ಕ್ರೀಡೆ

ಅಶ್ವಿನ್ ಫೇಲ್, ಜಡೇಜಾಗೆ ಚಾನ್ಸ್?

malli

ವೆಲ್ಲಿಂಗ್ಟನ್: ಭಾರತ ಹಾಗೂ ಆತಿಥೇಯ ನ್ಯೂಜಿಲೆಂಡ್ ನಡುವೆ ಮೊದಲ ಟೆಸ್ಟ್ ಪಂದ್ಯದಲ್ಲಿ ಒಂದೇ ರೀತಿಯ ಹೋರಾಟ ಕಂಡುಬಂದರೂ, ಪಂದ್ಯದಲ್ಲಿ ಭಾರತಕ್ಕೆ ಹಿನ್ನಡೆಯಾಗಿದ್ದು ಮೊದಲ ಇನಿಂಗ್ಸ್ ನಲ್ಲಿ ಕಿವೀಸ್​ನ ಕೆಳಕ್ರಮಾಂಕದ ಆಟಗಾರರು ಮಾಡಿದ ಉಪಯುಕ್ತ ಬ್ಯಾಟಿಂಗ್.

ಆದರೆ, ಈ ಬ್ಯಾಟಿಂಗ್ ಭಾರತ ತಂಡಕ್ಕೆ ಎರಡೂ ಇನಿಂಗ್ಸ್​ನಲ್ಲಿ ಸಿಗಲಿಲ್ಲ. ಇದರಿಂದಾಗಿ ಶನಿವಾರ ಕ್ರೖೆಸ್ಟ್ ಚರ್ಚ್​ನಲ್ಲಿ ಆರಂಭವಾಗಲಿರುವ 2ನೇ ಪಂದ್ಯಕ್ಕೆ ಬ್ಯಾಟಿಂಗ್​ನಲ್ಲಿ ವಿಫಲವಾಗಿರುವ ಆರ್.ಅಶ್ವಿನ್​ರ ಬದಲು ಎಡಗೈ ಆಫ್​ಸ್ಪಿನ್ ಆಲ್ರೌಂಡರ್ ರವೀಂದ್ರ ಜಡೇಜಾ ತಂಡದಲ್ಲಿ ಸ್ಥಾನ ಪಡೆಯುವ ಸಾಧ್ಯತೆ ಇದೆ.

ಆರ್. ಅಶ್ವಿನ್ ಮೊದಲ ಇನಿಂಗ್ಸ್​ನಲ್ಲಿ ಟಿಮ್ ಸೌಥಿಯಿಂದ ಎದುರಿಸಿದ ಮೊದಲ ಎಸೆತದಲ್ಲಿಯೇ ಔಟಾಗಿದ್ದರೆ, 2ನೇ ಇನಿಂಗ್ಸ್​ನಲ್ಲೂ 11 ಎಸೆತ ಎದುರಿಸಿ 4 ರನ್ ಬಾರಿಸಿ ಸೌಥಿಗೆ ವಿಕೆಟ್ ನೀಡಿದ್ದರು. 2017ರ ಆರಂಭದಿಂದ ಇಲ್ಲಿಯವರೆಗೂ ಆಡಿದ 36 ಇನಿಂಗ್ಸ್​ಗಳ ಪೈಕಿ ಅಶ್ವಿನ್, ಕನಿಷ್ಠ 30 ಎಸೆತಗಳನ್ನು ಎದುರಿಸಿದೇ ಔಟಾಗುತ್ತಿರುವುದು ಇದು 20ನೇ ಬಾರಿ.

ಈ ಅವಧಿಯಲ್ಲಿ 30 ರಿಂದ 50 ಎಸೆತಗಳನ್ನು ಎದುರಿಸುವ ವೇಳೆ 6 ಬಾರಿ ಅವರು ಔಟಾಗಿದ್ದರೆ, 50ಕ್ಕಿಂತ ಅಧಿಕ ಎಸೆತಗಳನ್ನು ಎದುರಿಸಿದ ಇನಿಂಗ್ಸ್​ಅನ್ನು 7 ಬಾರಿ ಆಡಿದ್ದಾರೆ. 2017ರ ಆಗಸ್ಟ್​ನಲ್ಲಿ ಶ್ರೀಲಂಕಾ ವಿರುದ್ಧ ಎಸ್​ಎಸ್​ಸಿಯಲ್ಲಿ ನಡೆದ ಟೆಸ್ಟ್ ನಲ್ಲಿ ಕೊನೇ ಬಾರಿಗೆ ಅವರು 50ಕ್ಕಿಂತ ಅಧಿಕ ಎಸೆತಗಳನ್ನು ಎದುರಿಸಿದರು. 98 ಎಸೆತಗಳ ಇನಿಂಗ್ಸ್​ನಲ್ಲಿ ಅವರು 54 ರನ್ ಬಾರಿಸಿದ್ದರು. ಇದೇ ಅವಧಿಯಲ್ಲಿ ರವೀಂದ್ರ ಜಡೇಜಾ, ಅಶ್ವಿನ್​ಗೆ ದೊಡ್ಡ ಮಟ್ಟದ ಪ್ರತಿರೋಧ ಒಡ್ಡಿದ್ದಾರೆ. ಈ ಅವಧಿಯಲ್ಲಿ ಜಡೇಜಾ ಆಡಿದ 21 ಟೆಸ್ಟ್​ನ 31 ಇನಿಂಗ್ಸ್​ಗಳಿಂದ 49.80ರ ಸರಾಸರಿ ಹೊಂದಿದ್ದು, 11 ಬಾರಿ ಅಜೇಯವಾಗಿ ಉಳಿದಿದ್ದಾರೆ.

ಅದಲ್ಲದೆ, 1 ಶತಕ ಹಾಗೂ 10 ಅರ್ಧಶತಕವನ್ನೂ ಬಾರಿಸಿದ್ದು, 6 ಬಾರಿ ಅವರು 100ಕ್ಕೂ ಅಧಿಕ ಎಸೆತಗಳನ್ನು ಎದುರಿಸಿದ್ದಾರೆ. 2017ರ ಆರಂಭದಿಂದ ಜಡೇಜಾ ತಾವು ಎದುರಿಸಿದ 79 ಎಸೆತಗಳಿಗೊಮ್ಮೆ ಔಟ್ ಆಗಿದ್ದರೆ, ಅಶ್ವಿನ್ 33 ಎಸೆತಗಳಿಗೆ ಒಮ್ಮೆ ಔಟಾಗಿದ್ದಾರೆ. ಈ ಎಲ್ಲ ಕಾರಣದಿಂದಾಗಿ ಬ್ಯಾಟಿಂಗ್​ನಲ್ಲೂ ತಂಡಕ್ಕೆ ನೆರವಾಗಬಲ್ಲ ರವೀಂದ್ರ ಜಡೇಜಾ 2ನೇ ಟೆಸ್ಟ್ ಪಂದ್ಯದಲ್ಲಿ ಆಡುವ ಸಾಧ್ಯತೆ ಇದೆ.

ಇಲ್ಲಿನ ಪಿಚ್ ಹಾಗೂ ಪರಿಸ್ಥಿತಿಗಳ ಬಗ್ಗೆ ತೀರಾ ಆಲೋಚನೆ ಮಾಡುವುದು ಅಗತ್ಯವಿಲ್ಲ. ಹಾಗೇನಾದರೂ ಮಾಡಿದರೆ ಬ್ಯಾಟಿಂಗ್​ನತ್ತ ಗಮನ ನೀಡಲು ಸಾಧ್ಯವಾಗುವುದಿಲ್ಲ. ತವರಿನ ಹೊರಗೆ ಆಡುವಾಗ, ಮಾನಸಿಕವಾಗಿಯೇ ಆಟದ ಬಗ್ಗೆ ಸಿದ್ಧತೆ ಮಾಡಿಕೊಳ್ಳಬೇಕಾಗುತ್ತದೆ. ಒಮ್ಮೊಮ್ಮೆ ತೀರಾ ತಾಂತ್ರಿಕ ವಿಚಾರಗಳ ಬಗ್ಗೆ ನಮ್ಮ ನಡುವೆ ಚರ್ಚೆ ಆಗುತ್ತದೆ. ಮನಸ್ಸು ಮುಕ್ತವಾಗಿದ್ದರೆ, ಎಲ್ಲ ಪರಿಸ್ಥಿತಿಗಳೂ ಸುಲಭವಾಗುತ್ತವೆ. | ವಿರಾಟ್ ಕೊಹ್ಲಿ ಟೀಮ್ ಇಂಡಿಯಾ ನಾಯಕ