Asia Cup 2025: ಇದೇ ಸೆ.09ರಿಂದ ದುಬೈನಲ್ಲಿ ಏಷ್ಯಾ ಕಪ್ ಟಿ20 ಟೂರ್ನಿ ಆರಂಭವಾಗಲಿದ್ದು, 8 ತಂಡಗಳು ಟೂರ್ನಮೆಂಟ್‌ನ ಭಾಗವಾಗಲಿವೆ. ಒಟ್ಟು 19 ಪಂದ್ಯಗಳು ನಡೆಯಲಿದ್ದು, ಸೂರ್ಯಕುಮಾರ್ ಯಾದವ್ ನಾಯಕತ್ವದಲ್ಲಿ ಟೀಮ್ ಇಂಡಿಯಾ ಟ್ರೋಫಿ ಗೆಲ್ಲಲು ಎದುರುನೋಡುತ್ತಿದೆ. 'ಸ್ಕೈ' ಕ್ಯಾಪ್ಟನ್ ಆದರೆ, ಉಪನಾಯಕನಾಗಿ ಶುಭಮನ್ ಗಿಲ್ ತಂಡದ ಪರ ಕಣಕ್ಕಿಳಿಯುತ್ತಿರುವುದು ಸದ್ಯ ಕ್ರಿಕೆಟ್ ಪ್ರಿಯರ ನಿರೀಕ್ಷೆಯನ್ನು ದುಪ್ಪಟ್ಟಾಗಿಸಿದೆ.
ಇದನ್ನೂ ಓದಿ: ಒಂದು ಇಟ್ಟಿಗೆ ಬೆಲೆ ಎಷ್ಟಿರಬಹುದು? 2,500 ಇಟ್ಟಿಗೆಯ ಬಿಲ್ ನೋಡಿದ್ರೆ ನೀವು ದಂಗಾಗೋದು ಖಚಿತ! | Brick Cost
ಭಾರತ, ಪಾಕಿಸ್ತಾನ, ಓಮನ್ ಮತ್ತು ಯುಎಇ ತಂಡಗಳು ಗ್ರೂಪ್ ಎ ಸೇರಿದ್ದರೆ, ಶ್ರೀಲಂಕಾ, ಬಾಂಗ್ಲಾದೇಶ, ಅಫ್ಘಾನಿಸ್ತಾನ ಮತ್ತು ಹಾಂಗ್ ಕಾಂಗ್ ತಂಡಗಳು ಗ್ರೂಪ್ ಬಿ ಸೇರಿವೆ. ಈ ಟೂರ್ನಿಯ ಎಲ್ಲಾ ಪಂದ್ಯಗಳು ಭಾರತೀಯ ಕಾಲಮಾನ ಸಂಜೆ 7:30ಕ್ಕೆ ಆರಂಭವಾಗಬೇಕಿತ್ತು. ಆದರೆ, ಯುಎಇ (ದುಬೈ) ಕ್ರಿಕೆಟ್ ಇತ್ತೀಚೆಗೆ ಪಂದ್ಯದ ಆರಂಭದ ವೇಳೆಯನ್ನು ಬದಲಾಯಿಸಿರುವುದು ಗಮನಾರ್ಹ. ಈ ಕುರಿತಂತೆ ಮಾಹಿತಿ ಕೂಡ ಹಂಚಿಕೊಂಡಿದೆ.
ಏಷ್ಯಾ ಕಪ್ 2025 ಟೂರ್ನಮೆಂಟ್‌ನ 19 ಪಂದ್ಯಗಳಲ್ಲಿ, 18 ಪಂದ್ಯಗಳು (ಫೈನಲ್ ಪಂದ್ಯ ಸೇರಿ) ಭಾರತೀಯ ಕಾಲಮಾನ ರಾತ್ರಿ 8 ಗಂಟೆಗೆ ಶುರುವಾಗಲಿದೆ. ಸೆಪ್ಟೆಂಬರ್‌ನಲ್ಲಿ ದುಬೈನಲ್ಲಿ ಹೆಚ್ಚಿನ ತಾಪಮಾನದ ಹಿನ್ನೆಲೆ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಕ್ರಿಕೆಟ್ ಮೂಲಗಳು ತಿಳಿಸಿವೆ. ಪ್ರಸಾರಕರ ಕೋರಿಕೆಯ ಮೇರೆಗೆ ಯುಎಇ ಕ್ರಿಕೆಟ್ ಪಂದ್ಯದ ಸಮಯಗಳಲ್ಲಿ ಈ ಬದಲಾವಣೆಗಳನ್ನು ತಂದಿದೆ ಎಂದು ವರದಿಯಾಗಿದೆ.