ಭಾರತದ ಪುರುಷರ ಹಾಕಿ ತಂಡ ಏಜೆನ್ಸಿ
ಕ್ರೀಡೆ

ASIAN GAMES: ಭಾರತದ ಪುರುಷರ ಹಾಕಿ ತಂಡಕ್ಕೆ ಹ್ಯಾಟ್ರಿಕ್​ ಜಯ, ಸೆಮೀಸ್​ ಸನಿಹ

ಭರ್ಜರಿ ಫಾರ್ಮ್​ನಲ್ಲಿರುವ ಸ್ಟ್ರೈಕರ್​ ದಿಲ್​ಪ್ರೀತ್​ ಸಿಂಗ್​ (10, 26, 32ನೇ ನಿಮಿಷ) ಹ್ಯಾಟ್ರಿಕ್​ ಗೋಲು

ಕಕಮಿಗಹರ: ಭರ್ಜರಿ ಫಾರ್ಮ್​ನಲ್ಲಿರುವ ಸ್ಟ್ರೈಕರ್​ ದಿಲ್​ಪ್ರೀತ್​ ಸಿಂಗ್​ (10, 26, 32ನೇ ನಿಮಿಷ) ಸಿಡಿಸಿದ ಹ್ಯಾಟ್ರಿಕ್​ ಗೋಲುಗಳ ನೆರವಿನಿಂದ ಭಾರತದ ಪುರುಷರ ತಂಡ ಏಷ್ಯಾಡ್​ ಹಾಕಿ ಸ್ಪರ್ಧೆಯ ತನ್ನ 3ನೇ ಪಂದ್ಯದಲ್ಲಿ ದಕ್ಷಿಣ ಕೊರಿಯಾ ವಿರುದ್ಧ 8-2 ಅಂತರದಿಂದ ಗೆಲುವು ದಾಖಲಿಸಿದೆ. ಹ್ಯಾಟ್ರಿಕ್​ ಗೆಲುವಿನೊಂದಿಗೆ ಎ ಗುಂಪಿನ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಭದ್ರಪಡಿಸಿಕೊಂಡಿರುವ ಹರ್ಮಾನ್​ಪ್ರೀತ್​ ಪಡೆ ಸೆಮಿಫೈನಲ್​ ಪ್ರವೇಶವನ್ನು ಬಹುತೇಕ ಖಚಿತಪಡಿಸಿಕೊಂಡಿದೆ.

ಗುರುವಾರ ನಡೆದ ಪಂದ್ಯದ ಮೊದಲಾರ್ಧದಲ್ಲಿ ಭಾರತ 5-0 ಮುನ್ನಡೆ ಸಾಧಿಸಿತ್ತು. ಅಭಿಷೇಕ್​ (15, 38) 2 ಗೋಲು ಬಾರಿಸಿದರೆ, ಶಿವಾನಂದ ಲಾಕ್ರಾ (4), ನಾಯಕ ಹರ್ಮಾನ್​ಪ್ರೀತ್​ ಸಿಂಗ್​ (11), ರಾಜಿಂದರ್​ ಸಿಂಗ್​ (60) ತಲಾ ಒಂದು ಬಾರಿಸಿದರು. ಕೊರಿಯಾ ಪರ ಕಿಮ್​ ಜೇಯಿ ಹೋ (42) ಮತ್ತು ಕಿಮ್​ ಯೊಂಗ್​ ಬೊಕ್​ (52) ತಲಾ ಒಂದು ಗಳಿಸಿ ಸೋಲಿನ ಅಂತರ ತಗ್ಗಿಸಿದರು.

ಹಾಲಿ ಚಾಂಪಿಯನ್​ ಭಾರತ ತಂಡ ತನ್ನ ಮುಂದಿನ ಪಂದ್ಯದಲ್ಲಿ ಶನಿವಾರ ಆತಿಥೇಯ ಜಪಾನ್​ ವಿರುದ್ಧ ಆಡಲಿದೆ. ಕೂಟದಲ್ಲಿ ಚಿನ್ನದ ಪದಕ ಗೆಲ್ಲುವ ತಂಡ 2028ರ ಲಾಸ್​ ಏಂಜಲೀಸ್​ ಒಲಿಂಪಿಕ್ಸ್​ಗೆ ನೇರಅರ್ಹತೆ ಗಳಿಸುವ ಅವಕಾಶವನ್ನು ಹೊಂದಿದೆ.