ಹಾಂಗ್‌ರೆೌ: ಲಲಿತ್ ಉಪಾಧ್ಯಾಯ (7, 24, 37, 53ನೇ ನಿಮಿಷ), ವರುಣ್ ಕುಮಾರ್(12, 36, 50, 52ನೇ ನಿಮಿಷ) ಸಿಡಿಸಿದ ತಲಾ 4 ಗೋಲು ಮತ್ತು ಮಂದೀಪ್ ಸಿಂಗ್ (18, 27, 28ನೇ ನಿಮಿಷ) ಹ್ಯಾಟ್ರಿಕ್ ಗೋಲುಗಳ ಬಲದಿಂದ ಭಾರತದ ಪುರುಷರ ಹಾಕಿ ತಂಡ ಉಜ್ಬೇಕಿಸ್ತಾನ ವಿರುದ್ಧದ ಪಂದ್ಯದಲ್ಲಿ 16-0 ಅಂತರದಿಂದ ಗೆಲುವು ದಾಖಲಿಸಿದೆ. ಇದರೊಂದಿಗೆ ಏಷ್ಯಾಡ್‌ನಲ್ಲಿ ಚಿನ್ನ ಗೆದ್ದು, ಪ್ಯಾರಿಸ್ ಒಲಿಂಪಿಕ್ಸ್ ಟಿಕೆಟ್ ಸಂಪಾದಿಸುವ ನಿಟ್ಟಿನಲ್ಲಿ ಶುಭಾರಂಭ ಕಂಡಿದೆ.
ಭಾನುವಾರ ನಡೆದ ಎ ಗುಂಪಿನ ಪಂದ್ಯದಲ್ಲಿ ಗೋಲಿನ ಸುರಿಮಳೆೆ ಹರಿಸಿದ ಏಷ್ಯಾದ ಅಗ್ರ ಶ್ರೇಯಾಂಕಿತ ಭಾರತ ತಂಡಕ್ಕೆ ವಿಶ್ವ ನಂ.66 ಉಜ್ಬೇಕಿಸ್ತಾನ ಸುಲಭ ತುತ್ತಾಯಿತು. ಅಭಿಷೇಕ್ (17), ಅಮಿತ್ ರೋಹಿದಾಸ್ (38), ಸುಖ್‌ಜೀತ್ (42), ಶಂಶೀರ್ ಸಿಂಗ್ (43) ಹಾಗೂ ಸಂಜಯ್ (57) ಗೋಲು ಸಿಡಿಸಿದ ಇತರ ಆಟಗಾರರು. ಉದ್ಘಾಟನಾ ಸಮಾರಂಭದ ಪಥಸಂಚಲನದಲ್ಲಿ ಭಾರತದ ಧ್ವಜಧಾರಿಯಾಗಿದ್ದ ನಾಯಕ ಹರ್ಮಾನ್‌ಪ್ರೀತ್ ಸಿಂಗ್‌ಗೆ ಆರಂಭಿಕ ಪಂದ್ಯದಿಂದ ವಿಶ್ರಾಂತಿ ನೀಡಲಾಗಿತ್ತು. ದುರ್ಬಲ ಉಜ್ಬೇಕಿಸ್ತಾನ ಎದುರು ಸಂಪೂರ್ಣ ಪ್ರಾಬಲ್ಯ ಸಾಧಿಸಿದ ಭಾರತ ತಂಡ ಪಂದ್ಯದಲ್ಲಿ ಒಟ್ಟು 14 ಪೆನಾಲ್ಟಿ ಕಾರ್ನರ್ ಪಡೆದರೂ, 5 ಬಾರಿ ಮಾತ್ರ ಗೋಲು ಗಳಿಸಲು ಯಶಸ್ವಿಯಾಯಿತು. ಒಲಿಂಪಿಕ್ಸ್ ಕಂಚಿನ ಪದಕ ವಿಜೇತ ಭಾರತ ಹಾಕಿ ತಂಡ ಮೊದಲಾರ್ಧದಲ್ಲಿ 7-0 ಮುನ್ನಡೆ ಸಾಧಿಸಿತ್ತು. ಭಾರತ ತನ್ನ ಮುಂದಿನ ಪಂದ್ಯದಲ್ಲಿ ಮಂಗಳವಾರ ಸಿಂಗಾಪುರ ಎದುರು ಆಡಲಿದೆ.