IND vs PAK: ಪ್ರಸಕ್ತ ಆತಿಥೇಯ ಜಪಾನ್ನಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್ ಕ್ರೀಡಾಕೂಟದಲ್ಲಿ ಭಾರತಕ್ಕೆ ಹಲವು ವಿಭಾಗಗಳಲ್ಲಿ ಚಿನ್ನ, ಬೆಳ್ಳಿ ಮತ್ತು ಕಂಚು ಪದಕಗಳ ಸುರಿಮಳೆಯೇ ಹರಿದುಬಂದಿದ್ದು, ಈಗ ಪುರುಷರ ಕ್ರಿಕೆಟ್‌ನಲ್ಲಿ ಚಿನ್ನದ ಪದಕಕ್ಕೆ ನಿರೀಕ್ಷೆಗಳು ದುಪ್ಪಟ್ಟಾಗಿವೆ. ಇಲ್ಲಿ ಗೋಲ್ಡ್ ಮೆಡಲ್ ಮಾತ್ರವಲ್ಲ, ಪಂದ್ಯದ ಮೇಲೂ ಅಷ್ಟೇ ನಿರೀಕ್ಷೆಗಳಿವೆ. ಕಾರಣ, ಎದುರಾಳಿ ಸ್ಥಾನದಲ್ಲಿ ಇರುವುದು ನಮ್ಮ ವೈರಿ ರಾಷ್ಟ್ರ ಪಾಕಿಸ್ತಾನ.
ಇದೇ ಶನಿವಾರ (ಅ.3) ನಡೆಯಲಿರುವ ಏಷ್ಯನ್ ಗೇಮ್ಸ್ ಪುರುಷರ ಕ್ರಿಕೆಟ್ ಅಂತಿಮ ಹಣಾಹಣಿಯಲ್ಲಿ ಶ್ರೇಯಸ್ ಅಯ್ಯರ್ ಪಡೆ, ಚಿನ್ನದ ಪದಕ್ಕಾಗಿ ಪಾಕಿಸ್ತಾನ ಎದುರು ಸೆಣಸಲಿದೆ. ಉಭಯ ತಂಡಗಳ ಅಭಿಮಾನಿಗಳು ಚಿನ್ನದ ಪದಕ ಗೆಲ್ಲಬೇಕೆಂಬ ಆಸೆಯಿದ್ದರೂ ಎಲ್ಲರ ಗಮನ ಈಗ ಮೂಡಿರುವುದು ಪಂದ್ಯದ ಆರಂಭಕ್ಕೂ ಏನಾಗಲಿದೆ ಎಂಬುದರ ಮೇಲೆ. ಅದುವೇ ಹಸ್ತಲಾಘವ. ದಿ ಮೋಸ್ಟ್ ಕಾಂಟ್ರೋವರ್ಶಿಯಲ್ ಹ್ಯಾಂಡ್ಶೇಕ್ ಎಂಬ ಹಳೆಯ ವಿವಾದ.
ಪಹಲ್ಗಾಮ್ ಉಗ್ರ ದಾಳಿಯ ಬಳಿಕ ಟೀಮ್ ಇಂಡಿಯಾ, ಏಷ್ಯಾಕಪ್ ಟ್ರೋಫಿ ಸೇರಿದಂತೆ ಹಲವಾರು ಸಂದರ್ಭಗಳಲ್ಲಿ ಎದುರಾಳಿ ಪಾಕ್ ತಂಡದ ಆಟಗಾರರ ಜತೆ ಯಾವುದೇ ಕ್ರಿಕೆಟ್ ಪಂದ್ಯಗಳಲ್ಲಿಯೂ ಕೈಕುಲುಕಿಲ್ಲ. ಇದು ದೊಡ್ಡ ಮಟ್ಟದಲ್ಲಿ ವಿವಾದ ಸೃಷ್ಟಿಸಿದರೂ ಭಾರತ ಮಾತ್ರ ಇಂದಿಗೂ ಹ್ಯಾಂಡ್ಶೇಕ್ಗೆ ಒಪ್ಪಿಲ್ಲ. ಇದು ಇತ್ತೀಚಿನ ಏಷ್ಯನ್ ಗೇಮ್ಸ್ ಮಹಿಳೆಯರ ವಿಭಾಗದಲ್ಲಿ ರಿಪೀಟ್ ಆಗಿದೆ. ಸನಾ ಪಡೆಯೊಂದಿಗೆ ಹರ್ಮನ್ ಪಡೆ ಹಸ್ತಲಾಘವ ಮಾಡದೆ, ತಮ್ಮ ಪಾಡಿಗೆ ಪಂದ್ಯ ಮುಗಿದ ಕೂಡಲೇ ಡ್ರೆಸ್ಸಿಂಗ್ ರೂಮ್ಗೆ ಮರಳಿದರು. ಈಗ ಶ್ರೇಯಸ್ ತಂಡವು ಇದನ್ನೇ ಮಾಡಲಿದೆಯಾ ಅಥವಾ ಏಷ್ಯನ್ ಗೇಮ್ಸ್ನಲ್ಲಿ ನಿಯಮ ಏನಾದರೂ ಬೇರೆ ಹೇಳಲಿದ್ಯಾ ಎಂಬ ಪ್ರಶ್ನೆಗಳು ಕಾಡಲಾರಂಭಿಸಿದೆ.
ಈ ಪಂದ್ಯದಲ್ಲಿ ಯಾರೇ ಗೆದ್ದರೂ ಎರಡೂ ತಂಡಗಳು ಕೊನೆಯಲ್ಲಿ ಪೋಡಿಯಂನಲ್ಲಿ ವೇದಿಕೆ ಹಂಚಿಕೊಳ್ಳಬೇಕಿದೆ. ಈ ಪಂದ್ಯಕ್ಕೆ, ಐಸಿಸಿ ಅಧ್ಯಕ್ಷ ಜಯ್ ಶಾ ಮತ್ತು ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ ಇರಲಿದ್ದಾರೆ ಎಂದು ವರದಿಯಾಗಿದೆ. ಮತ್ತೊಂದು ಸಂಗತಿ ಎಂದರೆ, ಈ ಪಂದ್ಯಕ್ಕೆ ಮಳೆ ಅಡ್ಡಿಯಾದರೆ ಸ್ವರ್ಣ ಯಾರ ಮುಡಿಗೆ ಎಂಬ ಪ್ರಶ್ನೆಗಳು ಸಹ ಕ್ರಿಕೆಟ್ ಅಭಿಮಾನಿಗಳಲ್ಲಿ ಕಾಡತೊಡಗಿದೆ,(ಏಜೆನ್ಸೀಸ್).