ಬೆಂಗಳೂರು: 18ನೇ ಆವೃತ್ತಿಯ ಐಪಿಎಲ್ ಶುರುವಾಗುವುದಕ್ಕೆ ದಿನಗಣನೆ ಆರಂಭವಾಗಿದ್ದು, ಕ್ರೀಡಾಭಿಮಾನಿಗಳು ವಿಶ್ವದ ಮಿಲಿಯನ್ ಡಾಲರ್ ಟೂರ್ನಿಯನ್ನು ಕಣ್ತುಂಬಿಕೊಳ್ಳಲು ಕಾತುರದಿಂದ ಕಾಯುತ್ತಿದ್ದಾರೆ. ಟೂರ್ನಿಯ ಮೊದಲ ಪಂದ್ಯದಲ್ಲಿ ಆರ್ಸಿಬಿ (RCB) ಹಾಗೂ ಹಾಲಿ ಚಾಂಪಿಯನ್ಸ್ ಕಲ್ಕತ್ತಾ ನೈಟ್ರೈಡರ್ಸ್ ಮುಖಾಮುಖಿಯಾಗಲಿದ್ದು, ಹೈವೋಲ್ಟೇಜ್ ಪಂದ್ಯವನ್ನು ವೀಕ್ಷಿಸಲು ಜನ ಕಾತುರರಾಗಿದ್ದಾರೆ.
ಇನ್ನೂ ಈ ಬಾರಿಯ ಟೂರ್ನಿಯಲ್ಲಿ ಕಪ್ ಗೆಲ್ಲುವ ವಿಶ್ವಾಸದೊಂದಿಗೆ ಆರ್ಸಿಬಿ (RCB) ಕಣಕ್ಕಿಳಿಯುತ್ತಿದ್ದು, ಬಲಿಷ್ಠ ಪಡೆಯನ್ನೇ ಕಟ್ಟಿದೆ. 2024ರ ನವೆಂಬರ್ ತಿಂಗಳಲ್ಲಿ ನಡೆದ ಮೆಗಾ ಹರಾಜು ಪ್ರಕ್ರಿಯೆಯಲ್ಲಿ ಅಳೆದು ತೂಗಿ ಆಟಗಾರರನ್ನು ಖರೀದಿಸುವ ಮೂಲಕ ಆರ್ಸಿಬಿ ಫ್ರಾಂಚೈಸಿಯು ಅಭಿಮಾನಿಗಳ ಬಹುವರ್ಷದ ಕನಸನ್ನು ಸಾಕಾರಗೊಳಿಸುವ ಭರವಸೆಯನ್ನು ನೀಡಿದ್ದು, ತಂಡದಲ್ಲಿ ಕನ್ನಡಿಗರು ಹೆಚ್ಚಾಗಿ ಇಲ್ಲದಿರುವುದು ಅಭಿಮಾನಿಗಳ ಬೇಸರಕ್ಕೆ ಕಾರಣವಾಗಿದೆ. ಈ ಕುರಿತಾಗಿ ಮಾಜಿ ಕ್ರಿಕೆಟಿಗ ವೆಂಕಟೇಶ್ ಪ್ರಸಾದ್ ಮಾತನಾಡಿದ್ದಾರೆ.
ಜಿಯೋಹಾಟ್ಸ್ಟಾರ್ಗೆ ನೀಡಿದ ಸಂದರ್ಶನದಲ್ಲಿ ಈ ಬಗ್ಗೆ ಮಾತನಾಡಿರುವ ವೆಂಕಟೇಶ್ ಪ್ರಸಾದ್, ಒಂದು ತಂಡವನ್ನು ಹೇಗೆ ನಿರ್ವಹಿಸಲಾಗುತ್ತದೋ ಅದರ ಮೇಲೆ ಉಂಟಾಗುವ ವ್ಯತ್ಯಾಸವನ್ನು ನಾವು ನೋಡಬಹುದಾಗಿದೆ. ಬೇರೆ ತಂಡಗಳು ಸ್ಥಳೀಯ ಪ್ರತಿಭೆಗಳ ಮೇಲೆ ನಂಬಿಕೆ ಇಡುತ್ತಿವೆ. ಆದರೆ, ಆರ್ಸಿಬಿ (RCB) ಮಾತ್ರ ಸ್ಥಳೀಯ ಪ್ರತಿಭೆಗಳ ಮೇಲೆ ಯಾಕೆ ನಂಬಲು ತಯಾರಿಲ್ಲ ಎಂಬುದು ನನಗೆ ಅರ್ಥವಾಗುತ್ತಿಲ್ಲ. ಅವರು ಒಂದು ಬ್ರ್ಯಾಂಡ್ ಅನ್ನು ನಿರ್ಮಿಸುತ್ತಿದ್ದಾರೆಯೇ ಅಥವಾ ಅವರು ನಿಜವಾಗಿಯೂ ಐಪಿಎಲ್ ಗೆಲ್ಲುವತ್ತ ಗಮನಹರಿಸುತ್ತಿದ್ದಾರೆಯೇ? ಅವರು ತಮ್ಮ ಆಟಗಾರರಿಂದ ಅತ್ಯುತ್ತಮವಾದದ್ದನ್ನು ಪಡೆಯಬೇಕಾಗಿದೆ, ಅದು ಇಲ್ಲಿಯವರೆಗೆ ಆಗಿಲ್ಲ ಎಂದು ಫ್ರಾಂಚೈಸಿ ನಡೆಗೆ ಕಿಡಿಕಾರಿದ್ದಾರೆ.
ಕಳೆದ ಕೆಲ ವರ್ಷದಲ್ಲಿ ಆರ್ಸಿಬಿಯಲ್ಲಿ ಕನ್ನಡಿಗರಿಗೆ ಅಷ್ಟಾಗಿ ಪ್ರಾತಿನಿಧ್ಯ ಸಿಗದಿರುವುದು ಅಭಿಮಾನಿಗಳ ಚಿಂತೆಗೆ ಕಾರಣವಾಗಿದೆ. ಕೆ.ಎಲ್. ರಾಹುಲ್ ಬಳಿಕ ದೇವದತ್ ಪಡಿಕ್ಕಲ್, ವಿಜಯ್ಕುಮಾರ್ ವೈಶಾಕ್, ಹೊರತುಪಡಿಸಿದರೆ ಮನೋಝ್ ಭಾಂಡಗೆ ತಂಡದಲ್ಲಿದ್ದರೂ ಈವರೆಗೆ ಆಡುವ ಅವಕಾಶವನ್ನು ಪಡೆದಿಲ್ಲ. ಈ ವಿಚಾರ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದೆ. ಕಪ್ ಗಲ್ಲದಿರುವುದು ಒಂದು ಕಡೆಯಾದರೆ ಮತ್ತೊಂದೆಡೆ ಕನ್ನಡಿಗರಿಗೆ ಅವಕಾಶ ಸಿಗದಿರುವುದು ಅಭಿಮಾನಿಗಳ ಬೇಸರಕ್ಕೆ ಕಾರಣವಾಗಿದೆ. ಈ ಬಾರಿಯ ಟೂರ್ನಿಯಲ್ಲಿ ಏನಾಗಲಿದೆ ಎಂದು ಕಾದು ನೋಡಬೇಕಿದೆ.