ಕ್ರೀಡೆ

ಭಾರತ ಟಿ20 ತಂಡದ ಕೋಚ್​ ಹುದ್ದೆ ಆಫರ್​ ನಿರಾಕರಿಸಿದ ನೆಹ್ರಾ! ಕಾರಣವೇನು ಗೊತ್ತೇ?

ನವದೆಹಲಿ: ಐಪಿಎಲ್​ನಲ್ಲಿ ಗುಜರಾತ್​ ಟೈಟಾನ್ಸ್​ ತಂಡದ ಕೋಚ್​ ಆಗಿ ಉತ್ತಮ ಯಶಸ್ಸು ಕಂಡಿರುವ ಮಾಜಿ ಆಶಿಶ್​ ನೆಹ್ರಾ, ಭಾರತ ಟಿ20 ತಂಡಕ್ಕೆ ತರಬೇತುದಾರರಾಗಲು ಬಿಸಿಸಿಐ ನೀಡಿದ್ದ ಆಫರ್​ಅನ್ನು ತಿರಸ್ಕರಿಸಿದ್ದಾರೆ ಎಂದು ವರದಿಯಾಗಿದೆ.

ಎಲ್ಲ 3 ಪ್ರಕಾರದ ತಂಡಕ್ಕೆ ಕೋಚ್​ ಆಗಿ ದ್ರಾವಿಡ್​ ಅವಧಿ ವಿಸ್ತರಿಸುವ ಮುನ್ನ ಬಿಸಿಸಿಐ, ಟಿ20 ತಂಡದ ಹೊಣೆಯನ್ನು ನೆಹ್ರಾಗೆ ನೀಡಲು ಬಯಸಿತ್ತು. ಟಿ20 ವಿಶ್ವಕಪ್​ಗೆ ಮುನ್ನ ನೆಹ್ರಾಗೆ ತಂಡದ ತರಬೇತಿಯನ್ನು ವಹಿಸುವುದು ಯೋಜನೆಯಾಗಿತ್ತು. ಆದರೆ ಬಿಸಿಸಿಐ ನೀಡಿದ ಆರ್​ಅನ್ನು ನೆಹ್ರಾ ಒಪ್ಪಿಕೊಳ್ಳಲಿಲ್ಲ. 44 ವರ್ಷದ ನೆಹ್ರಾ 2025ರವರೆಗೆ ಗುಜರಾತ್​ ತಂಡದ ಕೋಚ್​ ಆಗಿ ಒಪ್ಪಂದ ಹೊಂದಿದ್ದು, ಅಲ್ಲಿಯವರೆಗೆ ರಾಷ್ಟ್ರೀಯ ತಂಡ ಸಹಿತ ಬೇರಾವುದೇ ಆಫರ್​ ಒಪ್ಪಿಕೊಳ್ಳಲು ಸಿದ್ಧರಿಲ್ಲ ಎನ್ನಲಾಗಿದೆ.

ಸದ್ಯ ಕುಟುಂಬದೊಂದಿಗೆ ಹೆಚ್ಚಿನ ಸಮಯ ಕಳೆಯಲು ಬಯಸಿರುವ ನೆಹ್ರಾ, ಎರಡೂವರೆ ತಿಂಗಳ ಅವಧಿಯಲ್ಲಿ ಮಾತ್ರ ಕಾರ್ಯನಿರ್ವಹಿಸಬಹುದಾದ ಐಪಿಎಲ್​ ಒಪ್ಪಂದಕ್ಕೆ ತೃಪ್ತಿಹೊಂದಿದ್ದಾರೆ ಎನ್ನಲಾಗಿದೆ. ಆದರೆ ಭವಿಷ್ಯದಲ್ಲಿ ಅವರು ಭಾರತ ಸೀಮಿತ ಓವರ್​ ತಂಡದ ಕೋಚ್​ ಆಗಿ ಅಧಿಕಾರ ಸ್ವೀಕರಿಸುವ ಸಾಧ್ಯತೆ ತಳ್ಳಿಹಾಕುವಂತಿಲ್ಲ.