ಕ್ರೀಡೆ

ಲಾರ್ಡ್ಸ್ ಟೆಸ್ಟ್‌ನಲ್ಲಿ ಚೆಂಡು ವಿರೂಪ, ಆಂಗ್ಲರ ವಿರುದ್ಧ ಆರೋಪ!

ಲಂಡನ್: ಭಾರತ ತಂಡದ ವಿರುದ್ಧ ಲಾರ್ಡ್ಸ್‌ನಲ್ಲಿ ನಡೆಯುತ್ತಿರುವ 2ನೇ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ಆಟಗಾರರು ಚೆಂಡನ್ನು ಶೂನಿಂದ ತುಳಿದು ವಿರೂಪಗೊಳಿಸಿದ್ದಾರೆ ಎಂದು ಕ್ರಿಕೆಟ್ ಪ್ರೇಮಿಗಳು ಭಾನುವಾರ ಸಾಮಾಜಿಕ ಜಾಲತಾಣದಲ್ಲಿ ಆರೋಪಿಸಿದ್ದಾರೆ.

ಇಬ್ಬರು ಆಟಗಾರರು ಸ್ಪೈಕ್ಸ್ ಇರುವ ಶೂನಿಂದ ಚೆಂಡು ತುಳಿದಿರುವ ಚಿತ್ರವನ್ನೂ ಇದಕ್ಕೆ ಸಾಕ್ಷ್ಯ ನೀಡಲಾಗಿದೆ. ಇದು ಆಕಸ್ಮಿಕವಲ್ಲ, ಉದ್ದೇಶಪೂರ್ವಕವಾಗಿ ಇಂಗ್ಲೆಂಡ್ ಆಟಗಾರರು ಈ ರೀತಿ ವರ್ತಿಸಿದ್ದಾರೆ ಎಂದೂ ದೂರಲಾಗಿದೆ. ಅನೇಕ ಮಾಜಿ ಕ್ರಿಕೆಟಿಗರು ಕೂಡ ಈ ಬಗ್ಗೆ ವಾದ-ಪ್ರತಿವಾದ ಮಂಡಿಸಿದ್ದಾರೆ.

‘ಇದೊಂದು ಆಕಸ್ಮಿಕವಾಗಿರಬಹುದು. ಪೂರ್ಣ ವಿಡಿಯೋವನ್ನು ತೋರಿಸದೆ ಇದನ್ನು ವಿಶ್ಲೇಷಿಸುವುದು ಸರಿಯಲ್ಲ. ಇಲ್ಲಿಗೆ ಸ್ಟೋರಿ ಮುಗಿಯಿತು’ ಎಂದು ಗಾಯದಿಂದಾಗಿ ಸರಣಿಯಿಂದ ಹೊರಬಿದ್ದಿರುವ ಇಂಗ್ಲೆಂಡ್ ವೇಗಿ ಸ್ಟುವರ್ಟ್ ಬ್ರಾಡ್ ಟ್ವೀಟಿಸಿದ್ದಾರೆ. ಆದರೆ ಈ ವಾದವನ್ನು ಇತರ ಕೆಲ ಕ್ರಿಕೆಟಿಗರು ಒಪ್ಪಿಲ್ಲ. ‘ಏನಾಗುತ್ತಿದೆ. ಇದು ಇಂಗ್ಲೆಂಡ್ ಆಟಗಾರರು ನಡೆಸುತ್ತಿರುವ ಚೆಂಡು ವಿರೂಪವೇ ಅಥವಾ ಕೋವಿಡ್ ಮುನ್ನೆಚ್ಚರಿಕೆಯ ಕ್ರಮವೇ?’ ಎಂದು ವೀರೇಂದ್ರ ಸೆಹ್ವಾಗ್ ವಿನೋದವಾಗಿ ಕಾಲೆಳೆದಿದ್ದಾರೆ. ವೀಕ್ಷಕವಿವರಣೆಕಾರ ಆಕಾಶ್ ಚೋಪ್ರಾ ಕೂಡ, ‘ಇದೇನು ಚೆಂಡು ವಿರೂಪವೇ’ ಎಂದು ಪ್ರಶ್ನಿಸಿ ಟ್ವೀಟ್ ಮಾಡಿದ್ದಾರೆ. ದಕ್ಷಿಣ ಆಫ್ರಿಕಾದ ಮಾಜಿ ವೇಗಿ ಶಾನ್ ಪೊಲ್ಲಾಕ್ ಈ ಬಗ್ಗೆ ಐಸಿಸಿ ಪರಿಶೀಲನೆ ನಡೆಸಬೇಕೆಂದು ಒತ್ತಾಯಿಸಿದ್ದಾರೆ.

ಕೊಹ್ಲಿ-ಆಂಡರ್‌ಸನ್ ಚಕಮಕಿ

3ನೇ ದಿನದಂತ್ಯದಲ್ಲಿ ಜೇಮ್ಸ್ ಆಂಡರ್‌ಸನ್ ಭಾರತ ತಂಡದ ವೇಗಿ ಜಸ್‌ಪ್ರೀತ್ ಬುಮ್ರಾ ವಿರುದ್ಧ ವಾಗ್ಯುದ್ಧ ನಡೆಸಿದ್ದರೆ, 4ನೇ ದಿನದಾಟದಲ್ಲಿ ವಿರಾಟ್ ಕೊಹ್ಲಿ, ಆಂಡರ್‌ಸನ್ ಅವರ ಮೇಲೆ ವಾಕ್ಸಮರ ಸಾರಿದರು. ಭೋಜನ ವಿರಾಮಕ್ಕೆ ಮುನ್ನ ಆಂಡರ್‌ಸನ್ ಪಿಚ್‌ನ ಡೇಂಜರ್ ಜೋನ್ ಮೇಲೆ ಓಡಿದರು. ಬಳಿಕ ಅವರು ಬೌಲಿಂಗ್ ಲೈನ್‌ಅಪ್‌ಗೆ ಹಿಂದಿರುಗುತ್ತಿದ್ದಾಗ ಕೊಹ್ಲಿ, ‘ಇದು ನಿನ್ನ ಮನೆಯ ಅಂಗಳವಲ್ಲ’ ಎಂದು ನಿಂದಿಸಿದರು.