ಕ್ರೀಡೆ

ಪದಕ ನಿರೀಕ್ಷೆಯಲ್ಲಿ ಭಾರತ ಟೆನಿಸ್ ತಂಡ : ಕನ್ನಡಿಗ ರೋಹನ್ ಬೋಪಣ್ಣ ಜೋಡಿಗೆ ಅಗ್ರ ಶ್ರೇಯಾಂಕ

ಹಾಂಗ್ ರೆೌ: ಏಷ್ಯನ್ ಗೇಮ್ಸ್‌ನ ಕಳೆದ ಮೂರು ಆವೃತ್ತಿಯ ಪುರುಷರ ಸಿಂಗಲ್ಸ್ನಲ್ಲಿ ಪದಕ ಸಾಧನೆ ಮಾಡಿರುವ ಭಾರತೀಯ ಟೆನಿಸ್ ಆಟಗಾರರ ಪದಕ ಬೇಟೆಯನ್ನು ವಿಸ್ತರಿಸುವ ಗುರಿ ಹೊಂದಿದ್ದಾರೆ. ವೃತ್ತಿ ಜೀವನದ ಕೊನೇ ಏಷ್ಯನ್ ಗೇಮ್ಸ್ ಆಡಲಿರುವ ಅನುಭವಿ ಹಾಗೂ ಕನ್ನಡಿಗ ರೋಹನ್ ಬೋಪಣ್ಣ ಡಬಲ್ಸ್‌ನಲ್ಲಿ ಅಗ್ರ ಶ್ರೇಯಾಂಕ ಪಡೆದುಕೊಂಡಿದ್ದು, ಸಿಂಗಲ್ಸ್‌ನಲ್ಲಿ ಸುಮಿತ್ ನಗಾಲ್, ಅಂಕಿತಾ ರೈನಾ ಪದಕದ ಭರವಸೆ ಎನಿಸಿದ್ದಾರೆ.

ಏಷ್ಯನ್ ಗೇಮ್ಸ್‌ನಲ್ಲಿ ಉತ್ತಮ ನಿರ್ವಹಣೆ ತೋರಿರುವ ಭಾರತೀಯರು ಕಳೆದ ಮೂರು ಆವೃತ್ತಿಗಳಲ್ಲಿ ಅಗ್ರ-ಮೂರರಲ್ಲಿ ಸ್ಥಾನಗಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಚೀನಾ, ಕೊರಿಯಾ ಹಾಗೂ ಜಪಾನ್ ದೇಶದ ಆಟಗಾರರು ಪೈಪೋಟಿ ನೀಡಲಿದ್ದಾರೆ.

ಪುರುಷರ ಡಬಲ್ಸ್‌ನಲ್ಲಿ ಕಳೆದ ಬಾರಿ ದಿವಿಜ್ ಶರಣ್ ಜತೆಗೂಡಿ ಚಿನ್ನ ಪದಕ ಜಯಿಸಿದ್ದ ರೋಹನ್ ಬೋಪಣ್ಣ ಈ ಬಾರಿ ಯೂಕಿ ಬಾಂಭ್ರಿ ಜತೆಗೆ ಕಣಕ್ಕಿಳಿಯಲಿದ್ದು, ಏಷ್ಯಾಡ್ ಚಾಂಪಿಯನ್ ಪಟ್ಟ ಉಳಿಸಿಕೊಳ್ಳುವ ಗುರಿಯೊಂದಿಗೆ ಟೂರ್ನಿಗೆ ವಿದಾಯ ಹೇಳುವ ಹಂಬಲದಲ್ಲಿದ್ದಾರೆ. ಡಬಲ್ಸ್‌ನಲ್ಲಿ ಭಾರತೀಯ ಜೋಡಿಗೆ ಸುಲಭ ಡ್ರಾ ಲಭಿಸಿದ್ದು, ಇನ್ನೊಂದು ಜೋಡಿ ಎನಿಸಿರುವ ಸಾಕೇತ್ ಮೈನೇನಿ ಮತ್ತು ರಾಮ್‌ಕುಮಾರ್‌ಗೆ ಎರಡನೇ ಶ್ರೇಯಾಂಕ ಲಭಿಸಿದೆ. ಈ ಜೋಡಿ ಚಿನ್ನದ ಪದಕ ಹೋರಾಟದಲ್ಲಿ ಎದುರಾಗುವ ಸಾಧ್ಯತೆ ತಳ್ಳಿಹಾಕುವಂತಿಲ್ಲ. ಬೋಪಣ್ಣ-ಬಾಂಭ್ರಿ ಜೋಡಿಗೆ 8ರ ಘಟ್ಟದಲ್ಲಿ ಪಾಕ್‌ನ ಐಸಾಮ್-ಉಲ್-ಹಕ್ ಖುರೇಷಿ-ಅಕೀಲ್ ಖಾನ್ ಎದುರಾಗುವ ನಿರೀಕ್ಷೆಯಿದೆ. ಸಿಂಗಲ್ಸ್‌ನಲ್ಲಿ ದೇಶದ ಅಗ್ರ ಶ್ರೇಯಾಂಕಿತ ಸುಮಿತ್ ನಗಾಲ್ ಹಾಗೂ ರಾಮ್‌ಕುಮಾರ್ ರಾಮನಾಥನ್ ಕಣದಲ್ಲಿದ್ದು, ಇವರಿಬ್ಬರಿಗೂ ಮೊದಲ ಸುತ್ತಿನಲ್ಲಿ ಬೈ ಲಭಿಸಿದೆ, ಕ್ವಾರ್ಟರ್‌ೈನಲ್‌ನಲ್ಲಿ ಟೂರ್ನಿಯ ಅಗ್ರ ಶ್ರೇಯಾಂಕಿತ, ವಿಶ್ವ ನಂ.60 ಆತಿಥೇಯ ಚೀನಾದ ಝಿಜೆನ್ ಜಾಂಗ್ ಎದುರಾಗುವ ಸಾಧ್ಯತೆಗಳಿವೆ. ವಿಶ್ವ ನಂ.159 ಸುಮಿತ್ ನಗಾಲ್ ಕ್ವಾರ್ಟರ್‌ೈನಲ್ ಹಂತ ದಾಟಿದರೆ ಭಾರತಕ್ಕೆ ಪದಕ ಖಚಿತ ಪಡಿಸಲಿದ್ದಾರೆ.

ಮಹಿಳಾ ಸಿಂಗಲ್ಸ್‌ನಲ್ಲಿ ಕಳೆದ ಬಾರಿ ಕಂಚು ಜಯಿಸಿದ್ದ ಅಂಕಿತಾ ರೈನಾ ಸತತ ಎರಡನೇ ಪದಕ ನಿರೀಕ್ಷೆಯಲ್ಲಿದ್ದು, ಡಬಲ್ಸ್‌ನಲ್ಲಿ ಪ್ರಾರ್ಥನಾ ತಾಂಬ್ರೆ ಜತೆ ಆಡಲಿದ್ದಾರೆ. ಮಿಶ್ರ ಡಬಲ್ಸ್‌ನಲ್ಲಿ ಯೂಕಿ ಬಾಂಭ್ರಿ- ಅಂಕಿತಾ, ರೋಹನ್ ಬೋಪಣ್ಣ-ಋತುಜಾ ಬೋಸ್ಲೆ ಕಣಕ್ಕಿಳಿಯಲಿದ್ದಾರೆ.