ಕ್ರೀಡೆ

ಭಾರತ-ಪಾಕಿಸ್ತಾನಕ್ಕೆ ಅಂಕ ಹಂಚಿದ ಮಳೆರಾಯ: ಪಾಕ್ ಚೇಸಿಂಗ್‌ಗೆ ವರುಣನ ಅಡ್ಡಿ

ಪಲ್ಲೆಕಿಲೆ: ಏಷ್ಯಾಕಪ್ ಏಕದಿನ ಟೂರ್ನಿಯ ಅತ್ಯಂತ ಕುತೂಹಲಕಾರಿ ಹಣಾಹಣಿಯಾದ ಭಾರತ-ಪಾಕಿಸ್ತಾನ ನಡುವಿನ ಪಂದ್ಯ ಭಾರಿ ಮಳೆಯಿಂದಾಗಿ ರದ್ದುಗೊಂಡಿದೆ. ಪಾಕಿಸ್ತಾನದ ವೇಗಿಗಳು ಅಗ್ರ ಕ್ರಮಾಂಕದ ಬ್ಯಾಟರ್‌ಗಳಿಗೆ ಕಡಿವಾಣ ಹಾಕಿದರೂ, ಉಪನಾಯಕ ಹಾಗೂ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ (87 ರನ್, 90 ಎಸೆತ, 7 ಬೌಂಡರಿ, 1 ಸಿಕ್ಸರ್) ಮತ್ತು ವಿಕೆಟ್ ಕೀಪರ್-ಎಡಗೈ ಬ್ಯಾಟರ್ ಇಶಾನ್ ಕಿಶನ್ (82 ರನ್, 81 ಎಸೆತ, 9 ಬೌಂಡರಿ, 2 ಸಿಕ್ಸರ್) ದಿಟ್ಟ ಬ್ಯಾಟಿಂಗ್ ಪ್ರದರ್ಶನದ ನೆರವಿನಿಂದ ಭಾರತ ತಂಡ ಮಳೆಬಾಧಿತ ತನ್ನ ಮೊದಲ ಲೀಗ್ ಪಂದ್ಯದಲ್ಲಿ ಸ್ಪರ್ಧಾತ್ಮಕ ಮೊತ್ತ ಕಲೆಹಾಕಿತು. ಆದರೆ, ಬಳಿಕ ಸುರಿದ ಭಾರಿ ಮಳೆಯಿಂದಾಗಿ ಪಾಕಿಸ್ತಾನಕ್ಕೆ ಚೇಸಿಂಗ್ ಮಾಡಲು ಅವಕಾಶ ಲಭಿಸಲಿಲ್ಲ. ಇದರಿಂದ ಉಭಯ ತಂಡಗಳು ತಲಾ 1 ಅಂಕ ಹಂಚಿಕೊಂಡವು ಮತ್ತು ಪಾಕಿಸ್ತಾನ ತಂಡದ ಸೂಪರ್-4 ಪ್ರವೇಶವೂ ಖಚಿತಗೊಂಡಿದೆ. ಭಾರತ ಸೂಪರ್-4ಗೆ ಏರಲು ನೇಪಾಳ ವಿರುದ್ಧದ ಮುಂದಿನ ಪಂದ್ಯದಲ್ಲಿ ಗೆಲ್ಲಬೇಕಾಗಿದೆ.

ಪಲ್ಲೆಕಿಲೆ ಅಂತಾರಾಷ್ಟ್ರೀಯ ಮೈದಾನದಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ಮಳೆ ಭೀತಿಯ ನಡುವೆಯೂ ಟಾಸ್ ಗೆದ್ದ ನಾಯಕ ರೋಹಿತ್ ಶರ್ಮ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು. ಮೊದಲು ಬ್ಯಾಟಿಂಗ್ ನಡೆಸಿದ ಟೀಮ್ ಇಂಡಿಯಾ ಒಂದು ಹಂತದಲ್ಲಿ 66 ರನ್‌ಗಳಿಗೆ 4 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದಾಗ ಇಶಾನ್ ಕಿಶನ್-ಹಾರ್ದಿಕ್ ಪಾಂಡ್ಯ ಜವಾಬ್ದಾರಿಯುತ ಜತೆಯಾಟ ಆಡಿದ ಲವಾಗಿ ಭಾರತ ತಂಡ 48.5 ಓವರ್‌ಗಳಲ್ಲಿ 266 ರನ್‌ಗಳಿಗೆ ಸಮಾಧಾನ ಕಂಡಿತು. ಹೊಸ ಚೆಂಡಿನಲ್ಲಿ ಮತ್ತು ಸ್ಲಾಗ್ ಓವರ್‌ಗಳಲ್ಲಿ ಪಾಕ್ ಎಡಗೈ ವೇಗಿ ಶಾಹೀನ್ ಷಾ ಅಫ್ರಿದಿ (35ಕ್ಕೆ 4) ಬಿಗಿ ಬೌಲಿಂಗ್ ದಾಳಿಯೊಂದಿಗೆ ಟೀಮ್ ಇಂಡಿಯಾವನ್ನು ಕಾಡಿದರು. ಪ್ರತಿಯಾಗಿ ಪಾಕಿಸ್ತಾನದ ಚೇಸಿಂಗ್‌ಗೆ ಮಳೆ ಅಡ್ಡಿಪಡಿಸಿತು. ಭಾರತೀಯ ಕಾಲಮಾನ ರಾತ್ರಿ 9.20ಕ್ಕೆ ಮಳೆ ಕೊಂಚ ಬಿಡುವು ನೀಡಿದಾಗ ಡಿಎಲ್‌ಎಸ್ ನಿಯಮದನ್ವಯ ಪಾಕಿಸ್ತಾನಕ್ಕೆ 36 ಓವರ್‌ಗಳಲ್ಲಿ 226 ರನ್ ಗುರಿ ನೀಡಲಾಯಿತು. ಆದರೆ, ಮತ್ತೆ ಮಳೆ ಸುರಿಯಿತು. ಇದರಿಂದಾಗಿ ಅಂತಿಮವಾಗಿ ಅಂಪೈರ್‌ಗಳು ಪಂದ್ಯ ರದ್ದುಗೊಳಿಸಲು ನಿರ್ಧರಿಸಿದರು. ಡಕ್ವರ್ತ್-ಲೂಯಿಸ್ ನಿಯಮದನ್ವಯ ಸ್ಪಷ್ಟ ಲಿತಾಂಶ ಕಾಣಲು ಪಾಕಿಸ್ತಾನ ತಂಡ ಕನಿಷ್ಠ 20 ಓವರ್ ಆಡುವುದು ಅಗತ್ಯವಾಗಿತ್ತು. ಡಿಎಲ್‌ಎಸ್ ನಿಯಮದನ್ವಯ ಪಾಕ್ 20 ಓವರ್‌ಗಳಲ್ಲಿ 155 ರನ್ ಗಳಿಸಬೇಕಿತ್ತು.