ಮುಂಬೈ: ವಿಶ್ವದ ಶ್ರೀಮಂತ ಕ್ರಿಕೆಟ್ ಟೂರ್ನಿಗಳಲ್ಲಿ ಒಂದಾದ ಐಪಿಎಲ್ (IPL) ಆರಂಭವಾಗುವುದಲ್ಲೆ ಹಲವು ತಿಂಗಳುಗಳು ಬಾಕಿ ಉಳಿದಿದ್ದು, ಒಂದಿಲ್ಲೊಂದು ಕಾರಣಕ್ಕೆ ಕ್ರೀಡಾಭಿಮಾನಿಗಳ ಗಮನ ಸೆಳೆಯುತ್ತಿದೆ. ನವೆಂಬರ್ 24-25ರಂದು ಸೌದಿ ಅರೇಬಿಯಾದ ಜೆಡ್ಡಾದಲ್ಲಿ ನಡೆದ ಮೆಗಾ ಹರಾಜು ಪ್ರಕ್ರಿಯೆಯಲ್ಲಿ 62 ವಿದೇಶಿಯರು ಸೇರಿದಂತೆ ಒಟ್ಟು 182 ಮಂದಿ ಆಟಗಾರರು ತಂಡಗಳಿಗೆ ಮಾರಾಟವಾಗಿದ್ದು, 10 ತಂಡಗಳು ಒಟ್ಟಾರೆ 639.15 ಕೋಟಿ ರೂ. ವ್ಯಯಿಸಿದ್ದು, ಒಟ್ಟು 8 ಆರ್ಟಿಮ್ ಬಳಕೆ ಮಾಡಲಾಗಿದೆ. ಈ ಬಾರಿಯ ಮೆಗಾ ಹರಾಜಿನಲ್ಲಿ ನಿರೀಕ್ಷೆ ಮೂಡಿಸಿದ್ದ ಆಟಗಾರರು ಅನ್ಸೋಲ್ಡ್ ಆಗಿದ್ದು, ಅಚ್ಚರಿಗೆ ಕಾರಣವಾಗಿದ್ದು, ಮುಂಬೈ ಮೂಲದ ಪೃಥ್ವಿ ಶಾ (Prithvi Shaw) ಕೂಡ ಮಾರಾಟವಾಗದಿರುವುದು ಹಲವು ಅಚ್ಚರಿಗೆ ಕಾರಣವಾಗಿದೆ.
2018ರಲ್ಲಿ ಭಾರತ ತಂಡದ ಪದಾರ್ಪಣೆ ಮಾಡಿದ್ದ ಪೃಥ್ವಿ (Prithvi Shaw) ತಾನಾಡಿದ ಮೊದಲ ಮ್ಯಾಚ್ನಲ್ಲೇ ಶತಕ ಸಿಡಿಸುವ ಮೂಲಕ ಭವಿಷ್ಯದ ಸಚಿನ್, ಸೆಹ್ವಾಗ್ ಎಂದೆಲ್ಲಾ ಕರೆಸಿಕೊಂಡಿದ್ದರು. ಐಪಿಎಲ್ಗೆ ಪದಾರ್ಪಣೆ ಮಾಡಿದ 8 ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ಹರಾಜಿನಲ್ಲಿ ಕಾಣಿಸಿಕೊಂಡ ಪೃಥ್ವಿ ಶಾ ಅನ್ಸೋಲ್ಡ್ ಆಗಿದ್ದು, ಹಲವು ಅಚ್ಚರಿಗೆ ಕಾರಣವಾಗಿದೆ. ಯುವ ಕ್ರಿಕೆಟಿಗ (Cricketer) ಮಾಡಿದ ತಪ್ಪುಗಳೇ ಆತನಿಗೆ ಮುಳುವಿಗೆ ಕಾರಣವೆಂದು ಹೇಳಲಾಗಿದ್ದು, ದಿಗ್ಗಜ ಆಟಗಾರರು ನೀಡಿದ ಸಲಹೆಯನ್ನು ದಿಕ್ಕರಿಸಿದ ಪರಿಣಾಮ ಅನ್ಸೋಲ್ಡ್ ಆಗಿದ್ದಾರೆ ಎಂದು ಹೇಳಲಾಗಿದೆ.
ಸದ್ಯ ಫಿಟ್ನೆಸ್ ಸಮಸ್ಯೆ ಹಾಗೂ ಬ್ಯಾಟಿಂಗ್ ಲಯ ಕಂಡುಕೊಳ್ಳಲು ಪರದಾಡುತ್ತಿರುವ ಪೃಥ್ವಿಗೆ ಮಾಜಿ ಕ್ರಿಕೆಟಿಗರಾದ ಸಚಿನ್ ತೆಂಡೂಲ್ಕರ್, ಸೌರವ್ ಗಂಗೂಲಿ ಹಾಗೂ ರಾಹುಲ್ ದ್ರಾವಿಡ್ ಸಲಹೆ ನೀಡಿದ್ದರು. ಈ ಸಲಹೆಯನ್ನು ನಿರ್ಲ್ಯಕ್ಷಿಸಿದ ಪರಿಣಾಮ ಇಂದು ಯುವ ಕ್ರಿಕೆಟಿಗ ಐಪಿಎಲ್ ಮೆಗಾ ಹರಾಜಿನಲ್ಲಿ ಅನ್ಸೋಲ್ಡ್ ಆಗಿ ಉಳಿದಿದ್ದು, ಈ ಬಗ್ಗೆ ಬಿಸಿಸಿಐ ಆಯ್ಕೆ ಸಮಿತಿಯ ಮಾಜಿ ಸದಸ್ಯರೊಬ್ಬರು ಮಾತನಾಡಿದ್ದು, ಯುವ ಕ್ರಿಕೆಟಿಗನ ವಿರುದ್ಧ ಹರಿಹಾಯ್ದಿದ್ದಾರೆ.
ಖಾಸಗಿ ಸುದ್ದಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಈ ಬಗ್ಗೆ ಮಾತನಾಡಿರುವ ಮಾಜಿ ಸದಸ್ಯ, ಪೃಥ್ವಿ ಶಾ ಡೆಲ್ಲಿ ಕ್ಯಾಪಿಟಲ್ಸ್ ತಂಡದಲ್ಲಿದ್ದರು. ಡಿಸಿಯಲ್ಲಿಯೇ, ಅವರು ತಮ್ಮ ಅಂಡರ್ -19 ಭಾರತದ ತರಬೇತುದಾರರಾಗಿದ್ದ ರಾಹುಲ್ ದ್ರಾವಿಡ್, ರಿಕಿ ಪಾಂಟಿಂಗ್ ಮತ್ತು ಸೌರವ್ ಗಂಗೂಲಿ ಅವರೊಂದಿಗೆ ಸಂವಹನ ನಡೆಸುವ ಮತ್ತು ಕಲಿಯುವ ಅವಕಾಶವನ್ನು ಕಳೆದುಕೊಂಡರು. ಅವರ ಸಲಹೆಗಳನ್ನು ಕಡೆಗಣಿಸಿದರು. ಇದಕ್ಕಿಂತ ದುರಂತ ಮತ್ತೊಂದಿಲ್ಲ.
ದಿಗ್ಗಜ ಕ್ರಿಕೆಟಿಗರೇ ಆತನಿಗೆ ಮಾರ್ಗದರ್ಶಕರಾಗಿದ್ದರು. ಆದರೂ ಕಲಿತಿದ್ದು ಶೂನ್ಯ. ಪೃಥ್ವಿ ಜೊತೆಗೆ ಸಚಿನ್ ಕೂಡ ಮಾತಾಡಿದ್ದಾರೆ. ಹಾಗಿದ್ದರೆ ಪೃಥ್ವಿಗೆ ಸಲಹೆ ನೀಡಿದ ಈ ದಿಗ್ಗಜ ಆಟಗಾರರು ಮೂರ್ಖರೇ ಇಷ್ಟೆಲ್ಲಾ ಬೆಂಬಲ ಇದ್ದರೂ ಆತನಲ್ಲಿ ಏನಾದರೂ ಬದಲಾವಣೆ ಕಾಣಲಿಲ್ಲ. ಈ ಕಾರಣಕ್ಕಾಗಿ ಆತ ಅನ್ಸೋಲ್ಡ್ ಆಗಿದ್ಧಾನೆ ಎಂದು ಗುಡುಗಿದ್ದಾರೆ.
ರೆಸ್ಟ್ ಆಫ್ ಇಂಡಿಯಾ ವಿರುದ್ಧದ ಇರಾನಿ ಕಪ್ನಲ್ಲಿ ಮುಂಬೈ ಪರ 2ನೇ ಇನ್ನಿಂಗ್ಸ್ನಲ್ಲಿ 76 ರನ್ ಗಳಿಸಿದ್ದ ಪೃಥ್ವಿ ಶಾ, ಪ್ರಸ್ತುತ ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ರನ್ ಗಳಿಸಲು ಪರದಾಡುತ್ತಿದ್ದಾರೆ. ಇದಲ್ಲದೆ ಫಿಟ್ನೆಸ್ ಸಮಸ್ಯೆ ಕೂಡ ಫೃಥ್ವಿ ಶಾರನ್ನು ಕಾಡುತ್ತಿದ್ದು, ಭವಿಷ್ಯದ ಹಾದಿ ಕಷ್ಟ ಎಂದು ಹೇಳಲಾಗಿದೆ. 2025ರಲ್ಲಿ ನಡೆಯಲಿರುವ 18ನೇ ಆವೃತ್ತಿಯ ಐಪಿಎಲ್ ಮಾರ್ಚ್ 14ರಂದು ಪ್ರಾರಂಭವಾಗಿ ಮೇ 25ರವರೆಗೆ ನಡೆಯಲಿದೆ.