ಕರ್ನಾಟಕದ ಎಂಆರ್ ಪೂರ್ವಮ್ಮ ಒಳಗೊಂಡ 4/400 ಮಿಶ್ರ ರಿಲೇ ತಂಡ  
ಕ್ರೀಡೆ

Asian Games 2026: ಮಿಶ್ರ ರಿಲೇಯಲ್ಲಿ ಹ್ಯಾಟ್ರಿಕ್, ರಾಜ್ಯಕ್ಕೆ 3ನೇ ಪದಕ!

ಏಷ್ಯನ್ ಗೇಮ್ಸ್ 20ನೇ ಆವೃತ್ತಿ, ರೋಶಿಬಿನಾಗೆ ಸತತ ಮೂರನೇ ಪದಕ

ಐಚಿ-ನಗೋಯಾ: ಭಾರತೀಯ ಶೂಟರ್‌ಗಳು ಏಷ್ಯನ್ ಗೇಮ್ಸ್ 20ನೇ ಆವೃತ್ತಿಯಲ್ಲಿ ನಿರೀಕ್ಷಿತ ನಿರ್ವಹಣೆ ತೋರುವಲ್ಲಿ ವಿಲವಾಗಿರುವ ನಡುವೆಯೂ ಭಾರತದ ಪದಕ ಬೇಟೆ ಮುಂದುವರಿದಿದೆ. ಕೂಟದ ಐದನೇ ದಿನವಾದ ಗುರುವಾರ ಆರಂಭಗೊಂಡ ಅಥ್ಲೆಟಿಕ್ಸ್‌ನಲ್ಲಿ ಕರ್ನಾಟಕದ ಎಂಆರ್ ಪೂರ್ವಮ್ಮ ಒಳಗೊಂಡ 4/400 ಮಿಶ್ರ ರಿಲೇ ತಂಡ ರಜತ ಪದಕಕ್ಕೆ ಮುತ್ತಿಕ್ಕಿದರೆ, 10 ಸಾವಿರ ಮೀಟರ್ ಓಟದಲ್ಲಿ ಸೀಮಾ ಕುಮಾರಿ ಕಂಚಿನ ಪದಕಕ್ಕೆ ಕೊರಳೊಡ್ಡಿದರು.

ವುಶು ಪಟು ನವೋರೆಮ್ ರೋಶಿಬಿನಾ ದೇವಿ ಬೆಳ್ಳಿ ಜಯಿಸಿದರೆ, ಸ್ಕೀಟ್ ಮಿಶ್ರ ತಂಡ ವಿಭಾಗದಲ್ಲಿ ಅನಂತ್‌ಜೀತ್ ಸಿಂಗ್-ಪರಿನಾಜ್ ಧಲಿವಾಲ್ ಜೋಡಿ, ರೋಯಿಂಗ್ ಸ್ಪರ್ಧೆಯಲ್ಲಿ ಸತ್ನಾಮ್ ಸಿಂಗ್ ಮತ್ತು ಸಲ್ಮಾನ್ ಖಾನ್ ಜೋಡಿ ಕಂಚಿನ ಪದಕಕ್ಕೆ ಕೊರಳೊಡ್ಡಿತು. ಇದರೊಂದಿಗೆ ಕೂಟದಲ್ಲಿ ಭಾರತದ ಪದಕಗಳ ಸಂಖ್ಯೆ 17ಕ್ಕೆ (1 ಚಿನ್ನ, 7 ಬೆಳ್ಳಿ, 9 ಕಂಚು) ಏರಿಕೆ ಕಂಡಿದೆ. ಆದರೆ ಇದುವರೆಗೆ ಒಂದೇ ಚಿನ್ನ ಗೆದ್ದಿರುವುದರಿಂದ ಪದಕಪಟ್ಟಿಯಲ್ಲಿ 15ನೇ ಸ್ಥಾನಕ್ಕೆ ಕುಸಿದಿದೆ. ಕಬಡ್ಡಿ ಪುರುಷರ-ಮಹಿಳಾ ತಂಡಗಳು ಅಜೇಯವಾಗಿ ಸೆಮಿಫೈನಲ್‌ಗೇರಿದ್ದು, ಪದಕ ಖಾತ್ರಿಯೊಂದಿಗೆ ಚಿನ್ನ ನಿರೀಕ್ಷೆ ಹೆಚ್ಚಿಸಿದೆ.

ಮಿಶ್ರ ರಿಲೇಯಲ್ಲಿ ಹ್ಯಾಟ್ರಿಕ್ ಪದಕ ಸಾಧನೆ

ಕನ್ನಡತಿ ಎಂ.ಆರ್. ಪೂವಮ್ಮ ಒಳಗೊಂಡ ಭಾರತದ 4/400 ಮೀ. ಮಿಶ್ರ ರಿಲೇ ತಂಡ ಗುರುವಾರ ನಡೆದ ಫೈನಲ್ ಸ್ಪರ್ಧೆಯಲ್ಲಿ 3 ನಿಮಿಷ, 14.46 ಸೆಕೆಂಡ್‌ಗಳಲ್ಲಿ ಸ್ಪರ್ಧೆ ಮುಗಿಸಿ ರಜತ ಪದಕ ಒಲಿಸಿಕೊಂಡಿತು. ಈ ಮೂಲಕ ಮಿಶ್ರ ರಿಲೇ ತಂಡ ಏಷ್ಯಾಡ್‌ನಲ್ಲಿ ಹ್ಯಾಟ್ರಿಕ್ ಪದಕ ಸಾಧನೆ ಮಾಡಿತು. ಬಹರೇನ್ ತಂಡ ಗೇಮ್ಸ್ ದಾಖಲೆಯೊಂದಿಗೆ (3ನಿ, 12.87ಸೆ) ಚಿನ್ನ ಜಯಿಸಿತು. ಟಿ.ಎಸ್. ಮನು, ವಿಶಾಲ್ ಕೆ.ಟಿ. ಮತ್ತು ವಿದ್ಯಾ ರಾಮರಾಜ್ ಅವರನ್ನೂ ಒಳಗೊಂಡ ಭಾರತ ತಂಡ ಇದಕ್ಕೆ ಮುನ್ನ ಹೀಟ್ಸ್‌ನಲ್ಲಿ 3 ನಿಮಿಷ, 16.23 ಸೆಕೆಂಡ್‌ಗಳಲ್ಲಿ ಓಡಿ, 4ನೇ ಸ್ಥಾನದೊಂದಿಗೆ ಫೈನಲ್‌ಗೇರಿತ್ತು.

ರಾಜ್ಯಕ್ಕೆ 3ನೇ ಪದಕ!

ಕೊಡಗಿನಲ್ಲಿ ಜನಿಸಿ ಮಂಗಳೂರಿನಲ್ಲಿ ಬೆಳೆದ ಎಂಆರ್ ಪೂವಮ್ಮ ರಜತ ಗೆಲುವಿನೊಂದಿಗೆ ಹಾಲಿ ಏಷ್ಯಾಡ್‌ನಲ್ಲಿ ಇದುವರೆಗೆ ಕರ್ನಾಟಕದ 3 ಕ್ರೀಡಾಪಟುಗಳು ಪದಕಕ್ಕೆ ಕೊರಳೊಡ್ಡಿದಂತಾಗಿದೆ. ಈ ಮುನ್ನ ಮಹಿಳಾ ಕ್ರಿಕೆಟ್‌ನಲ್ಲಿ ಶ್ರೇಯಾಂಕಾ ಪಾಟೀಲ್ ಚಿನ್ನ ಮತ್ತು ಬ್ಯಾಡ್ಮಿಂಟನ್ ತಂಡ ಸ್ಪರ್ಧೆಯಲ್ಲಿ ಆಯುಶ್ ಶೆಟ್ಟಿ ಕಂಚು ಜಯಿಸಿದ್ದರು.

ರೋಶಿಬಿನಾಗೆ ಸತತ ಮೂರನೇ ಪದಕ

ಏಷ್ಯನ್ ಗೇಮ್ಸ್ ಭಾರತ ತಂಡಕ್ಕೆ ಬದಲಿ ಕ್ರೀಡಾಪಟುವಾಗಿ ಕೊನೇಕ್ಷಣದಲ್ಲಿ ಸೇರ್ಪಡೆಗೊಂಡ ನವೋರೆಮ್ ರೋಶಿಬಿನಾ ದೇವಿ ಸತತ ಮೂರನೇ ಬಾರಿಗೆ ಏಷ್ಯಾಡ್‌ನಲ್ಲಿ ಪದಕ ಗೆದ್ದುಕೊಂಡರು. ಮಹಿಳೆಯರ 60 ಕೆಜಿ ವುಶು ವಿಭಾಗದ ಫೈನಲ್‌ನಲ್ಲಿ ಚೀನಾದ ಝಾಂಗ್ ಕ್ಸಿಯಾವೊಯು ವಿರುದ್ಧ ಪರಾಭವಗೊಂಡ ರೋಶಿಬಿನಾ ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟರು.

ಫೈನಲ್ ಪಂದ್ಯದಲ್ಲಿ, 25 ವರ್ಷದ ರೋಶಿಬಿನಾ 0-2 ಅಂತರದಿಂದ ಸೋಲನುಭವಿಸಿದರು. ತಲಾ ಎರಡು ನಿಮಿಷಗಳ ಎರಡು ಸುತ್ತುಗಳಲ್ಲಿಯೂ ಐವರು ತೀರ್ಪುಗಾರರು ಚೀನಾದ ಆಟಗಾರ್ತಿಯ ಪರವಾಗಿ ಸರ್ವಾನುಮತದಿಂದ 5-0 ಅಂಕ ನೀಡಿದರು. ಇದರೊಂದಿಗೆ ಕಳೆದ ಆವೃತ್ತಿಯಲ್ಲಿ ಗೆದ್ದ ಪದಕದ ಬಣ್ಣ ಬದಲಾಯಿಸುವಲ್ಲಿ ರೋಶಿಬಿನಾ ವಿಲರಾದರು. 2018ರ ಏಷ್ಯನ್ ಗೇಮ್ಸ್‌ನಲ್ಲಿ ಕಂಚಿನ ಪದಕ ಗೆದ್ದಿದ್ದರು. ಆಯ್ಕೆ ಟ್ರಯಲ್ಸ್‌ನಲ್ಲಿ ದಿವ್ಯಾಂಶಿ ಚೌಧರಿ ಎದುರು ಸೋತಿದ್ದ ರೋಶಿಬಿನಾ, ಕೇಂದ್ರ ಕ್ರೀಡಾ ಸಚಿವಾಲಯ ಅನುಮೋದಿಸಿದ್ದ ಮೊದಲ ಪಟ್ಟಿಯಲ್ಲಿ ಸೇರ್ಪಡೆಯಾಗಿರಲಿಲ್ಲ. ದಿವ್ಯಾಂಶಿ ಗಾಯದ ಸಮಸ್ಯೆ ತುತ್ತಾದ ನಂತರ ಅವರ ಬದಲಿಗೆ ರೋಶಿಬಿನಾ ಕೊನೇ ಕ್ಷಣದಲ್ಲಿ ಜಪಾನ್‌ಗೆ ಪ್ರಯಾಣಿಸಿದ್ದರು.

ಸೀಮಾಗೆ ಕಂಚಿನ ಪದಕ

ಹಿಮಾಚಲ ಪ್ರದೇಶದ ಸೀಮಾ ಕುಮಾರಿ ಮಹಿಳೆಯರ 10 ಸಾವಿರ ಮೀ. ಓಟದಲ್ಲಿ ಕಂಚಿನ ಪದಕ ಜಯಿಸುವ ಮೂಲಕ ಗುರುವಾರ ಆರಂಭಗೊಂಡ ಅಥ್ಲೆಟಿಕ್ಸ್‌ನಲ್ಲಿ ಭಾರತದ ಪದಕದ ಖಾತೆ ತೆರೆದರು. 25 ವರ್ಷದ ಸೀಮಾ 32 ನಿಮಿಷ, 50.05 ಸೆಕೆಂಡ್‌ಗಳಲ್ಲಿ ಸ್ಪರ್ಧೆ ಮುಗಿಸಿದರು.

ಅನಂತ್‌ಜೀತ್-ಪರಿನಾಜ್‌ಗೆ ಕಂಚು

ಅನಂತ್‌ಜೀತ್ ಸಿಂಗ್ ನರುಕ ಹಾಗೂ ಪರಿನಾಜ್ ಧಲಿವಾಲ್ ಸ್ಕೀಟ್ ಮಿಶ್ರ ತಂಡ ವಿಭಾಗದಲ್ಲಿ ಭಾರತಕ್ಕೆ ಕಂಚಿನ ಪದಕ ಗೆದ್ದುಕೊಟ್ಟರು. ಸ್ಕೀಟ್ ಮಿಶ್ರ ತಂಡ ವಿಭಾಗದಲ್ಲಿ ಭಾರತಕ್ಕೆ ಒಲಿದ ಚೊಚ್ಚಲ ಏಷ್ಯಾಡ್ ಪದಕವೂ ಇದಾಗಿದ್ದು, ಎರಡು ದಿನಗಳ ಅಂತರದಲ್ಲಿ ಸ್ಕೀಟ್‌ನ ಮೂರು ವಿಭಾಗಗಳಲ್ಲಿ ಪದಕ ಜಯಿಸಿದಂತಾಗಿದೆ. ಜೋರಾದ ಗಾಳಿಯ ನಡುವೆ ಸವಾಲಿನಿಂದ ಕೂಡಿದ್ದ ಫೈನಲ್‌ನಲ್ಲಿ ಅನಂತ್‌ಜೀತ್ ಹಾಗೂ ಪರಿನಾಜ್ ಜೋಡಿ ಕಠಿಣ ಹೋರಾಟ ನಡೆಸಿತು. ೈನಲ್‌ನಲ್ಲಿ 44 ಅಂಕಗಳಿಸಿದ ಭಾರತ ಮೂರನೇ ಸ್ಥಾನ ಪಡೆದರೆ, ಚೀನಾ ವಿಶ್ವ ದಾಖಲೆಯ 52 ಅಂಕದೊಂದಿಗೆ ಚಿನ್ನ ಜಯಿಸಿತು. ಕೊರಿಯಾ (51) ಬೆಳ್ಳಿ ಪದಕ ಒಲಿಸಿಕೊಂಡಿತು. ಇದಕ್ಕೆ ಮುನ್ನ ಅರ್ಹತಾ ಸುತ್ತಿನಲ್ಲಿ 138 ಅಂಕಗಳಿಸುವ ಮೂಲಕ 4ನೇ ಸ್ಥಾನಿಯಾಗಿ ಅನಂತ್‌ಜೀತ್-ಪರಿನಾಜ್ ಪದಕದ ಸುತ್ತಿಗೇರಿದ್ದರು.