ಏಷ್ಯನ್ ಮಾಸ್ಟರ್ಸ್ ಈಜು ಚಾಂಪಿಯನ್​ಷಿಪ್​ಗೆ ಅದ್ದೂರಿ ಚಾಲನೆ 
ಏಷ್ಯನ್​ ಗೇಮ್ಸ್

ಬೆಂಗಳೂರಿನಲ್ಲಿ ಏಷ್ಯನ್ ಮಾಸ್ಟರ್ಸ್ ಈಜು ಚಾಂಪಿಯನ್​ಷಿಪ್​ಗೆ ಅದ್ದೂರಿ ಚಾಲನೆ

2ನೇ ಏಷ್ಯನ್ ಮಾಸ್ಟರ್ಸ್ ಈಜು ಚಾಂಪಿಯನ್ಶಿಪ್ 2026ಕ್ಕೆ ಬೆಂಗಳೂರಿನಲ್ಲಿ ಭಾನುವಾರ ಉತ್ಸಾಹಭರಿತ ಚಾಲನೆ ದೊರೆಯಿತು.

ಬೆಂಗಳೂರು: 2ನೇ ಏಷ್ಯನ್ ಮಾಸ್ಟರ್ಸ್ ಈಜು ಚಾಂಪಿಯನ್​ಷಿಪ್ 2026ಕ್ಕೆ ಬೆಂಗಳೂರಿನಲ್ಲಿ ಭಾನುವಾರ ಉತ್ಸಾಹಭರಿತ ಚಾಲನೆ ದೊರೆಯಿತು. ಮೊದಲ ದಿನ ವಿವಿಧ ವಯೋಮಾನದ ವಿಭಾಗಗಳಲ್ಲಿ ಸ್ಪರ್ಧಾತ್ಮಕ ಈಜು ಸ್ಪರ್ಧೆಗಳು ನಡೆದವು. ಕರ್ನಾಟಕ ಸರ್ಕಾರದ ಉಪಮುಖ್ಯಮಂತ್ರಿ ಹಾಗೂ ಕ್ರೀಡಾ ಸಚಿವ ಜಿ. ಪರಮೇಶ್ವರ್ ಅವರು ಚಾಂಪಿಯನ್ಶಿಪ್ಗೆ ಆಗಮಿಸಿ, ಸ್ಪರ್ಧೆಯಲ್ಲಿ ಭಾಗವಹಿಸಿದ ಕ್ರೀಡಾಪಟುಗಳನ್ನು ಪ್ರೋತ್ಸಾಹಿಸಿದರು.

ಚಾಂಪಿಯನ್ಶಿಪ್ನ ಮೊದಲ ದಿನ ಪುರುಷರು ಹಾಗೂ ಮಹಿಳೆಯರ ವಿವಿಧ ವಯೋಮಾನದ ವಿಭಾಗಗಳಲ್ಲಿ 50 ಮೀಟರ್ ಬ್ರೆಸ್ಟ್ಸ್ಟ್ರೋಕ್ ಸ್ಪರ್ಧೆಗಳು ನಡೆದವು. ಭಾರತ ಸೇರಿದಂತೆ ಏಷ್ಯಾದ ವಿವಿಧ ರಾಷ್ಟ್ರಗಳ ಈಜುಪಟುಗಳು ಪದಕಗಳಿಗಾಗಿ ತೀವ್ರ ಪೈಪೋಟಿ ನಡೆಸಿದರು.

ಪುರುಷರ ವಿಭಾಗದಲ್ಲಿ 25–29 ವಯೋಮಾನದ ಸ್ಪರ್ಧೆಯಲ್ಲಿ ಜಯ ಪ್ರಕಾಶ್ ಏಕಬೋಟೆ 29.44 ಸೆಕೆಂಡ್ಗಳಲ್ಲಿ ಮೊದಲ ಸ್ಥಾನ ಪಡೆದು ಚಿನ್ನದ ಪದಕ ಗೆದ್ದರು. ಶುಭಂ ಉಪಾಧ್ಯಾಯ (30.12 ಸೆಕೆಂಡ್) ಬೆಳ್ಳಿ ಹಾಗೂ ಯಶ್ ವಿಕಾಸ್ ಬಾಗ್ವೆ (32.10 ಸೆಕೆಂಡ್) ಕಂಚಿನ ಪದಕ ಪಡೆದರು.

40–44 ವಯೋಮಾನದ ವಿಭಾಗದಲ್ಲಿ ಅಂಕಿತ್ ಸೋಮಾನಿ 32.68 ಸೆಕೆಂಡ್ಗಳಲ್ಲಿ ಚಿನ್ನದ ಪದಕ ಗೆದ್ದರೆ, ಶ್ರೀಕಾಂತ್ ಪಾಲಾಂಡೆ 34.68 ಸೆಕೆಂಡ್ಗಳಲ್ಲಿ ಬೆಳ್ಳಿ ಪದಕ ಪಡೆದರು. ಇರಾನ್ನ ಸೆಯ್ಯದ್ ಅಲಿ ಜಹೇದಿ 37.81 ಸೆಕೆಂಡ್ಗಳಲ್ಲಿ ಮೂರನೇ ಸ್ಥಾನ ಪಡೆದರು.

65–69 ವಯೋಮಾನದ ವಿಭಾಗದಲ್ಲಿ ಸುರೇಂದ್ರ ನಾಯಕ್ 47.04 ಸೆಕೆಂಡ್ಗಳಲ್ಲಿ ಚಿನ್ನದ ಪದಕ ಗೆದ್ದರು. ಪುಂಡಲೀಕ ಖಾರ್ವಿ 49.68 ಸೆಕೆಂಡ್ಗಳಲ್ಲಿ ಬೆಳ್ಳಿ ಹಾಗೂ ಚಂದ್ರಶೇಖರನ್ ಟಿ. 50.35 ಸೆಕೆಂಡ್ಗಳಲ್ಲಿ ಕಂಚಿನ ಪದಕ ಪಡೆದರು.

ಮಹಿಳೆಯರ ವಿಭಾಗದಲ್ಲಿ 25–29 ವಯೋಮಾನದ ಸ್ಪರ್ಧೆಯಲ್ಲಿ ಆರತಿ ಬಾಜಿರಾವ್ ಪಾಟೀಲ್ 38.16 ಸೆಕೆಂಡ್ಗಳಲ್ಲಿ ಮೊದಲ ಸ್ಥಾನ ಪಡೆದು ಚಿನ್ನದ ಪದಕ ಗೆದ್ದರು. ಅದಿತಿ ಅವಿನಾಶ್ ನಿಲಂಗೆಕರ್ ಬೆಳ್ಳಿ ಪದಕ ಪಡೆದರೆ, ಥಾಯ್ಲೆಂಡ್ನ ಸಿರಿಮೋನ್ ಕಲಂಪನಂತ್ ಕಂಚಿನ ಪದಕ ಗೆದ್ದರು.

40–44 ವಯೋಮಾನದ ವಿಭಾಗದಲ್ಲಿ ವರುಣಾ ಮಯ್ಯ 45.91 ಸೆಕೆಂಡ್ಗಳಲ್ಲಿ ಚಿನ್ನದ ಪದಕ ಗೆದ್ದರು. ಅನಿಷಾ ಭೀಮ್ಜ್ಯಾನಿ ಹಾಗೂ ಭಾವನಾ ಆನಂದ್ ಕ್ರಮವಾಗಿ ಬೆಳ್ಳಿ ಮತ್ತು ಕಂಚಿನ ಪದಕ ಪಡೆದರು.

65–69 ವಯೋಮಾನದ ಮಹಿಳೆಯರ ವಿಭಾಗದಲ್ಲಿ ಶ್ರೀಲಂಕಾದ ಶಾಲಿನಿ ವಿಕ್ರಮಸೂರ್ಯ 57.00 ಸೆಕೆಂಡ್ಗಳಲ್ಲಿಚಿನ್ನದ ಪದಕ ಗೆದ್ದರು. ಭಾರತದ ಪ್ರಸನ್ನಕುಮಾರಿ ಬೆಳ್ಳಿ ಹಾಗೂ ಸುಮನ್ ಚೌಧರಿ ಕಂಚಿನ ಪದಕ ಪಡೆದರು.

ಅಕ್ಟೋಬರ್ 4ರಿಂದ 10ರವರೆಗೆ ನಡೆಯಲಿರುವ ಈ ಚಾಂಪಿಯನ್ಶಿಪ್ನಲ್ಲಿ ಏಷ್ಯಾದ ವಿವಿಧ ರಾಷ್ಟ್ರಗಳ ಮಾಸ್ಟರ್ಸ್ ಈಜುಪಟುಗಳು ಭಾಗವಹಿಸುತ್ತಿದ್ದಾರೆ. ಕ್ರೀಡಾ ಶ್ರೇಷ್ಠತೆ, ಸಕ್ರಿಯ ಭಾಗವಹಿಸುವಿಕೆ ಹಾಗೂ ಜೀವನಪೂರ್ತಿ ಈಜು ಕ್ರೀಡೆಯೊಂದಿಗೆ ತೊಡಗಿಸಿಕೊಳ್ಳುವ ಮನೋಭಾವವನ್ನು ಸಂಭ್ರಮಿಸುವ ಸ್ಪರ್ಧಾತ್ಮಕ ವೇದಿಕೆಯಾಗಿ ಈ ಚಾಂಪಿಯನ್ಶಿಪ್ ಮೂಡಿಬಂದಿದೆ.