ಯಶ್​ವೀರ್​, ರೋಹಿತ್ ಯಾದವ್ ಏಜೆನ್ಸಿ
ಕ್ರೀಡೆ

ASIAN GAMES: ಅಥ್ಲೆಟಿಕ್ಸ್​ನಲ್ಲಿ ಭಾರತ ಪದಕಗಳ ಸಿಕ್ಸರ್​!

ಸೋಮವಾರ ಒಂದೇ ದಿನ ಭಾರತ 4 ಬೆಳ್ಳಿ, 4 ಕಂಚಿನ ಸಹಿತ ಒಟ್ಟು 8 ಪದಕಗಳನ್ನು ಗೆದ್ದುಕೊಂಡಿತು. ಈ ಪೈಕಿ ಅಥ್ಲೆಟಿಕ್ಸ್​ ಒಂದರಲ್ಲೇ 6 ಪದಕಗಳು (3 ಬೆಳ್ಳಿ, 3 ಕಂಚು) ಒಲಿದವು.

ಐಚಿ-ನಗೋಯಾ: ಏಷ್ಯನ್​ ಗೇಮ್ಸ್​ 20ನೇ ಆವೃತ್ತಿಯಲ್ಲಿ ಭಾರತ ಸೋಮವಾರ ಒಂದೇ ದಿನ 4 ಬೆಳ್ಳಿ, 4 ಕಂಚಿನ ಸಹಿತ ಒಟ್ಟು 8 ಪದಕಗಳನ್ನು ಗೆದ್ದುಕೊಂಡಿತು. ಈ ಪೈಕಿ ಅಥ್ಲೆಟಿಕ್ಸ್​ ಒಂದರಲ್ಲೇ 6 ಪದಕಗಳು (3 ಬೆಳ್ಳಿ, 3 ಕಂಚು) ಒಲಿದವು. ಇದರಿಂದ ಭಾರತ ಈಗ 4 ಚಿನ್ನ, 20 ಬೆಳ್ಳಿ, 21 ಕಂಚಿನ ಸಹಿತ ಒಟ್ಟು 45 ಪದಕಗಳೊಂದಿಗೆ ಪದಕಪಟ್ಟಿಯಲ್ಲಿ 12ನೇ ಸ್ಥಾನ ಕಾಯ್ದುಕೊಂಡಿದೆ. ಜತೆಗೆ ಬಾಕ್ಸಿಂಗ್​ನಲ್ಲಿ ಒಟ್ಟು 6 ಪದಕ ಖಚಿತಗೊಂಡಿವೆ.

ರಜತ ವಿಜೇತ ಯಶ್​ವೀರ್​ ಸಿಂಗ್ ಮತ್ತು ಕಂಚು ವಿಜೇತ ರೋಹಿತ್ ಯಾದವ್​

ಜಾವೆಲಿನ್​ನಲ್ಲಿ ಡಬಲ್​ ಪೋಡಿಯಂ ಫಿನಿಶ್​

ಒಲಿಂಪಿಕ್ಸ್​ ಅವಳಿ ಪದಕ ವಿಜೇತ ನೀರಜ್​ ಚೋಪ್ರಾ ಗೈರಿನ ನಡುವೆಯೂ ಭಾರತ ತಂಡ ಪುರುಷರ ಜಾವೆಲಿನ್​ ಥ್ರೋ ಸ್ಪರ್ಧೆಯಲ್ಲಿ ಅವಳಿ ಪೋಡಿಯಂ ಫಿನಿಶ್​ ಕಂಡಿದೆ. ನಿರೀಕ್ಷೆಯಂತೆಯೇ ಶ್ರೀಲಂಕಾದ ಹೊಸ ತಾರೆ ರುಮೇಶ್​ ಪಥಿರಗೆ 88.33 ಮೀ. ಎಸೆತದೊಂದಿಗೆ ಚಿನ್ನದ ಪದಕ ಬಾಚಿಕೊಂಡರೆ, ಹರಿಯಾಣದ 24 ವರ್ಷದ ಯಶ್​ವೀರ್​ ಸಿಂಗ್​ ಜೀವನಶ್ರೇಷ್ಠ 85.72 ಮೀ. ಎಸೆತದೊಂದಿಗೆ ಬೆಳ್ಳಿ ಜಯಿಸಿದರು. ಉತ್ತರ ಪ್ರದೇಶದ 25 ವರ್ಷದ ರೋಹಿತ್​ ಯಾದವ್​ 84.35 ಮೀ. ಎಸೆತದೊಂದಿಗೆ ಕಂಚಿನ ಪದಕ ಗೆದ್ದುಕೊಂಡರು. ಬೆಳ್ಳಿ ಪದಕಕ್ಕೆ ಭಾರತೀಯರ ನಡುವೆಯೇ ಪೈಪೋಟಿ ಏರ್ಪಟ್ಟಿತು. ಮೊದಲ 3 ಎಸೆತಗಳ ಬಳಿಕ ರೋಹಿತ್​ ಮುಂದಿದ್ದರೆ, 4ನೇ ಎಸೆತದ ನಂತರ ಯಶ್​ವೀರ್​ ಮೇಲುಗೈ ಸಾಧಿಸಿದರು. ಒಲಿಂಪಿಕ್ಸ್​ ಚಾಂಪಿಯನ್​ ಪಾಕಿಸ್ತಾನದ ಅರ್ಷದ್​ ನದೀಂ (80.29 ಮೀ.) 4ನೇ ಸ್ಥಾನದೊಂದಿಗೆ ನಿರಾಸೆ ಅನುಭವಿಸಿದರು.

ಮುರಳಿ ಶ್ರೀಶಂಕರ್​

ಮುರಳಿ ಶ್ರೀಶಂಕರ್​ ರಜತ ಜಿಗಿತ

ಕೇರಳದ ಮುರಳಿ ಶ್ರೀಶಂಕರ್​ ಪುರುಷರ ಲಾಂಗ್​ಜಂಪ್​ನಲ್ಲಿ ಸತತ 2ನೇ ಬಾರಿ ರಜತ ಪದಕ ಗೆದ್ದುಕೊಂಡರು. 27 ವರ್ಷದ ಅವರು 8.07 ಮೀ. ದೂರ ಜಿಗಿತದೊಂದಿಗೆ 2ನೇ ಸ್ಥಾನ ಗಳಿಸಿದರೆ, ಚೀನಾದ ಶಿ ಯುಹಾವೊ 8.17 ಮೀ. ಜಿಗಿದು ಚಿನ್ನಕ್ಕೆ ಕೊರಳೊಡ್ಡಿದರು. ಮುರಳಿ ಶ್ರೀಶಂಕರ್​ 2023ರ ಆವೃತ್ತಿಯಲ್ಲೂ ರಜತ ಗೆದ್ದಿದ್ದರು. ಜತೆಗೆ ಕಳೆದ ಕಾಮನ್ವೆಲ್ತ್​ ಗೇಮ್ಸ್​ನಲ್ಲೂ ಬೆಳ್ಳಿ ಜಯಿಸಿದ್ದರು. ಮಾಜಿ ಟ್ರಿಪಲ್​ ಜಂಪರ್​ ಆಗಿರುವ ತಂದೆ ಎಸ್​. ಮುರಳಿ ಅವರಿಂದಲೇ ತರಬೇತಿ ಪಡೆದಿರುವ ಶ್ರೀಶಂಕರ್​, 4ನೇ ಜಿಗಿತದ ವೇಳೆ ಪಾದಕ್ಕೆ ಗಾಯ ಮಾಡಿಕೊಂಡರು. ಹೀಗಾಗಿ ಅವರು ಕೊನೇ 2 ಪ್ರಯತ್ನಗಳಿಗೆ ಕೈಹಾಕಲಿಲ್ಲ. ಇದರಿಂದ ಚಿನ್ನ ಗೆಲ್ಲುವ ಅವಕಾಶ ತಪ್ಪಿತು.

ಗುಲ್​ವೀರ್​ ಪದಕ ಗೆಲುವಿನ ಸಂಭ್ರಮ

ಗುಲ್​ವೀರ್​ಗೆ ರಜತ ಹಾರ

ಭಾರತೀಯ ಸೇನೆಯಲ್ಲಿ ನೈಬ್​ ಸುಬೇದಾರ್​ ಆಗಿರುವ ಉತ್ತರ ಪ್ರದೇಶದ ದೂರ ಅಂತರ ಓಟಗಾರ ಗುಲ್​ವೀರ್​ ಸಿಂಗ್​ ಹಾಲಿ ಏಷ್ಯಾಡ್​ನಲ್ಲಿ 2ನೇ ರಜತ ಪದಕ ಸಾಧನೆ ಮಾಡಿದ್ದಾರೆ. 10 ಸಾವಿರ ಮೀ. ಓಟದ ಬಳಿಕ ಸೋಮವಾರ ನಡೆದ ಪುರುಷರ 1,500 ಮೀ. ಓಟದ ಫೈನಲ್​ನಲ್ಲೂ ಅವರು ರಜತ ಪದಕ ಗೆದ್ದುಕೊಂಡರು. ಅವರು ಜೀವನಶ್ರೇಷ್ಠ 3 ನಿಮಿಷ, 36.72 ಸೆಕೆಂಡ್​ಗಳಲ್ಲಿ ಸ್ಪರ್ಧೆ ಮುಗಿಸುವ ಮೂಲಕ ಸತತ 2ನೇ ರಜತ ಒಲಿಸಿಕೊಂಡರು. ಜಪಾನ್​ನ ಕಜುಟೊ ಲಿಜಾವಾ (3ನಿ,36.35ಸೆ) ಚಿನ್ನ ಗೆದ್ದರು. ಸ್ಪರ್ಧೆಯಲ್ಲಿದ್ದ ಮತ್ತೋರ್ವ ಭಾರತೀಯ ಯೂನಸ್​ ಶಾ (3ನಿ,43.88ಸೆ) 9ನೇ ಸ್ಥಾನಕ್ಕೆ ತೃಪ್ತಿಪಟ್ಟರು. 28 ವರ್ಷದ ಗುಲ್​ವೀರ್​ ಮಂಗಳವಾರ 5 ಸಾವಿರ ಮೀ. ಓಟದಲ್ಲೂ ಸ್ಪರ್ಧಿಸಲಿದ್ದಾರೆ. ಅವರು ಕಳೆದ ಕಾಮನ್ವೆಲ್ತ್​ ಗೇಮ್ಸ್​ನಲ್ಲಿ 1 ಬೆಳ್ಳಿ, 1 ಕಂಚು ಜಯಿಸಿದ್ದರು. 2023ರ ಏಷ್ಯಾಡ್​ನಲ್ಲಿ 10 ಸಾವಿರ ಮೀ. ಓಟದಲ್ಲಿ ಕಂಚು ಗೆದ್ದಿದ್ದರು.

ಪಾರುಲ್ ಚೌಧರಿ

ಪಾರುಲ್​ಗೆ 2ನೇ ಕಂಚು

ಉತ್ತರ ಪ್ರದೇಶದ ಅನುಭವಿ ಓಟಗಾರ್ತಿ ಪಾರುಲ್​ ಚೌಧರಿ ಸತತ 2ನೇ ದಿನ ಕಂಚಿನ ಪದಕ ಒಲಿಸಿಕೊಂಡರು. ಭಾನುವಾರವಷ್ಟೇ ಮಹಿಳೆಯರ ಸ್ಟೀಪಲ್​ಚೇಸ್​ನಲ್ಲಿ ಕಂಚು ಗೆದ್ದಿದ್ದ ಅವರು, ಸೋಮವಾರ 5 ಸಾವಿರ ಮೀ. ಓಟದಲ್ಲೂ ಇದೇ ಸಾಧನೆ ಮರುಕಳಿಸಿದರು. 31 ವರ್ಷದ ಪಾರುಲ್​ 15 ನಿಮಿಷ, 14.61 ಸೆಕೆಂಡ್​ಗಳಲ್ಲಿ ಸ್ಪರ್ಧೆ ಮುಗಿಸಿದರು. ಅವರು 2023ರ ಆವೃತ್ತಿಯಲ್ಲಿ ಇದೇ ಸ್ಪರ್ಧೆಯಲ್ಲಿ ಚಿನ್ನದ ಪದಕ ಜಯಿಸಿದ್ದರು. ಸ್ಪರ್ಧೆಯಲ್ಲಿದ್ದ ಇನ್ನೋರ್ವ ಭಾರತೀಯರಾದ ಸೀಮಾ (15 ನಿ, 35.06ಸೆ) 6ನೇ ಸ್ಥಾನಕ್ಕೆ ತೃಪ್ತಿಪಟ್ಟರು.

ವಿದ್ಯಾ ರಾಮರಾಜ್​

ಪಿಟಿ ಉಷಾ ದಾಖಲೆ ಮುರಿದ ವಿದ್ಯಾ

ತಮಿಳುನಾಡಿನ ವಿದ್ಯಾ ರಾಮರಾಜ್​ ಮಹಿಳೆಯರ 400 ಮೀ. ಹರ್ಡಲ್ಸ್​ನಲ್ಲಿ ಕಂಚಿನ ಪದಕಕ್ಕೆ ಮುತ್ತಿಟ್ಟರು. 28 ವರ್ಷದ ವಿದ್ಯಾ ಜೀವನಶ್ರೇಷ್ಠ 54.75 ಸೆಕೆಂಡ್​ಗಳಲ್ಲಿ ಸ್ಪರ್ಧೆ ಮುಗಿಸಿದರು. ಈ ಮೂಲಕ ಅಥ್ಲೆಟಿಕ್ಸ್​ ದಿಗ್ಗಜರಾದ ಪಿ.ಟಿ. ಉಷಾ ಅವರ ಹೆಸರಿನಲ್ಲಿದ್ದ ಸುಮಾರು 4 ದಶಕ ಹಳೆಯ ರಾಷ್ಟ್ರೀಯ ದಾಖಲೆ ಮುರಿದರು. ಯುಎಇಯ ಮರಿಯಮ್​ ಕರೀಮ್​ (54.31 ಸೆ) ಚಿನ್ನ ಮತ್ತು ಕಜಾಕ್​ಸ್ತಾನದ ಅಡೆಲಿನಾ ಜೆಮ್ಸ್​ (54.58ಸೆ) ಬೆಳ್ಳಿ ಜಯಿಸಿದರು. ಸ್ಪರ್ಧೆಯಲ್ಲಿದ್ದ ಇನ್ನೋರ್ವ ಭಾರತೀಯರಾದ ಅನು ರಾವನ್​ (55.88ಸೆ) 5ನೇ ಸ್ಥಾನಕ್ಕೆ ತೃಪ್ತಿಪಟ್ಟರು. ಪಿಟಿ ಉಷಾ 1984ರ ಲಾಸ್​ ಏಂಜಲೀಸ್​ ಒಲಿಂಪಿಕ್ಸ್​ನಲ್ಲಿ 55.42 ಸೆಕೆಂಡ್​ಗಳಲ್ಲಿ ಓಡಿದ್ದು, ಇದುವರೆಗಿನ ರಾಷ್ಟ್ರೀಯ ದಾಖಲೆಯಾಗಿತ್ತು. ಭಾರತೀಯ ಒಲಿಂಪಿಕ್ಸ್​ ಸಂಸ್ಥೆ ಹಾಲಿ ಅಧ್ಯಕ್ಷಯಾಗಿರುವ ಪಿಟಿ ಉಷಾ, ವಿದ್ಯಾ ದಾಖಲೆಗೆ ಸಾಯಾಗಿದ್ದರು. ವಿದ್ಯಾಗೆ ಇದು ಕೂಟದ 2ನೇ ಪದಕ ಗೆಲುವಾಗಿದೆ. ಇದಕ್ಕೆ ಮುನ್ನ 4/400 ಮೀ. ಮಿಶ್ರ ರಿಲೇ ತಂಡದ ಭಾಗವಾಗಿ ಬೆಳ್ಳಿ ಜಯಿಸಿದ್ದರು.