ನವದೆಹಲಿ: ರೈಡರ್‌ಗಳಾದ ಸಚಿನ್ ಮತ್ತು ಸುಧಾಕರ್ ಎಂ. ಅವರ ಆಕರ್ಷಕ ಆಟದ ಬಲದಿಂದ ಮೂರು ಬಾರಿಯ ಚಾಂಪಿಯನ್ ಪಟನಾ ಪೈರೇಟ್ಸ್ ತಂಡ ಪ್ರೊ ಕಬಡ್ಡಿ ಲೀಗ್ 10ನೇ ಆವೃತ್ತಿ ಲೀಗ್ ಪಂದ್ಯದಲ್ಲಿ ಜೈಪುರ ಪಿಂಕ್ ಪ್ಯಾಂಥರ್ಸ್‌ಗೆ 3 ಅಂಕಗಳಿಂದ ಸೋಲುಣಿಸಿತು. ತ್ಯಾಗರಾಜ್ ಒಳಾಂಗಣ ಕ್ರೀಡಾಂಗಣದಲ್ಲಿ ಸೋಮವಾರ ನಡೆದ ಪಂದ್ಯದಲ್ಲಿ ಪೈರೇಟ್ಸ್ 36-33 ಅಂಕಗಳಿಂದ ಪ್ಯಾಂಥರ್ಸ್ ತಂಡದ ಸವಾಲನ್ನು ಮೆಟ್ಟಿನಿಂತಿತು. ಜೈಪುರ ಪರ ಏಕಾಂಗಿ ಹೋರಾಟ ನಡೆಸಿದ ಅರ್ಜುಲ್ ದೇಶ್ವಾಲ್ 12 ಅಂಕ ಗಳಿಸಿ ತಂಡದ ವೀರೋಚಿತ ಸೋಲಿಗೆ ಕಾರಣರಾದರೆ, ಸಚಿನ್ ಮತ್ತು ಸುಧಾಕರ್ ಪಟನಾ ತಂಡದ ರೋಚಕ ಗೆಲುವಿನಲ್ಲಿಪ್ರಮುಖ ಪಾತ್ರವಹಿಸಿದರು. ಈ ಫಲಿತಾಂಶದೊಂದಿಗೆ ಪಟನಾ ಟೂರ್ನಿಯಲ್ಲಿ 9ನೇ ಜಯದೊಂದಿಗೆ 58 ಅಂಕ ಕಲೆಹಾಕಿದರು. ಮೂರನೇ ಸೋಲಿಗೆ ಒಳಗಾದ ಜೈಪುರ 72 ಅಂಕಗಳೊಂದಿಗೆ ಅಗ್ರಸ್ಥಾನ ಕಾಯ್ದುಕೊಂಡಿತು.
ಹಿನ್ನಡೆ ತಗ್ಗಿಸುವ ವಿಶ್ವಾಸದಲ್ಲಿ ದ್ವಿತೀಯಾರ್ಧ ಆರಂಭಿಸಿದ ಪಟನಾ, ನಿರೀಕ್ಷೆಯಂತೆಯೇ ಜೈಪುರ ತಂಡವನ್ನು 21ನೇ ನಿಮಿಷದಲ್ಲಿ ಆಲೌಟ್ ಮಾಡುವ ಮೂಲಕ ಮೊದಲ ಅವಧಿಯ ಆಲೌಟ್‌ಗೆ ಸೇಡು ತೀರಿಸಿಕೊಂಡಿತು.ಅಭಿಜೀತ್ ಮಲಿಕ್ ಅವರನ್ನು ಟ್ಯಾಕಲ್ ಮಾಡಿದ ಕೃಷ್ಣ, ಪೈರೇಟ್ಸ್ ಹೋರಾಟಕ್ಕೆ ಕಿಚ್ಚು ಹಚ್ಚಿದರು. ಈ ಬಾರಿ ಟೂರ್ನಿಯುದ್ದಕ್ಕೂ ಶ್ರೇಷ್ಠ ಪ್ರದರ್ಶನ ಕಾಯ್ದುರೊಂಡಿರುವ ಅರ್ಜುನ್ ದೇಶ್ವಾಲ್, ಸೂಪರ್ ಟೆನ್ ಸಾಹಸದೊಂದಿಗೆ ಹಾಲಿ ಆವೃತ್ತಿಯಲ್ಲಿ 200 ರೇಡಿಂಗ್ ಪಾಯಿಂಟ್ಸ್ ಕಲೆಹಾಕಿದ ಸಾಧನೆ ಮಾಡಿದರು. 28ನೇ ನಿಮಿಷದಲ್ಲಿ 25 -25ರಲ್ಲಿಸಮಬಲದ ಹೋರಾಟ ನೀಡಿದ ಉಭಯ ತಂಡಗಳು, ಮುನ್ನಡೆಗಾಗಿ ಜಿದ್ದಾಜಿದ್ದಿನ ಹೋರಾಟಕ್ಕೆ ಇಳಿದವು. ಒಮ್ಮೆ ಪಟನಾ ಮುನ್ನಡೆ ಗಳಿಸಿದರೆ, ಮತ್ತೊಮ್ಮೆ ಪೈರೇಟ್ಸ್ ಮೇಲುಗೈ ಸಾಧಿಸಿತು.
ಹಾಲಿ ಟೂರ್ನಿಯಲ್ಲಿ150 ಟ್ಯಾಕಲ್ ಪಾಯಿಂಟ್ಸ್ ಕಲೆಹಾಕಿದ ಅಂಕುಶ್ ಮತ್ತು ರೇಜಾ ಅವನ್ನು 33ನೇ ನಿಮಿಷದಲ್ಲಿ ಔಟ್ ಮಾಡುವ ಮೂಲಕ ಎರಡನೇ ಬಾರಿ ಜೈಪುರ ತಂಡವನ್ನು ಆಲೌಟ್ ಮಾಡಿದ ಪಟನಾ 31-27ರಲ್ಲಿಮುನ್ನಡೆ ಕಾಯ್ದುಕೊಳ್ಳುವ ಮೂಲಕ ಪಂದ್ಯದ ಮೇಲೆ ಹಿಡಿತಕ್ಕೆ ಯತ್ನಿಸಿತು. ಇದಕ್ಕೆ ದೃತಿಗೆಡದ ಜೈಪುರ ಆಟಗಾರರು ಸಂಘಟಿತ ಹೋರಾಟ ನಡೆಸಿ ತಂಡದ ಹಿನ್ನಡೆಯನ್ನು 32-33ಕ್ಕೆ ತಗ್ಗಿಸಲು ಶ್ರಮಿಸಿದರು. ಆದರೆ ಅಂತಿಮ ಕ್ಷ ಣದ ಒತ್ತಡವನ್ನು ಸಮರ್ಥವಾಗಿ ನಿಭಾಯಿಸಿದ ಮೂರು ಬಾರಿಯ ಚಾಂಪಿಯನ್ 3 ಅಂಕಗಳಿಂದ ಜೈಪುರ ತಂಡವನ್ನು ಹಣಿದು ಪೂರ್ಣ ಐದು ಅಂಕ ಕಲೆಹಾಕುವಲ್ಲಿ ಯಶಸ್ವಿಯಾಯಿತು.
ಮುಂದುವರಿದ ಅರ್ಜುನ್ ದೇಶ್ವಾಲ್ ಅವರ ಅತ್ಯಾಮೋಘ ಆಟದ ಫಲದಿಂದ ಜೈಪುರ ಪಿಂಕ್ ಪ್ಯಾಂಥರ್ಸ್ ತಂಡ ಪಂದ್ಯದ ಪ್ರಥಮಾರ್ಧಕ್ಕೆ 18-14 ಅಂಕಗಳಿಂದ ಪಟನಾ ಪೈರೇಟ್ಸ್ ವಿರುದ್ಧ ಮೇಲುಗೈ ಸಾಧಿಸಿತು.ಪಂದ್ಯದ ಆರಂಭದಿಂದಲೇ ಆಕ್ರಮಣಕಾರಿ ಆಟವಾಡಿದ ಜೈಪುರಕ್ಕೆ ದೇಶ್ವಾಲ್ ಅವರು ಬಲ ನೀಡಿದರು. ಪಂದ್ಯದ 9ನೇ ನಿಮಿಷದಲ್ಲಿಸುಧಾಕರ್ ಅವರನ್ನು ಟ್ಯಾಕಲ್ ಮಾಡಿದ ಸುನಿಲ್ ಕುಮಾರ್, ಜೈಪುರ ತಂಡ ಆಲೌಟ್ ಪಾಯಿಂಟ್ಸ್ ಪಡೆಯಲು ನೆರವಾದರು.
ಆರಂಭದಲ್ಲೇ ಲಭಿಸಿದ ಮುನ್ನಡೆಯಿಂದ ಆತ್ಮವಿಶ್ವಾಸ ಹೆಚ್ಚಿಸಿಕೊಂಡ ಜೈಪುರ ಆಟಗಾರರು ವಿರಾಮದವರೆಗೂ ಇದೇ ಒತ್ತಡವನ್ನು ಕಾಯ್ದುಕೊಂಡರು. ಮೂರು ಬಾರಿಯ ಚಾಂಪಿಯನ್ ಪಟನಾ ಪೈರೇಟ್ಸ್ ಹಿನ್ನಡೆ ತಗ್ಗಿಸಲು ಸಚಿನ್ ಮತ್ತು ಸುಧಾಕರ್ ಸಾಹಸ ನಡೆಸಿದರು. ಆದರೆ 4 ಅಂಕಗಳ ಹಿನ್ನಡೆಯೊಂದಿಗೆ ಪೈರೇಟ್ಸ್ ವಿರಾಮ ತೆಗೆದುಕೊಂಡಿತು.
ಫೆಬ್ರವರಿ 6ರಂದು ತಮಿಳ್ ತಲೈವಾಸ್ ಮತ್ತು ಯು.ಪಿ. ಯೋಧಾಸ್ ತಂಡಗಳು ಪೈಪೋಟಿ ನಡೆಸಲಿವೆ.