ಕ್ರೀಡೆ

ಭಾರತ ಅಥ್ಲೆಟಿಕ್ಸ್ ಸಂಸ್ಥೆ:ಅಧ್ಯಕ್ಷರಾಗಿ ಬಹದ್ದೂರ್ ಸಿಂಗ್ ಸಗೂ ಅವಿರೋಧ ಆಯ್ಕೆ?

ಚಂಡೀಗಢ: ಬೂಸಾನ್ ಏಷ್ಯನ್ ಗೇಮ್ಸ್ ಚಿನ್ನದ ಪದಕ ವಿಜೇತ ಶಾಟ್‌ಪುಟ್ ಪಟು ಬಹದ್ದೂರ್ ಸಿಂಗ್ ಸಗೂ ಭಾರತ ಅಥ್ಲೆಟಿಕ್ಸ್ ಸಂಸ್ಥೆಯ (ಎಎ್ಐ) ನೂತನ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಳ್ಳಲು ಸಜ್ಜಾಗಿದ್ದಾರೆ. ಮಂಗಳವಾರ ನಡೆಯಲಿರುವ ವಾರ್ಷಿಕ ಮಹಾಸಭೆಯಲ್ಲಿ ಅಧ್ಯಕ್ಷ ಸೇರಿ ಎಎ್ಐನ ಎಲ್ಲ ನೂತನ ಪದಾಧಿಕಾರಿಗಳು ಅವಿರೋಧ ಆಯ್ಕೆಯಾಗುವ ನಿರೀಕ್ಷೆ ಇದೆ.

ಚಂಡೀಗಢದಲ್ಲಿ ನಡೆಯಲಿರುವ 2 ದಿನಗಳ ಎಜಿಎಂನಲ್ಲಿ ಮುಂದಿನ ನಾಲ್ಕು ವರ್ಷದ ಅವಧಿಗೆ ಎಎ್ಗೆ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡುವುದು ಮೊದಲ ಅಜೆಂಡಾವಾಗಿದೆ. 2012ರಿಂದಲೂ ಎಎಫ್‌ಐ ಅಧ್ಯಕ್ಷರಾಗಿ ಮೂರು ಅವಧಿಗೆ ಕಾರ್ಯನಿರ್ವಹಿಸಿರುವ 67 ವರ್ಷದ ಆದಿಲ್ ಸುಮರಿವಾಲಾ ರಾಷ್ಟ್ರೀಯ ಕ್ರೀಡಾ ಸಂಹಿತೆಯ ಪ್ರಕಾರ ಈ ಬಾರಿ ಚುನಾವಣೆಯಲ್ಲಿ ಸ್ಪರ್ಧಿಸುವ ಅವಕಾಶ ಕಳೆದುಕೊಂಡಿದ್ದು, ಅವರಿಂದ ತೆರವಾಗಲಿರುವ ಸ್ಥಾನವನ್ನು 51 ವರ್ಷದ ಬಹದ್ದೂರ್ ಸಿಂಗ್ ಸಗೂ ತುಂಬಲಿದ್ದಾರೆ. 2000 ಮತ್ತು 2004ರ ಒಲಿಂಪಿಕ್ಸ್‌ನಲ್ಲಿ ಭಾಗವಹಿಸಿದ್ದ ಪದ್ಮಶ್ರೀ ಪುರಸ್ಕೃತ ಸಗೂ, ಅಧ್ಯಕ್ಷ ಸ್ಥಾನದ ರೇಸ್‌ನಲ್ಲಿರುವ ಏಕೈಕ ಅಭ್ಯರ್ಥಿ ಎನಿಸಿದ್ದಾರೆ.

ವೈಯಕ್ತಿಕ ಕಾರಣಗಳಿಂದ ಮಾಜಿ ಲಾಂಗ್‌ಜಂಪರ್ ಅಂಜು ಬಾಬಿ ಜಾರ್ಜ್ ಅಧ್ಯಕ್ಷೆ ಹುದ್ದೆಯ ರೇಸ್‌ನಿಂದ ಹೊರಗುಳಿದಿದ್ದರೂ, ಉಪಾಧ್ಯಕ್ಷೆಯಾಗಿ 2ನೇ ಅವಧಿಗೆ ಮುಂದುವರಿಯುವ ನಿರೀಕ್ಷೆ ಇದೆ. ಹಾಲಿ ಜಂಟಿ ಕಾರ್ಯದರ್ಶಿಯಾಗಿರುವ ದೆಹಲಿಯ ಸಂದೀಪ್ ಮೆಹ್ತಾ ಎಎಫ್‌ಐನ ನೂತನ ಕಾರ್ಯದರ್ಶಿಯಾಗಿ ಅವಿರೋಧವಾಗಿ ಆಯ್ಕೆಯಾಗಲಿದ್ದಾರೆ ಎನ್ನಲಾಗಿದೆ. 1998ರ ಏಷ್ಯನ್ ಗೇಮ್ಸ್‌ನಲ್ಲಿ 800 ಮೀ ಮತ್ತು 1500 ಮೀ ಚಿನ್ನ ಗೆದ್ದಿದ್ದ ಜ್ಯೋತಿರ್ಮಯಿ ಸಿಕ್ದರ್ ಜಂಟಿ ಕಾರ್ಯದರ್ಶಿ ಮತ್ತು ತೆಲಂಗಾಣದ ಸ್ಟಾನ್ಲಿ ಜೋನ್ಸ್ ಖಜಾಂಚಿ ಸ್ಥಾನದ ರೇಸ್‌ನಲ್ಲಿದ್ದಾರೆ.