ಕ್ರೀಡೆ

ಬಾಂಗ್ಲಾದೇಶ ಎದುರು ಪ್ರಯಾಸದ ಗೆಲುವು ಸಾಧಿಸಿದ ಶ್ರೀಲಂಕಾ

ಪಲ್ಲಿಕಿಲೆ: ಎಡಗೈ ಬ್ಯಾಟರ್ ಚರಿತ್ ಅಸಲಂಕಾ (62*ರನ್, 92 ಎಸೆತ, 5 ಬೌಂಡರಿ, 1 ಸಿಕ್ಸರ್) ಹಾಗೂ ಸಧೀರ ಸಮರವಿಕ್ರಮ (54 ರನ್, 77 ಎಸೆತ, 6 ಬೌಂಡರಿ) ಸಮಯೋಚಿತ ಜತೆಯಾಟ ಹಾಗೂ ಮಥೀಶ್ ಪಥಿರಣ (32ಕ್ಕೆ 4) ಬಿಗಿ ಬೌಲಿಂಗ್ ದಾಳಿಯ ನೆರವಿನಿಂದ ಜಂಟಿ-ಆತಿಥೇಯ ಶ್ರೀಲಂಕಾ ತಂಡ ಏಷ್ಯಾಕಪ್ ಏಕದಿನ ಟೂರ್ನಿಯಲ್ಲಿ ಬಾಂಗ್ಲಾದೇಶ ಎದುರು 5 ವಿಕೆಟ್‌ಗಳಿಂದ ಪ್ರಯಾಸದ ಗೆಲುವು ದಾಖಲಿಸಿದೆ.

ಗುರುವಾರ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ನಡೆಸಿದ ಬಾಂಗ್ಲಾದೇಶ ಆರಂಭಿಕ ನಜ್ಮೂಲ್ ಹೊಸೈನ್ ಶಾಂಟೋ (89 ರನ್, 122 ಎಸೆತ, 7 ಬೌಂಡರಿ) ಏಕಾಂಗಿ ಹೋರಾಟದ ನಡುವೆ 42.4 ಓವರ್‌ಗಳಲ್ಲಿ 164 ರನ್‌ಗಳಿಗೆ ಆಲೌಟ್ ಆಯಿತು. ನಜ್ಮೂಲ್ ಹೊಸೈನ್ ಶಾಂಟೋ ಹೊರತುಪಡಿಸಿ ತೌಹಿದ್ ಹೃದಯ್ (20) ಬಾಂಗ್ಲಾ ಪರ ಗರಿಷ್ಠ ಸ್ಕೋರರ್ ಎನಿಸಿದರು. ಪ್ರತಿಯಾಗಿ ಸಧೀರ ಸಮರ ವಿಕ್ರಮ ಹಾಗೂ ಚರಿತ್ ಅಸಲಂಕಾ ಜತೆಯಾಟದ ನೆರವಿನಿಂದ ಶ್ರೀಲಂಕಾ 39 ಓವರ್‌ಗಳಲ್ಲಿ 5 ವಿಕೆಟ್‌ಗೆ 165 ರನ್‌ಗಳಿಸಿ ಶುಭಾರಂಭ ಕಂಡಿತು.

ಸಾಧಾರಣ ಮೊತ್ತದ ಚೇಸಿಂಗ್‌ನಲ್ಲಿ 43 ರನ್‌ಗಳಿಗೆ 3 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ ಲಂಕಾ ಪರ ಸಧೀರ ಸಮರವಿಕ್ರಮ ಹಾಗೂ ಚರಿತ್ ಅಸಲಂಕಾ 78 ರನ್ ಜತೆಯಾಟವಾಡಿದರು. ನಾಯಕ ದಸುನ್ ಶನಕ (14*) ಹಾಗೂ ಅಸಲಂಕಾ ಮುರಿಯದ ಆರನೇ ವಿಕೆಟ್‌ಗೆ 37 ರನ್ ಪೇರಿಸಿ ಗೆಲುವಿನ ದಡ ಸೇರಿಸಿದರು.

ಬಾಂಗ್ಲಾದೇಶ: 42.4 ಓವರ್‌ಗಳಲ್ಲಿ 164 (ಮೊಹಮದ್ ನಯಿಂ 16, ನಜ್ಮೂಲ್ ಶಾಂಟೋ 89, ಶಕೀಬ್ 5, ತೌಹಿದ್ 5, ಮುಶ್ಫಿಕರ್ 13, ಮೆಹದಿ ಹಸನ್ 6, ಮಥೀಶ್ ಪಥೀರಣ 32ಕ್ಕೆ 4, ಮಹೀಶ್ ತೀಕ್ಷಣ 19ಕ್ಕೆ 2).
ಶ್ರೀಲಂಕಾ: 39 ಓವರ್‌ಗಳಲ್ಲಿ 5 ವಿಕೆಟ್‌ಗೆ 165 (ಪಥುಮ್ 14, ಕರುಣರತ್ನೆ 1, ಕುಸಲ್ 5, ಸಧೀರ 54, ಅಸಲಂಕಾ 62*, ಶನಕ 14*, ಶಕೀಬ್ 29ಕ್ಕೆ2).