ಕ್ರೀಡೆ

ಮುಂಬೈ ತಂಡದ ನಾಯಕತ್ವದ ಮೇಲೆ ಕಣ್ಣಿಟ್ಟಿದ್ದರೇ ಬುಮ್ರಾ? ಪಾಂಡ್ಯ ಮರಳಿದ್ದರಿಂದ ಎಲ್ಲ ಲೆಕ್ಕಾಚಾರ ತಲೆಕೆಳಗಾಯಿತೇ?

ಮುಂಬೈ: ಸ್ಟಾರ್​ ಆಲ್ರೌಂಡರ್​ ಹಾರ್ದಿಕ್​ ಪಾಂಡ್ಯ ಮುಂಬೈ ಇಂಡಿಯನ್ಸ್​ಗೆ ಮರಳಿದ್ದರಿಂದ ತಂಡದ ಅಭಿಮಾನಿಗಳು ಸಂಭ್ರಮಗೊಂಡಿದ್ದಾರೆ. ಆದರೆ ತಂಡದ ಪ್ರಮುಖ ವೇಗಿ ಜಸ್​ಪ್ರೀತ್​ ಬುಮ್ರಾ ಅಸಮಾಧಾನಗೊಂಡಂತಿದೆ!

ಅವರು ಮಂಗಳವಾರ ಇನ್​ಸ್ಟಾಗ್ರಾಂ ಸ್ಟೋರಿಯಲ್ಲಿ ಹಾಕಿರುವ ನಿಗೂಡಾರ್ಥದ ಪೋಸ್ಟ್​ ಇದರ ಸುಳಿವು ನೀಡಿದೆ. "ಕೆಲವೊಮ್ಮೆ ಮೌನವೇ ಅತ್ಯುತ್ತಮ ಉತ್ತರವಾಗಿರುತ್ತದೆ' ಎಂದು ಬುಮ್ರಾ ಬರೆದುಕೊಂಡಿದ್ದಾರೆ.

ರೋಹಿತ್​ ಶರ್ಮ ನಂತರದಲ್ಲಿ ಮುಂಬೈ ತಂಡದ ನಾಯಕರಾಗುವತ್ತ ಕಣ್ಣಿಟ್ಟಿದ್ದ 29 ವರ್ಷದ ಬುಮ್ರಾಗೆ, ಹಾರ್ದಿಕ್​ ಪುನರಾಗಮನದೊಂದಿಗೆ ರೋಹಿತ್​ ಉತ್ತರಾಧಿಕಾರಿಯಾಗಿಯೂ ಬಿಂಬಿಸಲ್ಪಟ್ಟಿರುವುದು ಬೇಸರ ತಂದಿದೆ ಎನ್ನಲಾಗುತ್ತಿದೆ. ಮುಂಬೈ ತಂಡದಲ್ಲಿ ಹಾರ್ದಿಕ್​ ಪಾಂಡ್ಯರನ್ನು ಮೀರಿಸಿ ಬುಮ್ರಾ ನಾಯಕನ ಪಟ್ಟವೇರುವುದು ಕಷ್ಟ. ಹೀಗಾಗಿ ಬುಮ್ರಾ ಭವಿಷ್ಯದ ದಿನಗಳಲ್ಲಿ, ನಾಯಕತ್ವ ಒಲಿಯಬಹುದಾದಂಥ ಬೇರೆ ತಂಡಗಳ ಒಪ್ಪಂದದತ್ತ ಆಸಕ್ತಿ ತೋರಿದರೆ ಅಚ್ಚರಿ ಇಲ್ಲ ಎನ್ನಲಾಗುತ್ತಿದೆ.