದ ಪರಾಜಯಗೊಳಿಸಿದ್ದಾರೆ.
ಭಾರತದ ಪರವಾಗಿ ಕಣಕ್ಕಿಳಿದ ಪ್ರತಿಭಾವಂತ ಆಟಗಾರ್ತಿಯರಾದ ಅಂಕಿತಾ ಭಕತ್, ಕೀರ್ತಿ ಮತ್ತು ಕುಂಕುಮ್ ಮೊಹಮ್ಮದ್ ಅವರ ಕರಾರುವಾಕ್ ಗುರಿ ಇಡೀ ದೇಶ ಹೆಮ್ಮೆಪಡುವಂತೆ ಮಾಡಿದೆ. ಮತ್ತೊಂದೆಡೆ, ಕೊರಿಯಾ ತಂಡದಲ್ಲಿ ಹಾಲಿ ವಿಶ್ವ ಚಾಂಪಿಯನ್ ಕಾಂಗ್ ಚೇ-ಯಂಗ್ ಸೇರಿದಂತೆ ಲೀ ಯುನ್ಜಿ ಮತ್ತು ಓ ಯೆಜಿನ್ ಅವರಂತಹ ದಿಗ್ಗದ ಆಟಗಾರ್ತಿಯರಿದ್ದರೂ ಭಾರತೀಯ ವನಿತೆಯರು ಜಯಭೇರಿ ಬಾರಿಸಿದ್ದಾರೆ.
ಮೊದಲ ಎರಡು ಸೆಟ್‌ಗಳಲ್ಲಿ ಎರಡೂ ತಂಡಗಳು ತೀವ್ರ ಪೈಪೋಟಿ ನಡೆಸಿದವು. ಮೊದಲ ಸೆಟ್‌ನಲ್ಲಿ 54-54 ಮತ್ತು ಎರಡನೇ ಸೆಟ್‌ನಲ್ಲಿ 56-56 ಅಂಕಗಳನ್ನು ಗಳಿಸುವ ಮೂಲಕ ಅಂಕಗಳನ್ನು ಹಂಚಿಕೊಂಡವು. ನಿರ್ಣಾಯಕ ಮೂರನೇ ಸೆಟ್‌ನಲ್ಲಿ ಕೊರಿಯಾ ಆಟಗಾರ್ತಿಯರು ಒತ್ತಡಕ್ಕೆ ಸಿಲುಕಿದರು. ಸತತವಾಗಿ ಮೂರು ಬಾರಿ ಕೇವಲ 8 ಅಂಕಗಳನ್ನು ಮಾತ್ರ ಗಳಿಸಿ ಒಟ್ಟು 52 ಅಂಕಗಳಿಗೆ ಕುಸಿದರೆ, ಭಾರತೀಯ ಬಿಲ್ಲುಗಾರರು ಅತ್ಯುತ್ತಮ ಪ್ರದರ್ಶನ ನೀಡಿ 55 ಅಂಕಗಳನ್ನು ಕಲೆಹಾಕಿ ಸೆಟ್ ಅನ್ನು ತಮ್ಮದಾಗಿಸಿಕೊಂಡರು. ನಾಲ್ಕನೇ ಸೆಟ್‌ನಲ್ಲಿ ಕೊರಿಯಾ 54 ಅಂಕಗಳನ್ನು ಗಳಿಸಿತು. ಭಾರತದ ಮೊತ್ತವೂ 54ಕ್ಕೆ ತಲುಪಿ ಸ್ಕೋರ್ ಸಮಬಲವಾಯಿತು. ಈ ಸಮಬಲದೊಂದಿಗೆ ಭಾರತವು ಅಧಿಕೃತವಾಗಿ ಚಿನ್ನದ ಪದಕವನ್ನು ತನ್ನದಾಗಿಸಿಕೊಂಡಿತು.
ಈ ಐತಿಹಾಸಿಕ ಚಿನ್ನದ ಪದಕದೊಂದಿಗೆ ಏಷ್ಯನ್ ಕ್ರೀಡಾಕೂಟದಲ್ಲಿ ಭಾರತದ ಒಟ್ಟು ಪದಕಗಳ ಸಂಖ್ಯೆ ಭರ್ಜರಿ 67 ಕ್ಕೆ ಏರಿಕೆಯಾಗಿದೆ. ಇದರಲ್ಲಿ 11 ಚಿನ್ನ, 23 ಬೆಳ್ಳಿ ಮತ್ತು 33 ಕಂಚಿನ ಪದಕಗಳು ಸೇರಿವೆ. ಫೈನಲ್‌ಗೂ ಮುನ್ನ ಒಕಾಜಾಕಿ ಚುವೊ ಸೊಗೊ ಪಾರ್ಕ್‌ನಲ್ಲಿ ನಡೆದ ಸೆಮಿಫೈನಲ್ ಪಂದ್ಯದಲ್ಲಿ ಭಾರತವು ಚೀನಾ ತಂಡವನ್ನು 5-1 ಅಂತರದಿಂದ ಸದೆಬಡಿದು ಫೈನಲ್‌ಗೆ ಲಗ್ಗೆ ಇಟ್ಟಿತ್ತು. ಹ್ಯಾಂಗ್‌ಝೌನಲ್ಲಿ ನಡೆದ 2023ರ ಏಷ್ಯನ್ ಗೇಮ್ಸ್‌ನಲ್ಲಿ ಭಾರತದ ಮಹಿಳಾ ಕಾಂಪೌಂಡ್ ತಂಡವು ಕಂಚಿನ ಪದಕ ಗೆದ್ದುಕೊಂಡಿದ್ದರೆ, ಈ ಬಾರಿ ರಿಕರ್ವ್ ವಿಭಾಗದಲ್ಲಿ ನೇರವಾಗಿ ಬಂಗಾರದ ಪದಕ ಗೆದ್ದು ಹೊಸ ದಾಖಲೆ ನಿರ್ಮಿಸಿದೆ, (ಏಜೆನ್ಸೀಸ್).