ಏಷ್ಯನ್ ಪ್ಯಾರಾ ಗೇಮ್ಸ್​ನಲ್ಲಿ ಆಯುಷ್‌, ಪ್ರವೀಣ್​ಗೆ ಚಿನ್ನ, ಶೀತಲ್-ಪಾಯಲ್ ಜೋಡಿಗೆ ಬೆಳ್ಳಿ ಪದಕ | Asian Para Games  
ಏಷ್ಯನ್​ ಗೇಮ್ಸ್

ಏಷ್ಯನ್ ಪ್ಯಾರಾ ಗೇಮ್ಸ್​ನಲ್ಲಿ ಆಯುಷ್‌, ಪ್ರವೀಣ್​ಗೆ ಚಿನ್ನ, ಶೀತಲ್-ಪಾಯಲ್ ಜೋಡಿಗೆ ಬೆಳ್ಳಿ ಪದಕ | Asian Para Games

ಮಂಗಳವಾರದ (ದಿನ 2) ಕೊನೆಯಲ್ಲಿ 9 ಚಿನ್ನ, 11 ಬೆಳ್ಳಿ ಹಾಗೂ 15 ಕಂಚಿನ ಪದಕಗಳೊಂದಿಗೆ ಒಟ್ಟು 35 ಪದಕಗಳನ್ನು ಗೆದ್ದು 6ನೇ ಸ್ಥಾನದಲ್ಲಿದ್ದ ಭಾರತ, ಬುಧವಾರದ ಮೂರನೇ ದಿನದ ಆರಂಭದಲ್ಲೇ ಎರಡು ಗೋಲ್ಡ್​ ಮತ್ತು ಒಂದು ಬೆಳ್ಳಿ ಪದಕವನ್ನು ಬಾಚಿಕೊಂಡಿದೆ.

Asian Para Games: ಪ್ರಸಕ್ತ ಆತಿಥೇಯ ಜಪಾನ್​ನಲ್ಲಿ ನಡೆಯುತ್ತಿರುವ ಏಷ್ಯನ್ ಪ್ಯಾರಾ ಗೇಮ್ಸ್‌ನಲ್ಲಿ ಭಾರತದ ಅಥ್ಲೀಟ್‌ಗಳು ಭರ್ಜರಿ ಮೇಲುಗೈ ಸಾಧಿಸುತ್ತಿದ್ದಾರೆ ಎಂಬುದಕ್ಕೆ ಎರಡು ಬ್ಯಾಕ್​ ಟು ಬ್ಯಾಕ್​ ಸ್ವರ್ಣ ಮತ್ತು ಬೆಳ್ಳಿ ಪದಕಗಳ ಬೇಟೆಯೇ ಸಾಕ್ಷಿ. ತಮ್ಮ ಅದ್ಭುತ ಪ್ರದರ್ಶನದ ಮೂಲಕ ಭಾರತೀಯ ಕ್ರೀಡಾಪಟುಗಳು ಇದೀಗ ಭಾರತದ ಒಟ್ಟು ಪದಕಗಳ ಬೇಟೆಯನ್ನು 35ರ ಗಡಿದಾಟಿಸಿದ್ದಾರೆ.

ಮಂಗಳವಾರದ (ದಿನ 2) ಕೊನೆಯಲ್ಲಿ 9 ಚಿನ್ನ, 11 ಬೆಳ್ಳಿ ಹಾಗೂ 15 ಕಂಚಿನ ಪದಕಗಳೊಂದಿಗೆ ಒಟ್ಟು 35 ಪದಕಗಳನ್ನು ಗೆದ್ದು 6ನೇ ಸ್ಥಾನದಲ್ಲಿದ್ದ ಭಾರತ, ಬುಧವಾರದ ಮೂರನೇ ದಿನದ ಆರಂಭದಲ್ಲೇ ಎರಡು ಗೋಲ್ಡ್​ ಮತ್ತು ಒಂದು ಬೆಳ್ಳಿ ಪದಕವನ್ನು ಬಾಚಿಕೊಂಡಿದೆ. ಶಾಟ್​ ಪುಟ್​ನಲ್ಲಿ ಆಯುಷ್​ ವರ್ಮಾ, ಹೈಜಂಪ್​ನಲ್ಲಿ ಪ್ರವೀಣ್​ ಕುಮಾರ್​ ಚಿನ್ನಕ್ಕೆ ಮುತ್ತಿಟ್ಟಿದ್ದಾರೆ. ಇನ್ನು, ಬಿಲ್ಲುಗಾರಿಕೆಯಲ್ಲಿ ಶೀತಲ್ - ಪಾಯಲ್ ಜೋಡಿ ಬೆಳ್ಳಿ ಗೆದ್ದಿದ್ದಾರೆ.

ಬುಧವಾರದ ಆರಂಭಿಕ ಪಂದ್ಯದಲ್ಲಿ ಭಾರತದ ಬಿಲ್ಲುಗಾರ್ತಿಯರಾದ ಶೀತಲ್ ದೇವಿ ಮತ್ತು ಪಾಯಲ್ ನಾಗ್ ಜೋಡಿಯು ಮಹಿಳೆಯರ ಡಬಲ್ಸ್ ಫೈನಲ್‌ನಲ್ಲಿ ಬೆಳ್ಳಿ ಪದಕಕ್ಕೆ ಕೊರಳೊಡ್ಡಿದರು. ಚೀನಾದ ಜಾವೋ ಜಿಂಗ್ ಮತ್ತು ಕ್ಷು ಕ್ಸುಕಿಂಗ್ ವಿರುದ್ಧ ನಡೆದ ರೋಚಕ ಹೋರಾಟದಲ್ಲಿ ಭಾರತೀಯ ಜೋಡಿ ಎರಡನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು.

ಶಾಟ್‌ಪುಟ್‌ನಲ್ಲಿ ಭಾರತಕ್ಕೆ 10ನೇ ಚಿನ್ನ

ಇದಾದ ಬೆನ್ನಲ್ಲೇ ಕಣಕ್ಕಿಳಿದ ಭಾರತದ ಆಯುಷ್ ವರ್ಮಾ ಅವರು, ಪುರುಷರ ಶಾಟ್‌ಪುಟ್ (F53) ವಿಭಾಗದಲ್ಲಿ ಭರ್ಜರಿ ಪ್ರದರ್ಶನ ನೀಡಿದರು. 8.16 ಮೀಟರ್ ದೂರ ಎಸೆಯುವ ಮೂಲಕ ಪ್ರಥಮ ಸ್ಥಾನ ಪಡೆದು ಭಾರತಕ್ಕೆ ಕೇವಲ ಶಾಟ್​ಪುಟ್​ ವಿಭಾಗದಲ್ಲೇ 10ನೇ ಚಿನ್ನದ ಪದಕವನ್ನು ತಂದುಕೊಟ್ಟಿದ್ದಾರೆ. ಮಂಗಳವಾರ ಜಾವೆಲಿನ್ ಎಸೆತದಲ್ಲಿ ಕಂಚಿನ ಪದಕ ಗೆದ್ದಿದ್ದ ಆಯುಷ್​ಗೆ ಇದು ಕ್ರೀಡಾಕೂಟದ ಎರಡನೇ ಪದಕವಾಗಿದೆ.

ದಾಖಲೆ ಬರೆದ ಪ್ರವೀಣ್ ಕುಮಾರ್

ಏಷ್ಯನ್ ಪ್ಯಾರಾ ಗೇಮ್ಸ್‌ನಲ್ಲಿ ಹೊಸ ದಾಖಲೆಯನ್ನು ನಿರ್ಮಿಸಿದ ಪ್ರವೀಣ್ ಕುಮಾರ್, ಪುರುಷರ ಹೈಜಂಪ್ T64ನಲ್ಲಿ 2.05 ಮೀ ಜಿಗಿತವನ್ನು ದಾಖಲಿಸುವ ಮೂಲಕ ಸ್ವರ್ಣಕ್ಕೆ ಮುತ್ತಿಟ್ಟಿದ್ದಾರೆ. ಅವರ ನಂತರದಲ್ಲಿ, ದೇಶಬಾಂಧವ ಬಾಂಟಿ 1.92 ಮೀ ಜಿಗಿತದೊಂದಿಗೆ ಬೆಳ್ಳಿಯನ್ನು ಪಡೆದಿದ್ದಾರೆ. ಪ್ರಸ್ತುತ ಪ್ಯಾರಾ-ಅಥ್ಲೆಟಿಕ್ಸ್, ಈಜು, ಪವರ್‌ಲಿಫ್ಟಿಂಗ್, ಸೈಕ್ಲಿಂಗ್, ಜುಡೋ, ಬ್ಯಾಡ್ಮಿಂಟನ್ ಮತ್ತು ಟೇಬಲ್ ಟೆನ್ನಿಸ್ ಸೇರಿದಂತೆ ವಿವಿಧ ಕ್ರೀಡೆಗಳಲ್ಲಿ ಭಾರತೀಯ ಸ್ಪರ್ಧಿಗಳು ಪದಕಗಳಿಗಾಗಿ ಭರ್ಜರಿ ಪ್ರದರ್ಶನ ನೀಡುತ್ತಿರುವುದು ಶ್ಲಾಘನೀಯ,(ಏಜೆನ್ಸೀಸ್).