ಮೆಲ್ಬೋರ್ನ್: ಮಧ್ಯಮ ಕ್ರಮಾಂಕದ ನೀರಸ ನಿರ್ವಹಣೆಯಿಂದಾಗಿ ಭಾರತ ತಂಡ ಮಹಿಳೆಯರ ಟಿ20 ತ್ರಿಕೋನ ಸರಣಿಯಲ್ಲಿ ತನ್ನ 3ನೇ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ 4 ವಿಕೆಟ್ಗಳಿಂದ ಸೋಲು ಕಂಡಿದೆ. ಇದರಿಂದ ಭಾರತ ತಂಡದ ಫೈನಲ್ ಹಾದಿ ಕಠಿಣಗೊಂಡಿದ್ದು, ಶನಿವಾರ ನಡೆಯಲಿರುವ ತನ್ನ ಅಂತಿಮ ಲೀಗ್ ಪಂದ್ಯದಲ್ಲಿ ಆತಿಥೇಯ ಆಸ್ಟ್ರೇಲಿಯಾ ವಿರುದ್ಧ ಗೆಲ್ಲಲೇಬೇಕಾದ ಒತ್ತಡಕ್ಕೆ ಸಿಲುಕಿದೆ.
ಟಾಸ್ ಸೋತು ಬ್ಯಾಟಿಂಗ್ಗೆ ಇಳಿದ ಭಾರತ ತಂಡ, ಎಡಗೈ ಬ್ಯಾಟುಗಾರ್ತಿ ಸ್ಮೃತಿ ಮಂದನಾ (45 ರನ್, 40 ಎಸೆತ, 7 ಬೌಂಡರಿ, 1 ಸಿಕ್ಸರ್) ನೀಡಿದ ಉತ್ತಮ ಆರಂಭದ ಲಾಭವೆತ್ತಲು ವಿಫಲವಾಗಿ 6 ವಿಕೆಟ್ಗೆ 123 ರನ್ಗಳ ಸಾಧಾರಣ ಮೊತ್ತಕ್ಕೆ ತೃಪ್ತಿಪಟ್ಟಿತು. ಪ್ರತಿಯಾಗಿ ಇಂಗ್ಲೆಂಡ್ ತಂಡಕ್ಕೆ ಕನ್ನಡತಿ ರಾಜೇಶ್ವರಿ ಗಾಯಕ್ವಾಡ್ (23ಕ್ಕೆ 3) ಕಡಿವಾಣ ಹಾಕಲು ಯತ್ನಿಸಿದರೂ, 18.5 ಓವರ್ಗಳಲ್ಲಿ 6 ವಿಕೆಟ್ಗೆ 124 ರನ್ ಪೇರಿಸಿ ಜಯಿಸಿತು. ನಥಾಲಿ ಸ್ಕೀವರ್ (50 ರನ್, 38 ಎಸೆತ, 6 ಬೌಂಡರಿ, 1 ಸಿಕ್ಸರ್) ಬಿರುಸಿನ ಅರ್ಧಶತಕ ಸಿಡಿಸಿ ಆಂಗ್ಲರ ಚೇಸಿಂಗ್ಗೆ ಬಲ ತುಂಬಿದರು.
ಭಾರತ: 6 ವಿಕೆಟ್ಗೆ 123 (ಶೆಫಾಲಿ 8, ಸ್ಮೃತಿ 45, ಜೆಮೀಮಾ 23, ಹರ್ವನ್ಪ್ರೀತ್ 14, ವೇದಾ 2, ದೀಪ್ತಿ 9*, ಶ್ರುಬ್ಸೋಲ್ 31ಕ್ಕೆ 3, ಬ್ರಂಟ್ 23ಕ್ಕೆ 2), ಇಂಗ್ಲೆಂಡ್: 18.5 ಓವರ್ಗಳಲ್ಲಿ 6 ವಿಕೆಟ್ಗೆ 124 (ವ್ಯಾಟ್ 14, ಸ್ಕೀವರ್ 50, ವಿಲ್ಸನ್ 20*, ರಾಜೇಶ್ವರಿ 23ಕ್ಕೆ 3, ರಾಧಾ 24ಕ್ಕೆ 1). ಪಂದ್ಯಶ್ರೇಷ್ಠ: ಅನ್ಯಾ ಶ್ರುಬ್ಸೋಲ್.