ಕ್ರೀಡೆ

Asia Cup: ಭಾರತ ಆಡುವುದಿಲ್ಲ, ಪಾಕ್ ವಿರುದ್ಧದ ಪಂದ್ಯದ ಬಗ್ಗೆ ಅನುರಾಗ್ ಠಾಕೂರ್ ಸ್ಪಷ್ಟನೆ..!

Asia Cup: ಭಾರತ ಬಹುರಾಷ್ಟ್ರೀಯ ಪಂದ್ಯಾವಳಿಗಳಲ್ಲಿ ಪಾಕಿಸ್ತಾನವನ್ನು ಎದುರಿಸಬಹುದಾದರೂ, ದ್ವಿಪಕ್ಷೀಯ ಕ್ರಿಕೆಟ್ ಆಡುವ ಕುರಿತು ಭಾರತದ ನಿಲುವು ಬದಲಾಗಿಲ್ಲ ಎಂದು ಬಿಜೆಪಿ ಸಂಸದ ಮತ್ತು ಮಾಜಿ ಕ್ರೀಡಾ ಸಚಿವ ಅನುರಾಗ್ ಠಾಕೂರ್ ಸ್ಪಷ್ಟಪಡಿಸಿದ್ದಾರೆ.

ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಠಾಕೂರ್, ಇಂತಹ ಪಂದ್ಯಗಳಲ್ಲಿ ಭಾರತ ಭಾಗವಹಿಸುವಿಕೆಯು ಟೂರ್ನಮೆಂಟ್ ನಿಯಮಗಳ ಆನುಸಾರ ನಡೆಯುತ್ತದೆ. ಆದರೆ, ಈ ಪಂದ್ಯದಿಂದ ನಮ್ಮ ರಾಷ್ಟ್ರೀಯ ನೀತಿಗಳಲ್ಲಿ ಯಾವುದೇ ಬದಲಾವಣೆ ಆಗಿಲ್ಲ ಎಂದು ಹೇಳಿದ್ದಾರೆ.

ಮುಂದುವರೆದು ಮಾತನಾಡಿದ ಮಾಜಿ ಕ್ರೀಡಾ ಸಚಿವ, ಎಸಿಸಿ ಅಥವಾ ಐಸಿಸಿ ಬಹುರಾಷ್ಟ್ರೀಯ ಪಂದ್ಯಾವಳಿಗಳನ್ನು ಆಯೋಜಿಸಿದಾಗ, ಇಂಡೋ-ಪಾಕ್​ ಭಾಗವಹಿಸುವುದು ಕಡ್ಡಾಯವಾಗುತ್ತದೆ. ಈ ಪಂದ್ಯ ಆಡದಿದ್ದರೇ ಟೂರ್ನಿಯಿಂದ ಹೊರ ಉಳಿಯ ಬೇಕಾಗುತ್ತದೆ. ಈ ಪಂದ್ಯವನ್ನು ಭಾರತ ತಂಡ ಕಳೆದುಕೊಳ್ಳಬೇಕಾಗುತ್ತದೆ ಮತ್ತು ಇತರೆ ತಂಡವು ಅಂಕಗಳನ್ನು ಪಡೆಯುತ್ತದೆ ಎಂದು ಠಾಕೂರ್​ ತಿಳಿಸಿದ್ದಾರೆ.

ಪಾಕಿಸ್ತಾನದೊಂದಿಗಿನ ದ್ವಿಪಕ್ಷೀಯ ಸರಣಿಯ ಕುರಿತು ಭಾರತದ ನಿಲುವಿನ ಬಗ್ಗೆ ಮಾತನಾಡಿದ ಠಾಕೂರ್, ಭಾರತ ಪಾಕಿಸ್ತಾನದೊಂದಿಗೆ ದ್ವಿಪಕ್ಷೀಯ ಪಂದ್ಯಗಳನ್ನು ಆಡುವುದಿಲ್ಲ. ಪಾಕಿಸ್ತಾನ ಭಾರತದ ಮೇಲಿನ ಭಯೋತ್ಪಾದಕ ದಾಳಿಯನ್ನು ನಿಲ್ಲಿಸುವವರೆಗೆ ಭಾರತ ಪಾಕಿಸ್ತಾನದೊಂದಿಗೆ ದ್ವಿಪಕ್ಷೀಯ ಪಂದ್ಯಗಳನ್ನು ಆಡುವುದಿಲ್ಲ ಎಂದು ನಾವು ಕಳೆದ ಹಲವು ವರ್ಷಗಳಿಂದ ನಿರ್ಧಾರ ತೆಗೆದುಕೊಂಡಿದ್ದೇವೆ ಎಂದಿದ್ದಾರೆ.

ಭಾರತ-ಪಾಕ್ ಪಂದ್ಯ ರದ್ದುಪಡಿಸುವಂತೆ ವಿಪಕ್ಷಗಳ ಒತ್ತಾಯ

ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ ಪಾಕಿಸ್ತಾನದೊಂದಿಗಿನ ಭಾರತದ ಪಂದ್ಯವನ್ನು ರದ್ದುಗೊಳಿಸುವಂತೆ ಎಐಎಂಐಎಂ ಮತ್ತು ಶಿವಸೇನೆ (ಯುಬಿಟಿ) ಸೇರಿದಂತೆ ವಿರೋಧ ಪಕ್ಷಗಳು ಕರೆ ನೀಡಿದ ಹಿನ್ನೆಲೆಯಲ್ಲಿ ಠಾಕೂರ್ ಸ್ಪಷ್ಟನೆ ನೀಡಿದ್ದಾರೆ.​

ಸೆಪ್ಟೆಂಬರ್ 14 ರಂದು ನಡೆಯುವ ಭಾರತ-ಪಾಕಿಸ್ತಾನ ಏಷ್ಯಾಕಪ್ ಪಂದ್ಯಕ್ಕೆ ಸಂಬಂಧಿಸಿದಂತೆ ವಿಪಕ್ಷಗಳು ಬಿಜೆಪಿ ಮತ್ತು ಬಿಸಿಸಿಐ ವಿರುದ್ಧ ತೀವ್ರ ವಾಗ್ದಾಳಿ ನಡೆಸಿವೆ. (ಏಜೆನ್ಸೀಸ್)