ಕ್ರೀಡೆ

ಮೂವರು ಪ್ರಶಸ್ತಿ ಪುರಸ್ಕೃತರಿಗೆ ಕೋವಿಡ್​..!

ನವದೆಹಲಿ: ಅರ್ಜುನ ಪ್ರಶಸ್ತಿಗೆ ಭಾಜನರಾಗಿರುವ ಷಟ್ಲರ್​ ಸಾತ್ವಿಕ್​ ಸಾಯಿರಾಜ್​ ಸೇರಿದಂತೆ ರಾಷ್ಟ್ರೀಯ ಕ್ರೀಡಾ ಪ್ರಶಸ್ತಿ ವಿಜೇತರಾಗಿರುವ ಮೂವರಿಗೆ ಕರೊನಾ ಸೋಂಕು ಕಾಣಿಸಿಕೊಂಡಿದ್ದು, ಶನಿವಾರ ನಡೆಯಲಿರುವ ವರ್ಚುವಲ್​ ಕ್ರೀಡಾ ಪ್ರಶಸ್ತಿ ಪ್ರದಾನ ಸಮಾರಂಭದಿಂದ ದೂರ ಉಳಿಯಲಿದ್ದಾರೆ.

ಪ್ರಶಸ್ತಿ ಪುರಸ್ಕೃತ 74 ಮಂದಿಯ ಪೈಕಿ 65 ಜನರು ಹಾಜರಿರಲಿದ್ದಾರೆ ಎಂದು ಭಾರತೀಯ ಕ್ರೀಡಾ ಪ್ರಾಧಿಕಾರ (ಸಾಯ್​) ತಿಳಿಸಿದೆ. ಗೈರಾಗುತ್ತಿರುವ 9 ಮಂದಿಯ ಪೈಕಿ ಖೇಲ್​ರತ್ನ ಪುರಸ್ಕೃತ ಕ್ರಿಕೆಟಿಗ ರೋಹಿತ್​ ಶರ್ಮ, ಅರ್ಜುನ ಪುರಸ್ಕೃತ ಇಶಾಂತ್​ ಶರ್ಮ ಐಪಿಎಲ್​ ಆಡಲು ಯುಎಇಗೆ ತೆರಳಿದ್ದರೆ, ಉಳಿದವರು ಕ್ವಾರಂಟೈನ್​ ಮತ್ತು ಇತರ ಆರೋಗ್ಯ ಸಮಸ್ಯೆಯಿಂದಾಗಿ ಸಮಾರಂಭದಿಂದ ದೂರ ಉಳಿಯಲಿದ್ದಾರೆ. ಸಾತ್ವಿಕ್​ ಹೊರತಾಗಿ ಪಾಸಿಟಿವ್​ ಬಂದಿರುವ ಮತ್ತಿಬ್ಬರ ಹೆಸರನ್ನು ಬಹಿರಂಗಪಡಿಸಲಾಗಿಲ್ಲ.

ಇದೇ ಮೊದಲ ಬಾರಿಗೆ ರಾಷ್ಟ್ರೀಯ ಕ್ರೀಡಾ ಪ್ರಶಸ್ತಿ ಸಮಾರಂಭವನ್ನು ಆನ್​ಲೈನ್​ ಮೂಲಕ ಆಯೋಜಿಸಲಾಗಿದೆ. ಆರೋಗ್ಯ ಸಚಿವಾಲಯದ ಮಾರ್ಗಸೂಚಿಯಂತೆ ಪ್ರಶಸ್ತಿ ಪುರಸ್ಕೃತರನ್ನು ಕೋವಿಡ್​-19 ಪರೀೆಗೆ ಒಳಪಡಿಸಲಾಗಿದೆ. ಸಾಯ್​ ಕೇಂದ್ರಗಳಲ್ಲಿ ಪ್ರಶಸ್ತಿ ವಿಜೇತರು ಹಾಜರಿ: ರಾಷ್ಟ್ರಪತಿ ರಾಮನಾಥ ಕೋವಿಂದ್​ ರಾಷ್ಟ್ರಪತಿ ಭವನದಿಂದ ವಿಡಿಯೋ ಕಾನ್ಫೆರೆನ್ಸ್​ ಮೂಲಕ ಕ್ರೀಡಾ ಪ್ರಶಸ್ತಿಗಳನ್ನು ವಿತರಿಸಲಿದ್ದರೆ, ಪ್ರಶಸ್ತಿ ವಿಜೇತರು ದೇಶದ ವಿವಿಧ ಭಾಗಗಳ ಸಾಯ್​ ಕೇಂದ್ರಗಳಲ್ಲಿ ಹಾಜರಿದ್ದು ಪ್ರಶಸ್ತಿ ಸ್ವೀಕರಿಸಲಿದ್ದಾರೆ. ಕ್ರೀಡಾ ಸಚಿವ ಕಿರಣ್​ ರಿಜಿಜು, ಇನ್ನಿತರ ಅಧಿಕಾರಿಗಳು ವಿಜ್ಞಾನ ಭವನದಲ್ಲಿ ಕುಳಿತು ಸಮಾರಂಭ ವೀಕ್ಷಿಸಿಸಲಿದ್ದಾರೆ. ದೂರದರ್ಶನದಲ್ಲಿ ಕಾರ್ಯಕ್ರಮ ನೇರಪ್ರಸಾರ ಕಾಣಲಿದೆ.

ಬ್ಯಾಡ್ಮಿಂಟನ್​ ಆಟಗಾರ ಸಾತ್ವಿಕ್​ ಸಾಯಿರಾಜ್​ ರಾಂಕಿರೆಡ್ಡಿ, ಕಳೆದ ಒಂದು ವಾರದಿಂದ ಮನೆಯಲ್ಲೇ ಕ್ವಾರಂಟೈನ್​ ಆಗಿದ್ದಾರೆ. ಇದುವರೆಗೂ ಕೋವಿಡ್​-19 ಸೋಂಕಿನ ಹೆಚ್ಚಿನ ಲಕ್ಷಣಗಳು ಕಾಣಿಸಿಕೊಂಡಿಲ್ಲ ಎಂದು 20 ವರ್ಷದ ಷಟ್ಲರ್​ ತಿಳಿಸಿದ್ದಾರೆ. "ಇದು ಅನಿರೀಕ್ಷಿತವಾದರೂ ನಿಜ. ಕೆಲ ದಿನಗಳ ಹಿಂದೆ ಪರೀಕ್ಷೆಗೆ ಒಳಗಾಗಿದ್ದೆ. ಕಳೆದ ಐದು ದಿನಗಳಿಂದ ಕ್ವಾರಂಟೈನ್​ನಲ್ಲಿದ್ದೇನೆ. ಆರ್​ಟಿ-ಪಿಸಿಆರ್​ ಪರೀಕ್ಷೆಯಲ್ಲಿ ಪಾಸಿಟಿವ್​ ಬಂದಿದೆ' ಎಂದು ಸಾತ್ವಿಕ್​ ಹೇಳಿದ್ದಾರೆ. ಮುಂದಿನ 3 ದಿನಗಳಲ್ಲಿ ಮತ್ತೊಮ್ಮೆ ಪರೀಕ್ಷೆಗೆ ಒಳಗಾಗಲಿದ್ದಾರೆ. ಇದಕ್ಕೂ ಮೊದಲು ರಾಷ್ಟ್ರೀಯ ತರಬೇತಿ ಶಿಬಿರದ ವೇಳೆ ಡಬಲ್ಸ್​ ತಜ್ಞೆ ಸಿಕ್ಕಿ ರೆಡ್ಡಿ ಹಾಗೂ ಅವರ ಫಿಸಿಯೋ ಕಿರಣ್​ಗೂ ಕರೊನಾ ವೈರಸ್​ ಕಾಣಿಸಿಕೊಂಡಿತ್ತು. ಬಳಿಕ ಮರುದಿನವೇ ನಡೆದ ಮತ್ತೊಂದು ಟೆಸ್ಟ್​ನಲ್ಲಿ ನೆಗೆಟಿವ್​ ವರದಿ ಬಂದಿತ್ತು.