ಕ್ರೀಡೆ

ಚೆನ್ನೈ ಟೆಸ್ಟ್​ನಲ್ಲಿ ಅಶ್ವಿನ್​-ಜಡೇಜಾ ಭರ್ಜರಿ ಜತೆಯಾಟ; ಹಲವು ದಾಖಲೆಗಳು ಪತನ!

ಚೆನ್ನೈ: ತವರಿನ ಟೆಸ್ಟ್​ ಸರಣಿಗಳಲ್ಲಿ ಭಾರತೀಯ ಬೌಲಿಂಗ್​ ವಿಭಾಗದ ಪ್ರಮುಖ ಅಸ್ತ್ರವೆನಿಸುವ ಆರ್​. ಅಶ್ವಿನ್​ ಮತ್ತು ರವೀಂದ್ರ ಜಡೇಜಾ ಈ ಬಾರಿ ಬಾಂಗ್ಲಾದೇಶ ವಿರುದ್ಧದ ಮೊದಲ ಟೆಸ್ಟ್​ ಪಂದ್ಯದಲ್ಲಿ ಬ್ಯಾಟಿಂಗ್​ ವಿಭಾಗದಲ್ಲೂ ಆತಿಥೇಯರ ರಕ್ಷಣೆಗೆ ನಿಂತಿದ್ದಾರೆ. ಪ್ರಮುಖ ಬ್ಯಾಟರ್​ಗಳ ವೈಫಲ್ಯದಿಂದಾಗಿ ಕುಸಿದ ಭಾರತ ತಂಡಕ್ಕೆ ಆರ್​. ಅಶ್ವಿನ್​ (102*ರನ್​, 112 ಎಸೆತ, 10 ಬೌಂಡರಿ, 2 ಸಿಕ್ಸರ್​) ಆರನೇ ಟೆಸ್ಟ್​ ಶತಕದ ಮೂಲಕ ಆಸರೆಯಾದರೆ, ಆಲ್ರೌಂಡರ್​ ರವೀಂದ್ರ ಜಡೇಜಾ (86* ರನ್​, 117 ಎಸೆತ, 10 ಬೌಂಡರಿ, 2 ಸಿಕ್ಸರ್​) ಸಮರ್ಥ ಬೆಂಬಲ ನೀಡುವ ಮೂಲಕ 5ನೇ ಟೆಸ್ಟ್​ ಶತಕದ ಸನಿಹ ನಿಂತಿದ್ದಾರೆ. ಪಾಕ್​ನಲ್ಲಿ ಸರಣಿ ಗೆದ್ದ ವಿಶ್ವಾಸದೊಂದಿಗೆ ಆಗಮಿಸಿರುವ ಬಾಂಗ್ಲಾ ತಂಡ ಆರಂಭಿಕ ಮೇಲುಗೈ ಸಾಧಿಸಿದರೂ, ಕೊನೇ ಅವಧಿಯಲ್ಲಿ ಅಶ್ವಿನ್-ಜಡೇಜಾ ಜೋಡಿ ದ್ವಿಶತಕದ ಸನಿಹದ ಜತೆಯಾಟವಾಡಿ ದಿಟ್ಟ ತಿರುಗೇಟು ನೀಡಿದ್ದರಿಂದ ಭಾರತವೇ ಮೊದಲ ದಿನದ ಗೌರವ ಸಂಪಾದಿಸಿದೆ.

ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ಗುರುವಾರ ಆರಂಭಗೊಂಡ ಪಂದ್ಯದಲ್ಲಿ ಟಾಸ್​ ಗೆದ್ದು ಬೌಲಿಂಗ್​ ಆಯ್ದ ಬಾಂಗ್ಲಾದೇಶ, ವೇಗದ ಬೌಲರ್​ಗಳಿಗೆ ಅನುಕೂಲಕರ ಆಗುವಂತಿದ್ದ ಪಿಚ್​ಅನ್ನು ಸಮರ್ಥವಾಗಿ ಬಳಸಿಕೊಂಡಿತು. ಇದರಿಂದಾಗಿ ಭಾರತ ತಂಡ 144 ರನ್​ಗಳಿಗೆ 6 ವಿಕೆಟ್​ ಕಳೆದುಕೊಂಡು ಸಾಧಾರಣ ಮೊತ್ತಕ್ಕೆ ಕುಸಿಯುವ ಭೀತಿ ಎದುರಿಸಿತು. ಆಗ ತಂಡದ ರಕ್ಷಣೆಗೆ ನಿಂತ ಅಶ್ವಿನ್-ಜಡೇಜಾ ಜೋಡಿ ಮುರಿಯದ 7ನೇ ವಿಕೆಟ್​ಗೆ 227 ಎಸೆತಗಳಲ್ಲಿ 195 ರನ್​ ಜತೆಯಾಟವಾಡಿ ಭಾರತವನ್ನು ಸುಸ್ಥಿತಿಗೆ ತಂದಿತು. ದಿನದಂತ್ಯಕ್ಕೆ ಭಾರತ 80 ಓವರ್​ಗಳಲ್ಲಿ 6 ವಿಕೆಟ್​ಗೆ 339 ರನ್​ ಪೇರಿಸಿ ಉತ್ತಮ ಮೊತ್ತದತ್ತ ಮುನ್ನಡೆದಿದೆ. ಯುವ ವೇಗಿ ಹಸನ್​ ಮಹಮೂದ್​ (58ಕ್ಕೆ 4) ಬಿಗಿ ದಾಳಿ ಎದುರು ಭಾರತದ ಅಗ್ರ ಕ್ರಮಾಂಕ ಪರದಾಡಿದರೆ, ಐಸಿಸಿ ಟೆಸ್ಟ್​ ಆಲ್ರೌಂಡರ್​ ರ್ಯಾಂಕಿಂಗ್​ನಲ್ಲಿ ಅಗ್ರ 2 ಸ್ಥಾನದಲ್ಲಿರುವ ಜಡೇಜಾ&ಅಶ್ವಿನ್​ ಪ್ರತಿ ಓವರ್​ಗೆ 5ಕ್ಕಿಂತ ಹೆಚ್ಚಿನ ಸರಾಸರಿಯಲ್ಲಿ ರನ್​ ಪೇರಿಸುವ ಮೂಲಕ ಬಾಂಗ್ಲಾ ಬೌಲರ್​ಗಳನ್ನು ಬೆಂಡೆತ್ತಿದರು. ಈ ಪಿಚ್​ನಲ್ಲಿ ಭಾರತದ ಪಾಲಿಗೆ 350 ಪ್ಲಸ್​ ರನ್​ ಉತ್ತಮ ಮೊತ್ತವೇ ಆಗಲಿದೆ.

ಅಶ್ವಿನ್​-ಜಡೇಜಾ ಸೇರಿಸಿದ 195 ರನ್​, ಟೆಸ್ಟ್​ ಪಂದ್ಯದ ಮೊದಲ ದಿನದಾಟದಲ್ಲಿ 7ನೇ ವಿಕೆಟ್​ಗೆ ದಾಖಲಾದ ಗರಿಷ್ಠ ಜತೆಯಾಟವಾಗಿದೆ. ಇನ್ನು 5 ರನ್​ ಗಳಿಸಿದರೆ ಅವರು ಟೆಸ್ಟ್​ನಲ್ಲಿ 7ನೇ ವಿಕೆಟ್​ಗೆ ದ್ವಿಶತಕದ ಜತೆಯಾಟವಾಡಿದ 8ನೇ ಜೋಡಿ ಎನಿಸಲಿದ್ದಾರೆ. ಅಶ್ವಿನ್​ ತವರೂರು ಚೆನ್ನೈನಲ್ಲಿ ಸತತ 2ನೇ ಶತಕ ಬಾರಿಸಿದರು. 2021ರಲ್ಲಿ ಇಂಗ್ಲೆಂಡ್​ ವಿರುದ್ಧ ಭಾರತ ಇಲ್ಲಿ ಆಡಿದ ಕೊನೇ ಟೆಸ್ಟ್​ನಲ್ಲೂ ಅಶ್ವಿನ್​ ಶತಕ ಸಿಡಿಸಿದ್ದರು. ಅವರ ಮೊದಲ 4 ಶತಕಗಳು ವಿಂಡೀಸ್​ ವಿರುದ್ಧ ಸಿಡಿದಿವೆ.

ಅಶ್ವಿನ್​ 38 ವರ್ಷ ಅಥವಾ ನಂತರದಲ್ಲಿ ಟೆಸ್ಟ್​ ಶತಕ ಸಿಡಿಸಿದ 4ನೇ ಭಾರತೀಯ ಬ್ಯಾಟರ್​. ರಾಹುಲ್​ ದ್ರಾವಿಡ್​ (5), ವಿನೂ ಮಂಕಡ್​ (2), ವಿಜಯ್​ ಮರ್ಚೆಂಟ್​ (1) ಮೊದಲ ಮೂವರು. ಅಶ್ವಿನ್​ ಟೆಸ್ಟ್​ನಲ್ಲಿ 8ನೇ ಕ್ರಮಾಂಕದಲ್ಲಿ ಗರಿಷ್ಠ 4 ಶತಕ ಸಿಡಿಸಿದ ನ್ಯೂಜಿಲೆಂಡ್​ನ ಡೇನಿಯಲ್​ ವೆಟ್ಟೋರಿ ದಾಖಲೆ ಸರಿಗಟ್ಟಿದರು. ಅಶ್ವಿನ್​ ಈಗ ಟೆಸ್ಟ್​ ಕ್ರಿಕೆಟ್​ನಲ್ಲಿ ಎಂಎಸ್​ ಧೋನಿ (6) ಅವರಷ್ಟೇ ಶತಕ ಸಿಡಿಸಿದಂತಾಗಿದೆ. ಧೋನಿಗಿಂತ 2 ಇನಿಂಗ್ಸ್​ ಬೇಗನೆ ಈ ಸಾಧನೆ ಮಾಡಿದ್ದಾರೆ ಎಂಬುದು ವಿಶೇಷ.

ಹಸನ್​ ಮಹಮೂದ್​ ಟೆಸ್ಟ್​ ಇನಿಂಗ್ಸ್​ ಒಂದರ ಮೊದಲ 4 ವಿಕೆಟ್​ ಕಬಳಿಸಿದ ಬಾಂಗ್ಲಾದ 4ನೇ ವೇಗಿ ಎನಿಸಿದರು. ಖಾಲಿದ್​ ಮಹಮೂದ್​ (2003), ರೊಬಿಯುಲ್​ ಇಸ್ಲಾಂ (2013) ಮತ್ತು ಅಬು ಜಯೆದ್​ (2019) ಹಿಂದಿನ ಸಾಧಕರು. ಯಶಸ್ವಿ ಜೈಸ್ವಾಲ್​ ತವರಿನ ಟೆಸ್ಟ್​ನಲ್ಲಿ ಸತತ 6 ಬಾರಿ 50 ಪ್ಲಸ್​ ರನ್​ ಗಳಿಸಿದ ಭಾರತದ ಮೊದಲ ಬ್ಯಾಟರ್​ ಎನಿಸಿದರು. ರುಸಿ ಮೋದಿ ಸತತ 5 ಅರ್ಧಶತಕ ಬಾರಿಸಿದ್ದು ಹಿಂದಿನ ದಾಖಲೆ. ಚೆಪಾಕ್​ನಲ್ಲಿ ನಡೆದ ಟೆಸ್ಟ್​ ಪಂದ್ಯವೊಂದರಲ್ಲಿ ಕಳೆದ 42 ವರ್ಷಗಳಲ್ಲಿ ಮೊದಲ ಬಾರಿ ಟಾಸ್​ ಗೆದ್ದ ತಂಡ ಬೌಲಿಂಗ್​ ಆಯ್ದುಕೊಂಡಿತು. ಇಲ್ಲಿ ಕಳೆದ 21 ಟೆಸ್ಟ್​ಗಳಲ್ಲಿ ಟಾಸ್​ ಗೆದ್ದ ತಂಡ ಬ್ಯಾಟಿಂಗ್​ ಆಯ್ದಿತ್ತು. 1982ರಲ್ಲಿ ಕೊನೆಯದಾಗಿ ಟಾಸ್​ ಗೆದ್ದ ತಂಡ ಮೊದಲು ಬೌಲಿಂಗ್​ ಮಾಡಿತ್ತು.

ಬಾಂಗ್ಲಾ ಓವರ್​ರೇಟ್​ ಕುಸಿತ

ಮೂವರು ವೇಗಿಗಳಿಂದಲೇ 50 ಓವರ್​ ದಾಳಿ ನಡೆಸಿ ಭಾರತವನ್ನು ಕಟ್ಟಿಹಾಕಲು ಯತ್ನಿಸಿದ ಬಾಂಗ್ಲಾ, ಓವರ್​ಗತಿಯಲ್ಲಿ ಭಾರಿ ಹಿಂದುಳಿಯಿತು. ದಿನದಂತ್ಯಕ್ಕೆ ಬಾಂಗ್ಲಾ ನಿಗದಿತಕ್ಕಿಂತ 10 ಓವರ್​ ಕಡಿಮೆ ಎಸೆಯಿತು. ಇದರಿಂದ ಬಾಂಗ್ಲಾ ಐಸಿಸಿ ವಿಶ್ವ ಟೆಸ್ಟ್​ ಚಾಂಪಿಯನ್​ಷಿಪ್​ ಅಂಕಪಟ್ಟಿಯಲ್ಲಿ ಅಂಕ ಕಡಿತದ ಶಿಕ್ಷೆಗೆ ಗುರಿಯಾಗುವ ಭೀತಿ ಎದುರಿಸಿದೆ.

ಮೂವರು ವೇಗಿಗಳು ಕಣಕ್ಕೆ

ಭಾರತ ತಂಡ ಚೆಪಾಕ್​ನ ಕೆಂಪು ಮಣ್ಣಿ ಪಿಚ್​ ವೇಗಿಗಳಿಗೆ ನೆರವಾಗುವ ನಿರೀೆಯೊಂದಿಗೆ ಮೂವರು ವೇಗದ ಬೌಲರ್​ಗಳೊಂದಿಗೆ ಕಣಕ್ಕಿಳಿಯಿತು ಮತ್ತು ಸ್ಪಿನ್​ ವಿಭಾಗವನ್ನು ಅಶ್ವಿನ್​&ಜಡೇಜಾಗೆ ಸೀಮಿತಗೊಳಿಸಿತು. ಜಸ್​ಪ್ರೀತ್​ ಬುಮ್ರಾ, ಮೊಹಮದ್​ ಸಿರಾಜ್​ ಜತೆಗೆ ಆಕಾಶ್​ ದೀಪ್​ 3ನೇ ವೇಗಿಯಾಗಿ ಕಣಕ್ಕಿಳಿದರು. ಪ್ರವಾಸಿ ಬಾಂಗ್ಲಾ ಕೂಡ 3 ವೇಗಿ, 2 ಸ್ಪಿನ್ನರ್ಸ್​ ತಂತ್ರವನ್ನೇ ಅನುಸರಿಸಿದೆ.