Asia Cup 2025: ಪ್ರಸಕ್ತ ದುಬೈನಲ್ಲಿ ನಡೆಯುತ್ತಿರುವ ಏಷ್ಯಾಕಪ್ 2025 ಟಿ20 ಟೂರ್ನಿಯಲ್ಲಿ ಪಾಕಿಸ್ತಾನ ವಿವಾದಗಳ ಸುಳಿಯಲ್ಲಿ ಸಿಲುಕಿದೆ. ಟೀಮ್ ಇಂಡಿಯಾ ಎದುರು ಹೀನಾಯವಾಗಿ ಸೋತ ಬಳಿಕ ಹಲವು ವಿಚಾರಕ್ಕೆ ಪಾಕ್ ವ್ಯಾಪಕ ಟೀಕೆ, ವ್ಯಂಗಗಳಿಗೆ ಗುರಿಯಾಗಿದೆ.
ಟೀಮ್ ಇಂಡಿಯಾ ಎದುರು ಮಂಡಿಯೂರಿದ ನಂತರ ಕ್ಯಾಪ್ಟನ್ ಸೂರ್ಯಕುಮಾರ್ ಯಾದವ್ ಮತ್ತು ಅವರ ತಂಡವು ತಮ್ಮೊಂದಿಗೆ ಹಸ್ತಲಾಘವ ಮಾಡಲಿಲ್ಲ ಎಂಬ ವಿಚಾರವನ್ನು ದೊಡ್ಡದಾಗಿ ಮಾಡಿದ ಪಾಕ್, ಭಾರತ ತಮ್ಮ ತಂಡದ ಆಟಗಾರರಿಗೆ ಕೈಕುಲಕದೆ ಹೋಗಲು ಪಂದ್ಯದ ಅಂಪೈರ್ ಆ್ಯಂಡಿ ಪೈಕ್ರಾಫ್ಟ್ ಕಾರಣ. ಈತ ಕೂಡಲೇ ಕ್ಷಮೆಯಾಚಿಸಬೇಕು! ಇಲ್ಲವೇ ಏಷ್ಯಾಕಪ್ನಿಂದ ನಾವು ಅರ್ಧಕ್ಕೆ ನಿರ್ಗಮಿಸುತ್ತೇವೆ ಎಂದಿತು. ಈ ಮಾತು ಹೇಳಿ 24 ಗಂಟೆ ಕಳೆಯಲಿಲ್ಲ. ಅಷ್ಟು ಬೇಗ ತನ್ನ ಮಾತಿಗೆ ವಿರುದ್ಧವಾಗಿ ನಡೆದುಕೊಂಡಿತು.
ಅಂಪೈರ್ ಕ್ಷಮೆ ಕೋರಿದರೆ ಮಾತ್ರ ನಾವು ಟೂರ್ನಿ ಮುಂದುವರಿಸುತ್ತೇವೆ. ಇಲ್ಲವೇ ಯುಎಇ ವಿರುದ್ಧದ ಪಂದ್ಯವನ್ನು ಆಡುವುದಿಲ್ಲ ಎಂದು ಪಿಸಿಬಿ ಹೇಳಿತ್ತು. ಆದರೆ, ಅಂಪೈರ್ ಖುದ್ದಾಗಿ ನಮಗೆ ಕ್ಷಮೆಯಾಚಿಸಿದ್ದಾರೆ ಎಂದು ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ವಿರುದ್ಧದ ಪಂದ್ಯವನ್ನಾಡಿದ ಪಾಕ್, 41 ರನ್‌ಗಳ ಜಯ ಸಾಧಿಸಿತು. ಇದೇ ಸಮಯದಲ್ಲಿ ಅನಿರೀಕ್ಷಿತವಾಗಿ ಫೀಲ್ಡ್ ಅಂಪೈರ್‌ಗೆ ಬಾಲ್ ಎಸೆದ ಪಾಕಿಸ್ತಾನ ಫೀಲ್ಡರ್, ಅವರ ಭುಜಕ್ಕೆ ಬೀಸಿ ಹೊಡೆದ ವಿಡಿಯೋ ದೃಶ್ಯದಲ್ಲಿ ಸೆರೆಯಾಗಿದೆ.
ಮೇಲ್ನೋಟಕ್ಕೆ ಇದು ಉದ್ದೇಶಪೂರ್ವಕವಲ್ಲ ಎಂದು ಕಾಣಿಸಿದರೂ, ಪಾಕಿಸ್ತಾನಿ ಫೀಲ್ಡರ್‌ನ ಬಾಲ್ ಎಸೆತದಿಂದ ಫೀಲ್ಡ್ ಅಂಪೈರ್ ನೋವಿನಿಂದಲೇ ಮೈದಾನ ತೊರೆದ ದೃಶ್ಯ ಹಲವರ ಕೆಂಗಣ್ಣಿಗೆ ಗುರಿಯಾಗಿದೆ. ಯುಎಇ ಬ್ಯಾಟಿಂಗ್ ಮಾಡುತ್ತಿದ್ದ ಆರನೇ ಇನ್ನಿಂಗ್ಸ್ ವೇಳೆ ಈ ಘಟನೆ ನಡೆದಿದೆ. ಪಾಕ್ ಕೊಟ್ಟ 147 ರನ್‌ಗಳ ಗುರಿಯನ್ನು ಬೆನ್ನಟ್ಟುವ ಸಮಯದಲ್ಲಿ, ಫೀಲ್ಡರ್ ಬಾಲ್ ಅನ್ನು ನಾನ್-ಸ್ಟ್ರೈಕರ್ ಕಡೆಗೆ ಎಸೆದರು. ಅದು ನೇರವಾಗಿ ಫೀಲ್ಡ್ ಅಂಪೈರ್ ರುಚಿರ ಪಲ್ಲಿಯಗುರುಗೆ ಅವರ ಭುಜಕ್ಕೆ ತಗುಲಿತು. ಈ ದೃಶ್ಯ ಜಾಲತಾಣಗಳಲ್ಲಿ ಹರಿದಾಡಿದೆ.
ಈ ವೇಳೆ ಮೈದಾನಕ್ಕೆ ಬಂದ ಪಾಕಿಸ್ತಾನಿ ಫಿಸಿಯೋ, ಗಾಯಗೊಂಡ ಅಂಪೈರ್‌ಗೆ ಪರೀಕ್ಷೆ ನಡೆಸಿ, ಪೆವಿಲಿಯನ್ನತ್ತ ಕರೆದೊಯ್ಯುತ್ತಾರೆ. ಅವರ ಸ್ಥಾನದಲ್ಲಿ ರಿಸರ್ವ್ ಅಂಪೈರ್ ಘಾಜಿ ಸೊಹೆಲ್ (ಬಾಂಗ್ಲಾದೇಶ) ಪಂದ್ಯವನ್ನು ಮುಂದುವರಿಸುವಂತೆ ಎರಡು ತಂಡಗಳಿಗೆ ಹೇಳುತ್ತಾರೆ,(ಏಜೆನ್ಸೀಸ್).