ಭಾರತ ಮಹಿಳಾ ಹಾಕಿ ತಂಡ ಏಜೆನ್ಸಿ
ಕ್ರೀಡೆ

ASIAN GAMES: ಸೆಮಿಫೈನಲ್​ಗೇರಿದ ಭಾರತದ ಮಹಿಳಾ ಹಾಕಿ ತಂಡ

ಸಲೀಮಾ ಟೆಟೆ ಪಡೆಗೆ ಸತತ 4ನೇ ಜಯ; ಆತಿಥೇಯ ಜಪಾನ್​ ಎದುರು 3-1 ಗೋಲುಗಳಿಂದ ಗೆಲುವು

ಕಕಮಿಗಹರ: ಭಾರತದ ಮಹಿಳೆಯರ ತಂಡ ಏಷ್ಯಾಡ್​ ಹಾಕಿ ಸ್ಪರ್ಧೆಯಲ್ಲಿ ಸತತ 4ನೇ ಗೆಲುವಿನೊಂದಿಗೆ ಸೆಮಿಫೈನಲ್​ ಪ್ರವೇಶವನ್ನು ಖಚಿತಪಡಿಸಿಕೊಂಡಿದೆ. ಚಿನ್ನದ ಪದಕ ಗೆಲುವಿನೊಂದಿಗೆ 2028ರ ಲಾಸ್​ ಏಂಜಲೀಸ್​ ಒಲಿಂಪಿಕ್ಸ್​ಗೆ ನೇರಅರ್ಹತೆ ಗಳಿಸುವ ಹಂಬಲದಲ್ಲಿರುವ ಸಲೀಮಾ ಟೆಟೆ ಪಡೆ ಶುಕ್ರವಾರ ನಡೆದ ತನ್ನ 4ನೇ ಲೀಗ್​ ಪಂದ್ಯದಲ್ಲಿ ಆತಿಥೇಯ ಜಪಾನ್​ ಎದುರು 3-1 ಗೋಲುಗಳಿಂದ ಗೆಲುವು ದಾಖಲಿಸಿತು. ಈ ಮೂಲಕ ಬಿ ಗುಂಪಿನಲ್ಲಿ 12 ಅಂಕಗಳೊಂದಿಗೆ ಅಗ್ರಸ್ಥಾನ ಭದ್ರಪಡಿಸಿಕೊಂಡಿತು.

ಕಳೆದ 3 ಪಂದ್ಯಗಳಲ್ಲಿ ಬರೋಬ್ಬರಿ 56 ಗೋಲು ಸಿಡಿಸಿದ್ದ ಭಾರತ ಈ ಬಾರಿ ಗೋಲಿನ ಮಳೆ ಹರಿಸದಿದ್ದರೂ, ಪಂದ್ಯದುದ್ದಕ್ಕೂ ಪ್ರಾಬಲ್ಯ ಕಾಯ್ದುಕೊಳ್ಳುವಲ್ಲಿ ಯಶಸ್ವಿಯಾಯಿತು. ಭಾರತ ಪರ ಲಾಲ್ರೆಮ್​ಸಿಯಾಮಿ (5ನೇ ನಿಮಿಷ), ಇಶಿಕಾ ಚೌಧರಿ (30) ಮತ್ತು ನವನೀತ್​ ಕೌರ್​ (36) ತಲಾ ಒಂದು ಗೋಲು ಬಾರಿಸಿದರು. ಜಪಾನ್​ ಪರ ಶಿಹೊ ಕೊಬಯಕವಾ (46) ಏಕೈಕ ಗೋಲು ಗಳಿಸಿದರು.

ಕಳೆದ 3 ಪಂದ್ಯಗಳಲ್ಲಿ 20 ಗೋಲು ಸಿಡಿಸಿ ಮಿಂಚಿದ್ದ ದೀಪಿಕಾ ಸೆಹ್ರಾವತ್​ ಈ ಬಾರಿ ಗೋಲಿನ ಖಾತೆ ತೆರೆಯಲು ವಿಫಲರಾದರು. ಭಾರತ ತಂಡ ತನ್ನ ಕೊನೇ ಲೀಗ್​ ಪಂದ್ಯದಲ್ಲಿ ಭಾನುವಾರ ಸಿಂಗಾಪುರ ತಂಡವನ್ನು ಎದುರಿಸಲಿದೆ.