ಧರ್ಮಶಾಲಾ: ಭಾರತದ ಸ್ಪಿನ್ನರ್ ಆರ್. ಅಶ್ವಿನ್ ಮತ್ತು ಇಂಗ್ಲೆಂಡ್ ಬ್ಯಾಟರ್ ಜಾನಿ ಬೇರ್ಸ್ಟೋ ಧರ್ಮಶಾಲಾದಲ್ಲಿ 100ನೇ ಟೆಸ್ಟ್ ಆಡಲಿದ್ದಾರೆ. ಅಶ್ವಿನ್ ಈ ಸಾಧನೆ ಮಾಡಿದ 14ನೇ ಭಾರತೀಯ ಎನಿಸಲಿದ್ದರೆ, ಬೇರ್ಸ್ಟೋ ಇಂಗ್ಲೆಂಡ್ನ 17ನೇ ಆಟಗಾರ ಎನಿಸಲಿದ್ದಾರೆ. 147 ವರ್ಷಗಳ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಒಂದೇ ಪಂದ್ಯದಲ್ಲಿ ಇಬ್ಬರು ಆಟಗಾರರು 100ರ ಸಂಭ್ರಮ ಕಾಣುತ್ತಿರುವ 4ನೇ ದೃಷ್ಟಾಂತ ಇದಾಗಿದೆ. 2000ದಲ್ಲಿ ಇಂಗ್ಲೆಂಡ್ನ ಮೈಕೆಲ್ ಆಥರ್ಟನ್ ಮತ್ತು ಅಲೆಕ್ ಸ್ಟೀವರ್ಟ್ ಮೊದಲ ಬಾರಿ ಇಂಥ ದೃಷ್ಟಾಂತಕ್ಕೆ ಸಾಯಾಗಿದ್ದರು. ನಂತರ 2006ರಲ್ಲಿ ದಣ ಆಫ್ರಿಕಾದ ಶಾನ್ ಪೊಲ್ಲಾಕ್, ನ್ಯೂಜಿಲೆಂಡ್ನ ಸ್ಟೀಫನ್ ಫ್ಲೆಮಿಂಗ್ ಮತ್ತು 2013ರ ಆಶಸ್ ಸರಣಿಯಲ್ಲಿ ಇಂಗ್ಲೆಂಡ್ನ ಅಲಸ್ಟೈರ್ ಕುಕ್, ಆಸ್ಟ್ರೆಲಿಯಾದ ಮೈಕೆಲ್ ಕ್ಲಾರ್ಕ್ ಇಂಥ ಸಾಧನೆ ಮಾಡಿದ್ದರು.
ಅಶ್ವಿನ್ ಭಾರತದ ಹಿರಿಯ 100 ಟೆಸ್ಟ್ ಸಾಧಕ
ಆರ್. ಅಶ್ವಿನ್ 37 ವರ್ಷ 172 ದಿನ ವಯಸ್ಸಿನಲ್ಲಿ 100ನೇ ಟೆಸ್ಟ್ ಪಂದ್ಯದ ಕ್ಯಾಪ್ ಸ್ವೀಕರಿಸಲಿದ್ದಾರೆ. ಅವರು ಈ ಸಾಧನೆ ಮಾಡಿದ ಭಾರತದ ಅತಿ ಹಿರಿಯ ಮತ್ತು ವಿಶ್ವದ 6ನೇ ಹಿರಿಯ ಆಟಗಾರ ಎನಿಸಲಿದ್ದಾರೆ. ಸೌರವ್ ಗಂಗೂಲಿ 35 ವರ್ಷ 171 ದಿನ ವಯಸ್ಸಿನಲ್ಲಿ 100ನೇ ಟೆಸ್ಟ್ ಆಡಿದ್ದು ಹಿಂದಿನ ಭಾರತೀಯ ದಾಖಲೆ.
ಅಶ್ವಿನ್ಗೆ ಕುಂಬ್ಳೆ ಹಿಂದಿಕ್ಕುವ ಚಾನ್ಸ್
ಅಶ್ವಿನ್ ಧರ್ಮಶಾಲಾದಲ್ಲಿ 5 ವಿಕೆಟ್ ಗೊಂಚಲು ಪಡೆದರೆ ಭಾರತ ಪರ ಗರಿಷ್ಠ ಬಾರಿ ಈ ಸಾಧನೆ ಮಾಡಿದ ದಾಖಲೆ ನಿರ್ಮಿಸಲಿದ್ದಾರೆ. ಸದ್ಯ ಅವರು ಅನಿಲ್ ಕುಂಬ್ಳೆ (35) ಜತೆ ಸಮಬಲದಲ್ಲಿದ್ದಾರೆ. 100ನೇ ಟೆಸ್ಟ್ ಆಡುವುದಕ್ಕೆ ಮುನ್ನವೇ 500 ವಿಕೆಟ್ ಪೂರೈಸಿರುವ 2ನೇ ಬೌಲರ್ ಅಶ್ವಿನ್ ಆಗಿದ್ದಾರೆ. ಮುರಳೀಧರನ್ ಮೊದಲ ಸಾಧಕ.