ಬೆಂಗಳೂರು: ಅರ್ಜುನ ಪ್ರಶಸ್ತಿ ಹಾಗೂ ದ್ರೋಣಾಚಾರ್ಯ ಪ್ರಶಸ್ತಿ ಪುರಸ್ಕೃತ ಕನ್ನಡಿಗ ಬಿ.ಸಿ. ರಮೇಶ್ ಕುಮಾರ್ ಪ್ರೊ ಕಬಡ್ಡಿ ಲೀಗ್‌ನಲ್ಲಿ ಆಡುವ ಬೆಂಗಳೂರು ಬುಲ್ಸ್ ತಂಡದ ನೂತನ ಮುಖ್ಯ ಕೋಚ್ ಆಗಿ ನೇಮಕಗೊಂಡಿದ್ದಾರೆ. 11 ಆವೃತ್ತಿಗಳಿಂದ ತಂಡಕ್ಕೆ ಮಾರ್ಗದರ್ಶನ ನೀಡಿದ್ದ ರಣಧೀರ್ ಸಿಂಗ್ ಸೆಹ್ರಾವತ್‌ರನ್ನು ಹುದ್ದೆಯಿಂದ ಬಿಡುಗಡೆಗೊಳಿಸಿದ ಕೆಲವೇ ಗಂಟೆಗಳಲ್ಲಿ ್ರಾಂಚೈಸಿ ರಮೇಶ್ ಹೆಸರನ್ನು ಮಂಗಳವಾರ ಅಧಿಕೃತ ೋಷಣೆ ಮಾಡಿದೆ. ಕಳೆದ ಆವೃತ್ತಿಯಲ್ಲಿ ಬೆಂಗಳೂರು ತಂಡದ ನೀರಸ ನಿರ್ವಹಣೆಯ ಹಿನ್ನೆಲೆಯಲ್ಲಿ ರಣಧೀರ್‌ರನ್ನು ಕೈ ಬಿಡಲಾಗಿದೆ ಎನ್ನಲಾಗಿದೆ.
ಟೂರ್ನಿಯ ಉದ್ಘಾಟನಾ ಆವೃತ್ತಿಯಿಂದಲೂ ರಣಧೀರ್ ಬೆಂಗಳೂರು ಬುಲ್ಸ್ ತಂಡದ ಪ್ರಮುಖ ಭಾಗವಾಗಿದ್ದರು. ರಣಧೀರ್ ಮಾರ್ಗದರ್ಶನದಲ್ಲಿ 2018-19ರ ಆವೃತ್ತಿಯಲ್ಲಿ ಬೆಂಗಳೂರು ಪ್ರಶಸ್ತಿ ಜಯಿಸಿತ್ತು. ಆಗ ಬಿ.ಸಿ. ರಮೇಶ್ ಸಹಾಯಕ ಕೋಚ್ ಆಗಿದ್ದರು. ನೂತನ ಕೋಚ್ ಆಗಿ ನೇಮಕಗೊಂಡ ಬಳಿಕ ವಿಜಯವಾಣಿ ಜತೆಗೆ ಮಾತನಾಡಿದ ರಮೇಶ್, ‘ರಾಜ್ಯದ ಯಾವುದೇ ಜಿಲ್ಲೆ, ಊರುಗಳಿಗೆ ತೆರಳಿದಾಗ ಬೆಂಗಳೂರು ಬುಲ್ಸ್ ತರಬೇತಿ ಬಳಗದಲ್ಲಿ ನೀವು ಯಾಕಿಲ್ಲ ಎಂಬುದು ಅಭಿಮಾನಿಗಳ ಪ್ರಶ್ನೆಯಾಗಿತ್ತು. ಪ್ರೊ ಕಬಡ್ಡಿಯಲ್ಲಿ ಬೇರೆ ತಂಡಗಳಿಗೆ ಕೋಚ್ ಆಗಿದ್ದಾಗ, ನನ್ನ ತವರಿನ ತಂಡಕ್ಕೆ ಏನೂ ಮಾಡಲು ಆಗುತ್ತಿಲ್ಲವಲ್ಲ ಎಂಬ ಬೇಸರವಿತ್ತು. ಬೆಂಗಳೂರು ಬುಲ್ಸ್ ತಂಡದೊಂದಿಗೆ ಮರಳಿ ಒಗ್ಗೂಡಿರುವುದಕ್ಕೆ ಬಹಳ ಸಂತೋಷವಿದೆ. ್ರಾಂಚೈಸಿಯೂ ನನಗೆ ದೊಡ್ಡ ಹುದ್ದೆಯ ಜತೆಗೆ ಜವಾಬ್ದಾರಿಯನ್ನೂ ನೀಡಿದೆ. ಮತ್ತೊಮ್ಮೆ ಬೆಂಗಳೂರು ಬುಲ್ಸ್ ತಂಡವನ್ನು ಚಾಂಪಿಯನ್ ಪಟ್ಟಕ್ಕೇರಿಸುವ ಮೂಲಕ ಅಭಿಮಾನಿಗಳ ಆಸೆ ಈಡೇರಿಸುವುದು ಮುಂದಿನ ಗುರಿಯಾಗಿದೆ’ ಎಂದು ತಿಳಿಸಿದರು.
ಐದನೇ ಆವೃತ್ತಿಯಲ್ಲಿ ಪುಣೇರಿ ತರಬೇತಿ ತಂಡದ ಭಾಗವಾಗಿದ್ದ ರಮೇಶ್, 2018ರ ಆವೃತ್ತಿ ಬಳಿಕ ಬೆಂಗಾಲ್ ವಾರಿಯರ್ಸ್ (ಸೀಸನ್ 7) ಹಾಗೂ ಪುಣೇರಿ ಪಲ್ಟಾನ್ (ಸೀಸನ್ 10) ತಂಡಗಳನ್ನು ಚಾಂಪಿಯನ್ ಪಟ್ಟಕ್ಕೇರಲು ಮಾರ್ಗದರ್ಶನ ನೀಡಿದ್ದರು. ಇವರ ಅವಧಿಯಲ್ಲಿ ಪುಣೇರಿ ಒಮ್ಮೆ ರನ್ನರ್ ಅಪ್ ಆಗಿತ್ತು. 11ನೇ ಆವೃತ್ತಿಯಲ್ಲೂ ರಮೇಶ್ ಮಾರ್ಗದರ್ಶನದಲ್ಲಿ ಪುಣೇರಿ ತಂಡ ಅಭಿಯಾನ ಆರಂಭಿಸಿತು. ಆದರೆ ನಿರೀಕ್ಷಿತ ನಿರ್ವಹಣೆ ತೋರುವಲ್ಲಿ ವಿಲವಾಗಿದ್ದರಿಂದ ಟೂರ್ನಿಯ ನಡುವೆಯೇ ಕೋಚ್ ಹುದ್ದೆಯನ್ನು ಅವರು ತ್ಯಜಿಸಿದ್ದರು.
ಪ್ರೊ ಕಬಡ್ಡಿ ಹೊರತುಪಡಿಸಿ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ತಂಡಗಳಿಗೆ ತರಬೇತಿ ನೀಡಿರುವ ಅನುಭವ ಹೊಂದಿರುವ ರಮೇಶ್, 2015ರ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಕರ್ನಾಟಕ ತಂಡ ಬೆಳ್ಳಿ ಪದಕ ಜಯಿಸಲು ನೆರವಾಗಿದ್ದರು. ನಂತರ 2016ರ ವಿಶ್ವಕಪ್‌ನಲ್ಲಿ ಅರ್ಜೆಂಟೀನಾ ಪುರುಷರ ತಂಡಕ್ಕೆ ಕೋಚಿಂಗ್ ಮಾಡಿರುವ ಅನುಭವ ಹೊಂದಿದ್ದಾರೆ.