ಕ್ರೀಡೆ

ಕರ್ನಾಟಕವನ್ನು ಕಾಡಿದ ಅನುಸ್ತೂಪ್ ಶತಕ: ಮೊದಲ ದಿನ ಕೌಶಿಕ್ ಬಿಗಿ ದಾಳಿ

ಬೆಂಗಳೂರು: ವೇಗಿ ವಾಸುಕಿ ಕೌಶಿಕ್ (29ಕ್ಕೆ 3) ಬಿಗಿ ಬೌಲಿಂಗ್ ದಾಳಿ ಸಂಘಟಿಸಿದರೂ ಕರ್ನಾಟಕ ತಂಡದ ಇತರ ಬೌಲರ್‌ಗಳಿಂದ, ಅದರಲ್ಲೂ ಪ್ರಮುಖವಾಗಿ ಸ್ಪಿನ್ನರ್‌ಗಳಿಂದ ಉತ್ತಮ ಬೆಂಬಲ ಲಭಿಸಲಿಲ್ಲ. ಇದರ ಲಾಭವೆತ್ತಿದ ಪ್ರವಾಸಿ ಬಂಗಾಳ ತಂಡದ ನಾಯಕ ಅನುಸ್ತೂಪ್ ಮಜುಮ್ದಾರ್ (101 ರನ್, 164 ಎಸೆತ, 16 ಬೌಂಡರಿ) ಭರ್ಜರಿ ಶತಕ ಸಿಡಿಸಿದರು. ಇದರಿಂದ ಮಂಕಾದ ಕರ್ನಾಟಕ ತಂಡ ರಣಜಿ ಟ್ರೋಫಿ ದೇಶೀಯ ಕ್ರಿಕೆಟ್ ಟೂರ್ನಿಯ ತನ್ನ 4ನೇ ಲೀಗ್ ಪಂದ್ಯದಲ್ಲಿ ಎದುರಾಳಿ ತಂಡಕ್ಕೆ ಬೇಗನೆ ಕಡಿವಾಣ ಹೇರಲು ಶಕ್ತವಾಗಲಿಲ್ಲ.

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಬುಧವಾರ ಆರಂಭಗೊಂಡ ಸಿ ಗುಂಪಿನ ಪಂದ್ಯದಲ್ಲಿ ಟಾಸ್ ಗೆದ್ದ ರಾಜ್ಯ ತಂಡದ ನಾಯಕ ಮಯಾಂಕ್ ಅಗರ್ವಾಲ್ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡರು. ಮೊದಲು ಬ್ಯಾಟಿಂಗ್‌ಗೆ ಇಳಿದ ಬಂಗಾಳಕ್ಕೆ ವಾಸುಕಿ ಕೌಶಿಕ್ ಆರಂಭಿಕ ಆಘಾತ ನೀಡಿದರು. ಆಗ ಸುದೀಪ್ ಚಟರ್ಜಿ (55 ರನ್, 120 ಎಸೆತ, 5 ಬೌಂಡರಿ) ಹಾಗೂ ಅನುಸ್ತೂಪ್ ಮಜುಮ್ದಾರ್ ಜೋಡಿ ನಡೆಸಿದ ದಿಟ್ಟ ಜತೆಯಾಟದಿಂದ ಚೇತರಿಸಿಕೊಂಡ ಬಂಗಾಳ ದಿನದಂತ್ಯಕ್ಕೆ 78 ಓವರ್‌ಗಳಲ್ಲಿ 5 ವಿಕೆಟ್‌ಗೆ 249 ರನ್ ಕಲೆಹಾಕಿ ಉತ್ತಮ ಮೊತ್ತದತ್ತ ಸಾಗಿದೆ. ಎಡಗೈ ಆಲ್ರೌಂಡರ್ ಶಾಬಾಜ್ ಅಹ್ಮದ್ (54* ರನ್, 103 ಎಸೆತ, 6 ಬೌಂಡರಿ) ಜತೆಯಾಗಿ ವೃತ್ತಿಜೀವನದ ಕೊನೇ ರಣಜಿ ಟೂರ್ನಿ ಆಡುತ್ತಿರುವ ಅನುಭವಿ ವಿಕೆಟ್ ಕೀಪರ್-ಬ್ಯಾಟರ್ ವೃದ್ಧಿಮಾನ್ ಸಾಹ (6*) ಎರಡನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ವಿ.ಕೌಶಿಕ್ ಹೊರತುಪಡಿಸಿ ಇತರ ಬೌಲರ್‌ಗಳು ತವರಿನ ಅಂಗಣದಲ್ಲಿ ಮೊನಚಿಲ್ಲದ ಬೌಲಿಂಗ್ ಪ್ರದರ್ಶಿಸಿದರು.

ಬಂಗಾಳ: 78 ಓವರ್‌ಗಳಲ್ಲಿ 5 ವಿಕೆಟ್‌ಗೆ 249 (ಶುವಂ ಡೇ 0, ಸುದೀಪ್ 55, ಸುದೀಪ್ ಕುಮಾರ್ 5, ಅನುಸ್ತೂಪ್ 101, ಶಾಬಾಜ್ 54*, ಅವಿಲಿನ್ 22*, ವೃದ್ಧಿಮಾನ್ 6*, ವಿ.ಕೌಶಿಕ್ 29ಕ್ಕೆ 3, ಅಭಿಲಾಷ್ ಶೆಟ್ಟಿ 52ಕ್ಕೆ 1, ಶ್ರೇಯಸ್ ಗೋಪಾಲ್ 66ಕ್ಕೆ 1).

ಅನುಸ್ತೂಪ್ ಶತಕದಾಟ: ಪ್ರವಾಸಿಗರನ್ನು ಮೊದಲು ಬ್ಯಾಟಿಂಗ್‌ಗೆ ಆಹ್ವಾನಿಸಿದ ಮಯಾಂಕ್ ನಿರ್ಧಾರ ಲ ನೀಡಿತು. ದಿನದ ಮೊದಲ ಓವರ್‌ನಲ್ಲಿಯೇ ಆರಂಭಿಕ ಶುವಂ ಡೇ (0) ವಿಕೆಟ್ ಪಡೆದ ವಿ.ಕೌಶಿಕ್ ಬಳಿಕ ವನ್‌ಡೌನ್ ಬ್ಯಾಟರ್ ಸುದೀಪ್ ಕುಮಾರ್ ಗರಮಿ (5) ಅವರನ್ನು ಪೆವಿಲಿಯನ್ ಸೇರಿಸಿದರು. 21 ರನ್‌ಗಳಿಗೆ 2 ವಿಕೆಟ್ ಪಡೆದ ಕರ್ನಾಟಕ ಆರಂಭಿಕ ಮೇಲುಗೈ ಸಾಧಿಸಿತು.

ಆಗ ಮತ್ತೋರ್ವ ಆರಂಭಿಕ ಸುದೀಪ್ ಚಟರ್ಜಿ ಜತೆಗೂಡಿದ 40 ವರ್ಷದ ಅನುಸ್ತೂಪ್ ರಾಜ್ಯದ ಬೌಲರ್‌ಗಳನ್ನು ಕಾಡಿದರು. ಇವರಿಬ್ಬರು 3ನೇ ವಿಕೆಟ್‌ಗೆ 161 ಎಸೆತಗಳಲ್ಲಿ ಭರ್ತಿ 100 ರನ್ ಸೇರಿಸಿದರು. ಈ ಜೋಡಿಯನ್ನು ಕೌಶಿಕ್ ಬೇರ್ಪಡಿಸಿದರು. ಕೌಶಿಕ್ ಹೊರತುಪಡಿಸಿ ವಿಧ್ಯಾಧರ್ ಪಾಟೀಲ್, ಅನುಭವಿ ಶ್ರೇಯಸ್ ಗೋಪಾಲ್ ಲಯ ಕಂಡುಕೊಳ್ಳಲು ಪರದಾಡಿದರು. ಚಟರ್ಜಿ ನಿರ್ಗಮನ ಬಳಿಕ ಅನುಸ್ತೂಪ್ ಜತೆಯಾದ ಶಾಬಾಜ್ ಅಹ್ಮದ್ ಅರ್ಧಶತಕದ ಸಾಥ್ ನೀಡಿದರು. ಇವರಿಬ್ಬರು 153 ಎಸೆತಗಳಲ್ಲಿ 80 ರನ್ ಪೇರಿಸಿದರು. 2019/20ರ ಆವೃತ್ತಿಯ ಸೆಮಿೈನಲ್‌ನಲ್ಲೂ ರಾಜ್ಯದ ವಿರುದ್ಧ ಶತಕ ಸಿಡಿಸಿದ್ದ ಅನುಸ್ತೂಪ್, ಹಾಲಿ ಋತುವಿನಲ್ಲಿ ಮೊದಲ ಹಾಗೂ ಒಟ್ಟಾರೆ 17ನೇ ಸೆಂಚುರಿ ಬಾರಿಸಿದರು. ಚಹಾ ವಿರಾಮದ ಬಳಿಕ ಶ್ರೇಯಸ್ ಗೋಪಾಲ್, ಅನುಸ್ತೂಪ್ ವಿಕೆಟ್ ಪಡೆದರೆ, ಅವಿಲಿನ್ ೋಷ್ (22) ರೂಪದಲ್ಲಿ ಅಭಿಲಾಷ್ ಶೆಟ್ಟಿ ಚೊಚ್ಚಲ ವಿಕೆಟ್ ಸಂಪಾದಿಸಿದರು.