ಭಾರತದ ಪುರುಷರ ಕಬಡ್ಡಿ ತಂಡ ಏಜೆನ್ಸಿ
ಕ್ರೀಡೆ

ASIAN GAMES: ಫೈನಲ್​ ಪ್ರವೇಶಿಸಿದ ಭಾರತದ ಕಬಡ್ಡಿ ತಂಡಗಳು; ಅವಳಿ ಬಂಗಾರದ ನಿರೀಕ್ಷೆ

ಎರಡೂ ವಿಭಾಗದ ಫೈನಲ್​ನಲ್ಲಿ ಇರಾನ್​ ಎದುರು ಭಾರತ ಸ್ವರ್ಣ ಪದಕಕ್ಕೆ ಹೋರಾಡಲಿದೆ.

ಐಚಿ-ನಗೋಯಾ: ಭಾರತದ ಪುರುಷರ ಮತ್ತು ಮಹಿಳೆಯರ ಕಬಡ್ಡಿ ತಂಡಗಳು ಸ್ವರ್ಣ ಪದಕ ಉಳಿಸಿಕೊಳ್ಳವ ಸನಿಹದಲ್ಲಿದ್ದು, ಏಷ್ಯಾಡ್​ 20ನೇ ಆವೃತ್ತಿಯಲ್ಲಿ ಫೈನಲ್​ ಪ್ರವೇಶಿಸಿವೆ. ಶುಕ್ರವಾರ ನಡೆದ ಪುರುಷರ ಸೆಮಿಫೈನಲ್​ನಲ್ಲಿ ಭಾರತ ತಂಡ 66-28 ಅಂತರದಿಂದ ಥಾಯ್ಲೆಂಡ್​ ಎದುರು ಗೆಲುವು ಸಾಧಿಸಿದರೆ, ಮಹಿಳಾ ತಂಡ ನೇಪಾಳ ವಿರುದ್ಧ 48-24ರಿಂದ ಜಯ ಒಲಿಸಿಕೊಂಡಿತು. ಎರಡೂ ವಿಭಾಗದ ಫೈನಲ್​ನಲ್ಲಿ ಇರಾನ್​ ಎದುರು ಭಾರತ ಸ್ವರ್ಣ ಪದಕಕ್ಕೆ ಹೋರಾಡಲಿದೆ.

1990ರಿಂದ ಪುರುಷರ ಕಬಡ್ಡಿ ಏಷ್ಯನ್​ ಗೇಮ್ಸ್​ನ ಭಾಗವಾಗಿದ್ದು, ಭಾರತ ಇದುವರೆಗೆ ಎಂಟು ಬಾರಿ ಚಿನ್ನದ ಪದಕ ಗೆದ್ದಿದೆ. ಪುರುಷರ ವಿಭಾಗದಲ್ಲಿ ಮೊದಲ ಬಾರಿಗೆ ಸೆಮಿಫೈನಲ್​ ಪ್ರವೇಶಿಸಿದ ಥಾಯ್ಲೆಂಡ್​ ತಂಡ ಕಂಚಿನ ಪದಕ ಜಯಿಸಿದ್ದು, ಕರ್ನಾಟಕದ ರವೀಂದ್ರ ಶೆಟ್ಟಿ ಮುಖ್ಯ ಕೋಚ್​ ಆಗಿದ್ದಾರೆ. ಪ್ರೊ ಕಬಡ್ಡಿ ಲೀಗ್​ನ 9 ಆವೃತ್ತಿಗಳಲ್ಲಿ ಕೋಚ್​ ಆಗಿ ಕಾರ್ಯನಿರ್ವಹಿಸಿರುವ ಅನುಭವವೂ ಇವರಿಗಿದೆ. ಭಾರತ ಮಹಿಳಾ ತಂಡ ಸತತ ಐದನೇ ಆವೃತ್ತಿಯಲ್ಲಿ ಪದಕ ಸುತ್ತಿಗೇರಿದೆ.

ಬಾಕ್ಸಿಂಗ್​: ಪದಕದ ಸನಿಹ ಸಚಿನ್​

ಭಾರತದ ಸಚಿನ್​ ಸಿವಾಚ್​ ಬಾಕ್ಸಿಂಗ್​ ಸ್ಪರ್ಧೆಯ ಪುರುಷರ 60 ಕೆಜಿ ವಿಭಾಗದಲ್ಲಿ ಕ್ವಾರ್ಟರ್​ಫೈನಲ್​ಗೇರಿದ್ದು, ಪದಕ ಖಾತ್ರಿಯಿಂದ ಕೇವಲ ಒಂದು ಗೆಲುವು ದೂರವಿದ್ದಾರೆ. ಮತ್ತೊಂದೆಡೆ ಮಹಿಳೆಯರ 54 ಕೆಜಿ ವಿಭಾಗದಲ್ಲಿ ಕಳೆದ ಆವೃತ್ತಿಯ ಕಂಚು ವಿಜೇತೆ ಪ್ರೀತಿ ಪವಾರ್​ 16ರ ಘಟ್ಟದಲ್ಲೇ ಸೋತು ಹೊರಬಿದ್ದರು. ಮೊದಲ ಸುತ್ತಿನಲ್ಲಿ ಬೈ ಪಡೆದಿದ್ದ ಕಾಮನ್ವೆಲ್ತ್​ ಗೇಮ್ಸ್​ ಸ್ವರ್ಣ ಪದಕ ವಿಜೇತ ಸಚಿನ್​ ಸಿವಾಚ್​ 16ರ ಘಟ್ಟದಲ್ಲಿ ಜೋರ್ಡಾನ್​ನ ಮೊಹಮ್ಮದ್​ ಅದ್ನಾನ್​ ಅಬು ಜಜೆಹ್​ ವಿರುದ್ಧ 4-1ರಿಂದ ಗೆಲುವು ದಾಖಲಿಸಿದರು. ಅವರು ಸೆಮಿಫೈನಲ್​ ಸ್ಥಾನಕ್ಕಾಗಿ ವಿಶ್ವ ಚಾಂಪಿಯನ್​ಷಿಪ್​ ಕಂಚು ವಿಜೇತ ಜಪಾನ್​ನ ಶುನ್​ಸುಕೆ ಕಿಟಮೊಟೊ ವಿರುದ್ಧ ಹೋರಾಡಲಿದ್ದಾರೆ. ಕಾಮನ್ವೆಲ್ತ್​ ಗೇಮ್ಸ್​ನಲ್ಲಿ ಚಿನ್ನ ಗೆದ್ದಿದ್ದ ಪ್ರೀತಿ ಪ್ಯಾರಿಸ್​ ಒಲಿಂಪಿಕ್ಸ್​ ಪದಕ ವಿಜೇತೆ ಹಾಗೂ ಹಾಲಿ ಏಷ್ಯಾಡ್​ ಚಾಂಪಿಯನ್​ ಉತ್ತರ ಕೊರಿಯಾದ ಪಂಗ್​ ಚೊಲ್​ ಎಂ. ವಿರುದ್ಧ 0-5ರಿಂದ ಏಕಪಯ ಸೋಲು ಅನುಭವಿಸಿದರು.

ಸಾತ್ವಿಕ್​-ಚಿರಾಗ್​ ಜೋಡಿಗೆ ಶಾಕ್​

ಹಾಲಿ ಚಾಂಪಿಯನ್​ಗಳಾಗಿ ಕಣಕ್ಕಿಳಿದ ಸಾತ್ವಿಕ್​ ಸಾಯಿರಾಜ್​-ಚಿರಾಗ್​ ಶೆಟ್ಟಿ ಜೋಡಿ ಬ್ಯಾಡ್ಮಿಂಟನ್​ ಪುರುಷರ ಡಬಲ್ಸ್​ ವಿಭಾಗದ ಮೊದಲ ಸುತ್ತಿನಲ್ಲೇ ಸೋತು ಆಘಾತ ಎದುರಿಸಿತು. ಮಾಜಿ ವಿಶ್ವ ನಂ. 1 ಜೋಡಿಗೆ ಥಾಯ್ಲೆಂಡ್​ನ ಪಕ್ಕಪೊನ್​ ತೀರರಸಕುಲ್​-ಪೀರಚೈ ಸುಕ್​ನ್​ ಜೋಡಿ 21-12, 19-21, 14-21 ಗೇಮ್​ಗಳಿಂದ ಸೋಲುಣಿಸಿ ಪದಕ ಕನಸು ಭಗ್ನಗೊಳಿಸಿತು. ಮಿಶ್ರ ಡಬಲ್ಸ್​ ವಿಭಾಗದಲ್ಲಿ ತನಿಷಾ ಕ್ರಾಸ್ಟೋ-ಧ್ರುವ ಕಪಿಲಾ ಜೋಡಿ, ಮಹಿಳಾ ಡಬಲ್ಸ್​ನಲ್ಲಿ ತ್ರೀಸಾ ಜೋಲಿ-ಗಾಯತ್ರಿ ಗೋಪಿಚಂದ್​ ಜೋಡಿ ಶುಭಾರಂಭ ಕಂಡಿದ್ದರೆ, ಉನ್ನತಿ ಹೂಡಾ ಮಹಿಳಾ ಸಿಂಗಲ್ಸ್​ನಲ್ಲಿ 2ನೇ ಸುತ್ತಿಗೇರಿದರು.