ಕ್ರೀಡೆ

ಭಾರತ-ಕಿವೀಸ್ ನಡುವಿನ ಟೆಸ್ಟ್ ವಿಶ್ವಕಪ್ ಫೈನಲ್ ವೀಕ್ಷಿಸಲು ಪ್ರೇಕ್ಷಕರಿಗೆ ಪ್ರವೇಶ

ಲಂಡನ್: ಕರೊನಾ ವೈರಸ್ ಹಾವಳಿಯ ನಡುವೆ ಬಹುತೇಕ ಕ್ರೀಡಾ ಚಟುವಟಿಕೆಗಳು ಖಾಲಿ ಕ್ರೀಡಾಂಗಣದಲ್ಲೇ ನಡೆಯುತ್ತಿವೆ. ಆದರೆ ಪ್ರತಿಷ್ಠಿತ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್ (ಡಬ್ಲ್ಯುಟಿಸಿ) ಫೈನಲ್ ಪಂದ್ಯವನ್ನು ವೀಕ್ಷಿಸುವ ಅದೃಷ್ಟ ಕ್ರಿಕೆಟ್ ಪ್ರೇಮಿಗಳಿಗೆ ಸಿಗಲಿದೆ. ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಈ ಬಹುನಿರೀಕ್ಷಿತ ಕಾದಾಟವನ್ನು ರೋಸ್ ಬೌಲ್ ಮೈದಾನದಲ್ಲಿ ಪ್ರತಿದಿನ 4 ಸಾವಿರ ಪ್ರೇಕ್ಷಕರು ವೀಕ್ಷಿಸಲು ಅನುಮತಿ ಲಭಿಸಿದೆ. ಆತಿಥೇಯ ಹ್ಯಾಂಪ್‌ಶೈರ್ ಕೌಂಟಿ ಕ್ಲಬ್ ತಂಡದ ಮುಖ್ಯಸ್ಥ ರಾಡ್ ಬ್ರಾನ್ಸ್‌ಗ್ರೋವ್ ಈ ವಿಷಯವನ್ನು ಪ್ರಕಟಿಸಿದ್ದಾರೆ.

ಬ್ರಿಟನ್‌ನಲ್ಲಿ ಸದ್ಯ ಕರೊನಾ ಪರಿಸ್ಥಿತಿ ಸುಧಾರಿಸಿದ್ದು, ರೋಸ್‌ಬೌಲ್‌ನಲ್ಲೇ ಇತ್ತೀಚೆಗೆ ನಡೆದ ಲೈಸ್ಟಸ್ಟರ್‌ಶೈರ್ ಮತ್ತು ಹ್ಯಾಂಪ್‌ಶೈರ್ ನಡುವಿನ ಕೌಂಟಿ ಪಂದ್ಯವನ್ನು ವೀಕ್ಷಿಸಲು 1,500 ಪ್ರೇಕ್ಷಕರಿಗೆ ಪ್ರವೇಶ ಲಭಿಸಿತ್ತು. ಡಬ್ಲ್ಯುಟಿಸಿ ಫೈನಲ್ ಪಂದ್ಯ ಜೂನ್ 18ರಿಂದ 22ರವರೆಗೆ ನಡೆಯಲಿದೆ. 2019ರ ಸೆಪ್ಟೆಂಬರ್ ಬಳಿಕ ರೋಸ್ ಬೌಲ್‌ನಲ್ಲಿ ನಡೆದ ಕ್ರಿಕೆಟ್ ಪಂದ್ಯಕ್ಕೆ ಇದೇ ಮೊದಲ ಬಾರಿಗೆ ಪ್ರೇಕ್ಷಕರಿಗೆ ಪ್ರವೇಶ ನೀಡಲಾಗಿದೆ. ಮುಂಬರುವ ಕೆಲ ಕೌಂಟಿ ಪಂದ್ಯಗಳಿಗೂ ಪ್ರೇಕ್ಷಕರಿಗೆ ಪ್ರವೇಶ ಲಭಿಸಲಿದೆ ಎಂದು ಬ್ರಾನ್ಸ್‌ಗ್ರೋವ್ ತಿಳಿಸಿದ್ದಾರೆ.

ರೋಸ್ ಬೌಲ್ ಕ್ರೀಡಾಂಗಣ ಸುಮಾರು 20 ಸಾವಿರ ಪ್ರೇಕ್ಷಕರ ಸಾಮರ್ಥ್ಯ ಹೊಂದಿದೆ. ಆದರೆ ಇಂಗ್ಲೆಂಡ್ ಕ್ರಿಕೆಟ್ ಮಂಡಳಿ (ಇಸಿಬಿ) ಮತ್ತು ಐಸಿಸಿ ಸುಮಾರು 4 ಸಾವಿರ ಪ್ರೇಕ್ಷಕರಿಗೆ ಮಾತ್ರ ಅನುಮತಿ ನೀಡಲಿದೆ. ಈ ಪೈಕಿ ಶೇ. 50 ಪ್ರೇಕ್ಷಕರು ಐಸಿಸಿಯ ಪ್ರಾಯೋಜಕರ ಕಡೆಯಿಂದ ಬರಲಿದ್ದಾರೆ. ಉಳಿದ 2 ಸಾವಿರ ಟಿಕೆಟ್‌ಗಳನ್ನು ಸಾರ್ವಜನಿಕರಿಗೆ ಮಾರಾಟ ಮಾಡಲಾಗುವುದು. ಇದಕ್ಕಿಂತ ದುಪ್ಪಟ್ಟು ಟಿಕೆಟ್‌ಗಳ ಬೇಡಿಕೆ ಈಗಾಗಲೆ ನಮಗೆ ಬಂದಿದೆ ಎಂದು ಬ್ರಾನ್ಸ್‌ಗ್ರೋವ್ ಹೇಳಿದ್ದಾರೆ.

ಡಬ್ಲ್ಯುಟಿಸಿ ಫೈನಲ್‌ಗಾಗಿ ಇಂಗ್ಲೆಂಡ್‌ಗೆ ತೆರಳುವ ಮುನ್ನ ಟೀಮ್ ಇಂಡಿಯಾ ಸದ್ಯ ಮುಂಬೈನಲ್ಲಿ 14 ದಿನಗಳ ಕ್ವಾರಂಟೈನ್‌ಗೆ ಒಳಪಟ್ಟಿದೆ. ಜೂನ್ 2ರಂದು ಇಂಗ್ಲೆಂಡ್‌ಗೆ ತೆರಳಿದ ಬಳಿಕ ವಿರಾಟ್ ಕೊಹ್ಲಿ ಪಡೆ 10 ದಿನಗಳ ಕಾಲ ಸೌಥಾಂಪ್ಟನ್‌ನಲ್ಲೂ ಕ್ವಾರಂಟೈನ್ ಆಗಲಿದೆ. ಆದರೆ ಈ ಸಮಯದಲ್ಲಿ ಅಭ್ಯಾಸ ನಡೆಸಲು ಅನುಮತಿ ಸಿಗುವ ನಿರೀಕ್ಷೆ ಇದೆ.