ಕ್ರೀಡೆ

VIDEO | ಕೊಹ್ಲಿ-ಅನುಷ್ಕಾ ನಡುವೆ ಜಗಳವಾದರೆ ಮೊದಲು ಸಾರಿ ಕೇಳೋದು ಯಾರು ಗೊತ್ತೇ?

ಮುಂಬೈ: ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮತ್ತು ಬಾಲಿವುಡ್ ನಟಿ ಅನುಷ್ಕಾ ಶರ್ಮ ಅತ್ಯಂತ ಜನಪ್ರಿಯ ಸೆಲೆಬ್ರಿಟಿ ದಂಪತಿಗಳೆನಿಸಿದ್ದಾರೆ. ಅವರಿಬ್ಬರು 3 ವರ್ಷಗಳ ದಾಂಪತ್ಯ ಜೀವನದಲ್ಲಿ ಪರಸ್ಪರ ಎಷ್ಟು ಅರ್ಥಮಾಡಿಕೊಂಡಿದ್ದಾರೆ ಎಂಬ ಬಗ್ಗೆ ನಡೆಸಿರುವ ಪ್ರಶ್ನೋತ್ತರದ ವಿಡಿಯೋ ಈಗ ವೈರಲ್ ಆಗಿದೆ. ಇದರಲ್ಲಿ ಅವರು ವೃತ್ತಿ ಮತ್ತು ವೈಯಕ್ತಿಕ ಜೀವನದ ಬಗೆಗೆ ಪರಸ್ಪರ ಪ್ರಶ್ನೆಗಳನ್ನು ಕೇಳಿಕೊಂಡಿದ್ದು, ಪರಸ್ಪರರನ್ನು ಇನ್ನಷ್ಟು ಹೆಚ್ಚು ಅರ್ಥಮಾಡಿಕೊಳ್ಳುವ ಪ್ರಯತ್ನ ನಡೆಸಿದ್ದಾರೆ.

ಜಗಳ ನಡೆದಾಗ ಯಾರು ಮೊದಲು ಸಾರಿ ಕೇಳುತ್ತಾರೆ ಎಂಬ ಪ್ರಶ್ನೆಯನ್ನೂ ಇದೇ ವೇಳೆ ಕೇಳಲಾಗಿತ್ತು. ಈ ಪ್ರಶ್ನೆಗೆ ಅನುಷ್ಕಾ ಶರ್ಮ ಕೂಡಲೇ, ತಾವೇ ಮೊದಲು ಸಾರಿ ಕೇಳುವುದು ಎಂದು ಹೇಳಿದ್ದಾರೆ. ಅದಕ್ಕೆ ಕೊಹ್ಲಿ ಕೂಡ ತಲೆಯಾಡಿಸಿದ್ದಾರೆ.

ತಮ್ಮಿಬ್ಬರಲ್ಲಿ ಯಾರು ದೀರ್ಘಕಾಲದವರೆಗೆ ಉಸಿರು ಕಟ್ಟಿಕೊಳ್ಳುತ್ತಾರೆ ಎಂಬ ಪ್ರಶ್ನೆಗೆ ಕೊಹ್ಲಿ, ತಾವೇ ಎಂದು ಹೇಳಿದ್ದಾರೆ. ಆದರೆ ಈ ಹಿಂದೆ ನಡೆದ ಸ್ಪರ್ಧೆಯಲ್ಲಿ ಕೊಹ್ಲಿ ಮೋಸ ಮಾಡಿ ಗೆದ್ದಿದ್ದರು ಎಂದು ಅನುಷ್ಕಾ ಇದಕ್ಕೆ ಟಾಂಗ್ ನೀಡಿದ್ದಾರೆ.

ಅನುಷ್ಕಾ ಶರ್ಮ ಯಾವಾಗ ಖುಷಿಯಾಗಿರುತ್ತಾರೆ ಎಂಬ ಪ್ರಶ್ನೆಗೆ ಕೊಹ್ಲಿ, ಪ್ರಾಣಿಗಳು ಸುತ್ತ ಇರುವಾಗ ಎಂದಿದ್ದಾರೆ. ಆದರೆ ಅನುಷ್ಕಾ ಮಾತ್ರ, ಪತಿ ಕೊಹ್ಲಿ ಹತ್ತಿರವಿದ್ದಾಗ ಎಂದಿದ್ದಾರೆ. ಇದರಿಂದ ಇಬ್ಬರ ಮುಖದಲ್ಲೂ ನಗು ಮೂಡಿತು. ನಂತರ ಕೊಹ್ಲಿ ಯಾವಾಗ ಖುಷಿಯಾಗಿರುತ್ತಾರೆ ಎಂದಾಗ ಅನುಷ್ಕಾ, ನಾನು ಜತೆಗಿದ್ದಾಗ ಎಂದಿದ್ದಾರೆ. ಅದನ್ನು ನಿರಾಕರಿಸಲು ನನ್ನಿಂದ ಆಗುವುದಿಲ್ಲ ಎಂದು ಕೊಹ್ಲಿ ಹೇಳಿದ್ದಾರೆ.

ಹಿಂದಿ ಚಿತ್ರರಂಗದ ಬಗ್ಗೆ ಕೇಳಲಾದ ಪ್ರಶ್ನೆಗಳಿಗೆ ಕೊಹ್ಲಿ ಸರಿಯಾದ ಉತ್ತರ ನೀಡಲಾಗದೆ ಚಡಪಡಿಸಿದ್ದರೆ, ಅನುಷ್ಕಾಗೆ ಕ್ರಿಕೆಟ್‌ನ 3 ನಿಯಮಗಳ ಬಗ್ಗೆ ಪ್ರಶ್ನೆ ಕೇಳಿದಾಗ ಸರಿಯಾದ ಉತ್ತರ ನೀಡಿದ್ದಾರೆ.

ಕೊಹ್ಲಿ-ಅನುಷ್ಕಾ ಈ ಪ್ರಶ್ನೋತ್ತರ ಕಾರ್ಯಕ್ರಮದ ಅಂತ್ಯದಲ್ಲಿ ಪರಸ್ಪರ ಡ್ರಾಕ್ಕೆ ಸಮ್ಮತಿಸಿದ್ದಾರೆ. ಕೊಹ್ಲಿ ತಾವೇ ಮೇಲುಗೈ ಸಾಧಿಸಿದ್ದರೂ, ಸಮಬಲ ಒಪ್ಪಿಕೊಳ್ಳುವುದಾಗಿ ಹೇಳಿದ್ದಾರೆ. ವಿರುಷ್ಕಾ ಎಂದೇ ಖ್ಯಾತಿ ಪಡೆದಿರುವ ಕೊಹ್ಲಿ ಮತ್ತು ಅನುಷ್ಕಾ 2017ರ ಡಿಸೆಂಬರ್‌ನಲ್ಲಿ ಇಟಲಿಯಲ್ಲಿ ವಿವಾಹವಾಗಿದ್ದರು.