ಬೆಂಗಳೂರು: ಕ್ರಿಕೆಟಿಗರ ಪುತ್ರರು ಕ್ರಿಕೆಟಿಗರೇ ಆಗುವುದು ಸಾಮಾನ್ಯ. ದಿಗ್ಗಜರಾದ ಸಚಿನ್ ತೆಂಡುಲ್ಕರ್ ಮತ್ತು ರಾಹುಲ್ ದ್ರಾವಿಡ್ ಪುತ್ರರು ಈಗಾಗಲೆ ಇದೇ ಹಾದಿಯಲ್ಲಿದ್ದಾರೆ. ಆದರೆ ಸ್ಪಿನ್ ಬೌಲಿಂಗ್ ಮಾಂತ್ರಿಕ ಅನಿಲ್ ಕುಂಬ್ಳೆ ಅವರ ಪುತ್ರ ತಂದೆಯ ವೃತ್ತಿಗೆ ಬದಲಾಗಿ ಹವ್ಯಾಸದ ಕಡೆಗೆ ಹೆಚ್ಚು ಆಸಕ್ತಿ ವಹಿಸಿದ್ದು, ಅದರಲ್ಲೇ ಈಗ ವಿಶೇಷ ಸಾಧನೆಯೊಂದನ್ನು ಮಾಡುವ ಮೂಲಕ ಗಮನ ಸೆಳೆದಿದ್ದಾರೆ. ಕುಂಬ್ಳೆಗೆ ಕ್ರಿಕೆಟ್ ವೃತ್ತಿಜೀವನವಾಗಿದ್ದರೂ, ವನ್ಯಜೀವಿ ಛಾಯಾಗ್ರಹಣದ ಬಗ್ಗೆ ವಿಶೇಷ ಆಸಕ್ತಿ ಇತ್ತು. ಅವರ ಪುತ್ರ ಮಯಾಸ್ ಕುಂಬ್ಳೆ ಕೂಡ ಬಾಲಕನಾಗಿರುವಾಗಲೇ ವನ್ಯಜೀವಿ ಛಾಯಾಗ್ರಹಣದಲ್ಲಿ ಮಿಂಚಿದ್ದಾರೆ. ಅಪ್ಪ ಮೈದಾನದಲ್ಲಿ ಸಾಧನೆ ಮಾಡಿದ್ದರೆ, ಪುತ್ರ ಅರಣ್ಯದಲ್ಲಿ ಸಾಧನೆ ಮಾಡುವತ್ತ ಮುನ್ನಡೆದಿದ್ದಾರೆ.
ಬಾಲ್ಯದಿಂದಲೂ ವನ್ಯಜೀವಿ ಛಾಯಾಗ್ರಹಣವನ್ನು ಪ್ರೀತಿಸುತ್ತ ಬಂದಿರುವ 16 ವರ್ಷದ ಮಯಾಸ್ ಕುಂಬ್ಳೆ, ಈಗಾಗಲೆ ಅಪೂರ್ವ ವನ್ಯಜೀವಿ ಛಾಯಾಚಿತ್ರಗಳನ್ನು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಳ್ಳುತ್ತ ಬಂದಿದ್ದಾರೆ. ಇದೀಗ ಅವರು, ಮಹಾರಾಷ್ಟ್ರದ ಅಂಧೇರಿಯ ಅತಿದೊಡ್ಡ ರಾಷ್ಟ್ರೀಯ ಉದ್ಯಾನವನದ ಹುಲಿ ರಕ್ಷಿತಾರಣ್ಯದಲ್ಲಿ ಕ್ಲಿಕ್ಕಿಸಿರುವ ವನ್ಯಜೀವಿ ಛಾಯಾಚಿತ್ರಗಳು ಮತ್ತು ಅವರು ಬರೆದಿರುವ ಅನುಭವ ಕಥನ ಭಾರತದ ಪ್ರತಿಷ್ಠಿತ ವನ್ಯಜೀವಿ ಜಾಲತಾಣ 'ನೇಚರ್ ಇನ್ ಫೋಕಸ್'ನಲ್ಲಿ (ಎನ್ಐಎಫ್) ಪ್ರಕಟಗೊಂಡಿದೆ.
ಈ ಬಗ್ಗೆ ಅನಿಲ್ ಕುಂಬ್ಳೆ ಟ್ವಿಟರ್ನಲ್ಲಿ ಮಂಗಳವಾರ ಸಂತೋಷವನ್ನು ಹಂಚಿಕೊಂಡಿದ್ದು, 'ಮಗನ ಬಗ್ಗೆ ಹೆಮ್ಮೆಯಾಗುತ್ತಿದೆ' ಎಂದು ಬರೆದುಕೊಂಡಿದ್ದಾರೆ. ಮಯಾಸ್ ಈ ಲೇಖನದಲ್ಲಿ ಹುಲಿಗಳ ಛಾಯಾಚಿತ್ರ ಸೆರೆಹಿಡಿದ ತಮ್ಮ ಅನುಭವವನ್ನು ವಿವರಿಸಿದ್ದು, ತಾವು ಸೆರೆಹಿಡಿದ ಹುಲಿಗಳ ಸುಂದರ ಚಿತ್ರಗಳನ್ನೂ ಹಂಚಿಕೊಂಡಿದ್ದಾರೆ. ಕುಂಬ್ಳೆ ಟ್ವೀಟ್ಗೆ ಪ್ರತಿಯಾಗಿ ಮಾಜಿ ಕ್ರಿಕೆಟಿಗ ವಿವಿಎಸ್ ಲಕ್ಷ್ಮಣ್, ಕೂಡ ಮಯಾಸ್ ಛಾಯಾಚಿತ್ರಗಳಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಮಯಾಸ್ ಕುಂಬ್ಳೆ ಅರಣ್ಯದಲ್ಲಿ ಕ್ಲಿಕ್ಕಿಸಿರುವ ಚಿತ್ರಗಳು
ಬೆಂಗಳೂರಿನಲ್ಲಿ ಹೈಸ್ಕೂಲ್ ವಿದ್ಯಾಥಿರ್ಯಾಗಿರುವ ಮಯಾಸ್ಗೆ ವನ್ಯಜೀವಿ ಛಾಯಾಗ್ರಹಣದ ಆಸಕ್ತಿ ಬೆಳೆಯಲು ತಂದೆಯೇ ಸ್ಫೂತಿರ್ಯಾಗಿದ್ದಾರೆ. 49 ವರ್ಷದ ಕುಂಬ್ಳೆ ಈ ಹಿಂದೆ ಕರ್ನಾಟಕ ವನ್ಯಜೀವಿ ಮಂಡಳಿಯ ಉಪಾಧ್ಯಕ್ಷರಾಗಿದ್ದರು. ಅಲ್ಲದೆ ವನ್ಯಜೀವಿ ಛಾಯಾಗ್ರಹಣದಲ್ಲೂ ಸಾಕಷ್ಟು ಅಭೂತಪೂರ್ವ ಚಿತ್ರಗಳನ್ನು ಕ್ಲಿಕ್ಕಿಸಿ ಗಮನ ಸೆಳೆದಿದ್ದಾರೆ. ಈ ವೇಳೆ ಅವರಿಗೆ ಪುತ್ರ ಮಯಾಸ್ ಸಾಥ್ ನೀಡಿದ್ದರು ಮತ್ತು 13ನೇ ವಯಸ್ಸಿನಲ್ಲೇ ವೈಲ್ಡ್ಲೈಫ್ ಫೋಟೋಗ್ರಫಿ ಆರಂಭಿಸಿದ್ದರು.
ಭಾರತ ತಂಡದ ಮಾಜಿ ನಾಯಕ ಹಾಗೂ ಕೋಚ್ ಆಗಿರುವ ಅನಿಲ್ ಕುಂಬ್ಳೆ 132 ಟೆಸ್ಟ್ ಪಂದ್ಯಗಳಲ್ಲಿ 619 ವಿಕೆಟ್ ಮತ್ತು 271 ಏಕದಿನ ಪಂದ್ಯಗಳಲ್ಲಿ 337 ವಿಕೆಟ್ ಕಬಳಿಸಿದ್ದಾರೆ. ಚೇತನಾ ಕುಂಬ್ಳೆ ಅವರನ್ನು ವರಿಸಿರುವ ಕುಂಬ್ಳೆ ಪುತ್ರ ಮಯಾಸ್ ಜತೆಗೆ ಓರ್ವ ಪುತ್ರಿ ಸ್ವಸ್ತಿ ಮತ್ತು ಮಲಮಗಳು ಅರುಣಿ ಅವರನ್ನು ಹೊಂದಿದ್ದಾರೆ. ಅವರು ಈಗ ಐಸಿಸಿ ಕ್ರಿಕೆಟ್ ಸಮಿತಿಯ ಮುಖ್ಯಸ್ಥರಾಗಿದ್ದಾರೆ.