ಕ್ರೀಡೆ

ಅಗ್ರಸ್ಥಾನ ಭದ್ರಪಡಿಸಿಕೊಂಡ ಜೈಪುರ ಪಿಂಕ್‌ ಪ್ಯಾಂಥರ್ಸ್: ‌16ನೇ ಬಾರಿ ಅರ್ಜುನ್‌ ಸೂಪರ್‌ 10

ಪಂಚಕುಲ: ದಾಖಲೆಯ 16ನೇ ಬಾರಿ ಸೂಪರ್‌ 10 ಅಂಕ ಗಳಿಸಿದ ರೇಡರ್‌ ಅರ್ಜುನ್‌ ದೇಶ್ವಾಲ್‌(13 ಅಂಕ) ಅವರ ಬಲದಿಂದ ಮಿಂಚಿದ ಜೈಪುರ ಪಿಂಕ್‌ ಪ್ಯಾಂಥರ್ಸ್‌ ತಂಡ ಪ್ರೊ ಕಬಡ್ಡಿ ಲೀಗ್‌ 10ನೇ ಆವೃತ್ತಿಯ ತನ್ನ ಅಂತಿಮ ಲೀಗ್‌ ಪಂದ್ಯದಲ್ಲಿಗುಜರಾತ್‌ ಜೈಂಟ್ಸ್‌ ವಿರುದ್ಧ 9 ಅಂಕಗಳಿಂದ ಭರ್ಜರಿ ಜಯ ದಾಖಲಿಸಿತು.

ತೌವ್‌ ದೇವಿಲಾಲ್‌ ಒಳಾಂಗಣ ಕ್ರೀಡಾಂಗಣದಲ್ಲಿಸೋಮವಾರ ನಡೆದ ಪಂದ್ಯದಲ್ಲಿಜೈಪುರ ತಂಡ 45-36 ಅಂಕಗಳಿಂದ ಗುಜರಾತ್‌ ತಂಡಕ್ಕೆ ಸೋಲುಣಿಸಿತು. ಇದರೊಂದಿಗೆ ಆಡಿದ 22 ಪಂದ್ಯಗಳಲ್ಲಿ16 ಗೆಲುವು ದಾಖಲಿಸಿದ ಪ್ಯಾಂಥರ್ಸ್‌ ಒಟ್ಟು 92 ಅಂಕಗಳನ್ನು ಕಲೆಹಾಕಿ ಅಂಕಪಟ್ಟಿಯಲ್ಲಿಅಗ್ರಸ್ಥಾನಿಯಾಗಿ ಲೀಗ್‌ ಹಂತವನ್ನು ಪೂರ್ಣಗೊಸಿತು. ಅತ್ತ ಕೊನೆಯ ಲೀಗ್‌ ಪಂದ್ಯದಲ್ಲಿಸೋತ ಗುಜರಾತ್‌ ನೇರವಾಗಿ ಸೆಮಿಫೈನಲ್ಸ್‌ ಪ್ರವೇಶಿಸುವಲ್ಲಿ ವಿಫಲಗೊಂಡಿತು. ಗುಜರಾತ್‌ ಪರ ಪರ್ತೀಕ್‌ ದಹಿಯಾ 14 ಅಂಕ ಗಳಿಸಿದರೆ, ದೀಪಕ್‌ 6 ಅಂಕ ಗಳಿಸಿದರು. ಜೈಪುರ

ಭಾರಿ ಮುನ್ನಡೆಯೊಂದಿಗೆ ದ್ವಿತೀಯಾರ್ಧ ಆರಂಭಿಸಿದ ಪ್ಯಾಂಥರ್ಸ್‌, ಆತ್ಮವಿಶ್ವಾಸದಿಂದಲೇ ಹಿಂದಿನ ಲಯವನ್ನು ಮುಂದುವರಿಸಿತು. ಇದರ ಫಲವಾಗಿ 28ನೇ ನಿಮಿಷದಲ್ಲಿಮೂರನೇ ಬಾರಿ ಗುಜರಾತ್‌ ಜೈಂಟ್ಸ್‌ ತಂಡವನ್ನು ಆಲೌಟ್‌ ಮಾಡಿದ ಪಿಂಕ್‌ ಪ್ಯಾಂಥರ್ಸ್‌ ಮುನ್ನಡೆಯ ಅಂತರವನ್ನು 15ಕ್ಕೂ ಹೆಚ್ಚು ಅಂಕಗಳಿಗೆ ವಿಸ್ತರಿಸಿಕೊಂಡಿತು.

30ನೇ ನಿಮಿಷಕ್ಕೆ 21-38ರಲ್ಲಿಗುಜರಾತ್‌ ಪುಟಿದೇಳುವ ಸಾಹಸ ನಡೆಸಿತು. ಪಂದ್ಯದುದ್ದಕ್ಕೂ ಏಕಾಂಗಿ ಹೋರಾಟ ನಡೆಸಿದ ಪರ್ತೀಕ್‌ ಚುರುಕಿನ ರೇಡಿಂಗ್‌ ನಡೆಸಿ ನಿಯಮಿತವಾಗಿ ಅಂಕ ತಂದರು. ಇದರ ಫಲವಾಗಿ 32ನೇ ನಿಮಿಷದಲ್ಲಿಮೊದಲ ಬಾರಿ ಜೈಪುರ ತಂಡವನ್ನು ಆಲೌಟ್‌ ಮಾಡಿದ ಗುಜರಾತ್‌, ಸುಲಭವಾಗಿ ಸೋಲು ಒಪ್ಪಿಕೊಳ್ಳದಿರುವಂತೆ ತೋರಿತು. ಪರ್ತೀಕ್‌ ಹೋರಾಟಕ್ಕೆ ದೀಪಕ್‌ ಸಿಂಗ್‌ ಕೂಡ ಕೈಜೋಡಿಸಿದರು. ಇದು ಗುಜರಾತ್‌ ತಂಡದ ಹಿನ್ನಡೆಯನ್ನು 32-43ಕ್ಕೆ ತಗ್ಗಿಸಿತು. ಇದೇ ವೇಳೆ ಪರ್ತೀಕ್‌ ದಹಿಯಾ ತಮ್ಮ ಒಟ್ಟಾರೆ ರೇಡಿಂಗ್‌ ಪಾಯಿಂಟ್ಸ್‌ಗಳ ದಾಖಲೆಯನ್ನು 300ರ ಗಡಿ ದಾಟಿಸಿದರು. ಆದರೆ ಆದಾಗಲೇ ಗೆಲುವಿನ ಸನಿಹದಲ್ಲಿದ್ದ ಪಿಂಕ್‌ ಪ್ಯಾಂಥರ್ಸ್‌ ರಕ್ಷ ಣಾತ್ಮಕ ಆಟಕ್ಕೆ ಆದ್ಯತೆ ನೀಡುವ ಮೂಲಕ ತನ್ನ ಅಗ್ರಪಟ್ಟವನ್ನು ಮತ್ತಷ್ಟು ಭದ್ರಪಡಿಸಿಕೊಂಡಿತು.

ಅರ್ಜುನ್‌ ದೇಶ್ವಾಲ್‌ ಮತ್ತು ಶುಭಂ ಶೆಲ್ಕೆ ಅವರ ಅತ್ಯುತ್ತಮ ಆಟದ ಬಲದಿಂದ ಜೈಪುರ ಪಿಂಕ್‌ ಪ್ಯಾಂಥರ್ಸ್‌ ಪಂದ್ಯದ ಮೊದಲ ಅವಧಿಯ ಮುಕ್ತಾಯಕ್ಕೆ 28-14 ಅಂಕಗಳಿಂದ ಮೇಲುಗೈ ಸಾಧಿಸಿತು.

ಪಂದ್ಯದ ಆರಂಭದಿಂದಲೇ ರೇಡಿಂಗ್‌ ಮತ್ತು ಟ್ಯಾಕಲ್‌ನಲ್ಲಿಕೌಶಲ್ಯಯುತ ಆಟ ಪ್ರದರ್ಶಿಸಿದ ಲೀಗ್‌ ಲೀಡರ್‌ ಪ್ಯಾಂಥರ್ಸ್‌ ಎದುರಾಳಿ ತಂಡದ ಮೇಲೆ ಒತ್ತಡ ಹೇರಿತು. ಕೇವಲ ಪಂದ್ಯ ಆರಂಭವಾಗಿ ಮೂರನೇ ನಿಮಿಷದಲ್ಲಿಗುಜರಾತ್‌ ಜಯಂಟ್ಸ್‌ ತಂಡವನ್ನು ಆಲೌಟ್‌ ಮಾಡಿ ಜೈಪುರ ಆಟಗಾರರು, ವಿರಾಮದವರೆಗೂ ಮೇಲುಗೈ ಸಾಧಿಸಿದರು.

ಸೂಪರ್‌ ರೇಡ್‌ನಲ್ಲಿಕಂಗೊಳಿಸಿದ ಪ್ಯಾಂಥರ್ಸ್‌ 17ನೇ ನಿಮಿಷದಲ್ಲಿಮತ್ತೊಮ್ಮೆ ಗುಜರಾತ್‌ ತಂಡವನ್ನು ಕಟ್ಟಿಹಾಕುವ ಮೂಲಕ ವಿರಾಮಕ್ಕೆ 14 ಅಂತರ ಕಾಯ್ದುಕೊಳ್ಳುವಲ್ಲಿಯಶಸ್ವಿಯಾಯಿತು. ಜೈಯಂಟ್ಸ್‌ ಮೊದಲ ಅವಧಿಯಲ್ಲಿರೇಡಿಂಗ್‌ ವಿಭಾಗದಲ್ಲಿ12 ಅಂಕ ಗಳಿಸಿದರೆ, ಪ್ಯಾಂಥರ್ಸ್‌ 17 ಅಂಕ ಕಲೆಹಾಕಿದ್ದು, ತಂಡದ ಆಕ್ರಮಣಕಾರಿ ಆಟಕ್ಕೆ ಸಾಕ್ಷಿಯಾಯಿತು.

ಫೆಬ್ರವರಿ 20ರಂದು ಯು ಮುಂಬಾ ಮತ್ತು ತೆಲುಗು ಟೈಟನ್ಸ್‌ ತಂಡಗಳು ಪೈಪೋಟಿ ನಡೆಸಲಿವೆ.