ಕ್ರೀಡೆ

ಆಂಡರ್​ಸನ್​-ತೆಂಡುಲ್ಕರ್​ ಟ್ರೋಫಿ ಅನಾವರಣ: ಪಟೌಡಿ ಪರಂಪರೆ ಉಳಿಸಲು ನನ್ನಿಂದಾದ ಪ್ರಯತ್ನಪಟ್ಟೆ...

ಲೀಡ್ಸ್: ಇಂಗ್ಲೆಂಡ್ ​-ಭಾರತ ನಡುವಿನ ಟೆಸ್ಟ್​ ಸರಣಿಗೆ ಆಂಡರ್​ಸನ್​-ತೆಂಡುಲ್ಕರ್​ ಟ್ರೋಫಿ ಎಂದು ಅಧಿಕೃತವಾಗಿ ಮರುನಾಮಕರಣ ಮಾಡಲಾಗಿದೆ. ಉಭಯ ದೇಶಗಳ ಇಬ್ಬರು ದಿಗ್ಗಜ ಕ್ರಿಕೆಟಿಗರಾದ ಜೇಮ್ಸ್​ ಆಂಡರ್​ಸನ್​, ಸಚಿನ್​ ತೆಂಡುಲ್ಕರ್​ ಗೌರವಾರ್ಥ ಈ ಹೆಸರು ಇಡಲಾಗಿದೆ. ಗುರುವಾರ ಅವರಿಬ್ಬರೇ ಹೊಸ ಟ್ರೋಫಿಯನ್ನು ಅನಾವರಣಗೊಳಿಸಿದರು. ಟ್ರೋಫಿ ಇವರಿಬ್ಬರ ಬೌಲಿಂಗ್​-ಬ್ಯಾಟಿಂಗ್​ ಚಿತ್ರಗಳು ಮತ್ತು ಸಹಿಯ ಕೆತ್ತನೆಯನ್ನು ಒಳಗೊಂಡಿದೆ. ಉಭಯ ದೇಶಗಳ ಸರಣಿ ಈ ಮುನ್ನ ಪಟೌಡಿ ಟ್ರೋಫಿ ಎಂಬ ಹೆಸರು ಹೊಂದಿತ್ತು. ಇನ್ನೀಗ ಸರಣಿಯ ವಿಜೇತ ತಂಡದ ನಾಯಕನಿಗೆ ಪಟೌಡಿ ಪದಕವನ್ನು ನೀಡಿ ಗೌರವಿಸಲಾಗುತ್ತದೆ. ಆಂಡರ್​ಸನ್​ 188 ಟೆಸ್ಟ್​ಗಳಲ್ಲಿ 704 ವಿಕೆಟ್​ ಕಬಳಿಸಿದ್ದು, ಟೆಸ್ಟ್​ನಲ್ಲಿ ಅತ್ಯಧಿಕ ವಿಕೆಟ್​ ಗಳಿಸಿದ ವೇಗಿ ಎನಿಸಿದ್ದಾರೆ. ಸಚಿನ್​ ತೆಂಡುಲ್ಕರ್​ 200 ಟೆಸ್ಟ್​ಗಳಲ್ಲಿ ಗರಿಷ್ಠ 51 ಶತಕ ಮತ್ತು ಸರ್ವಾಧಿಕ 15,921 ರನ್​ ಗಳಿಸಿದ ಬ್ಯಾಟರ್​ ಎನಿಸಿದ್ದಾರೆ.

ಪಟೌಡಿ ಪರಂಪರೆ ಉಳಿಸಲು ನನ್ನಿಂದಾದ ಪ್ರಯತ್ನಪಟ್ಟೆ ನವದೆಹಲಿ: ಪಟೌಡಿ ಟ್ರೋಫಿಯ ಹೆಸರು ಬದಲಾಯಿಸುವುದು ನನಗೆ ಇಷ್ಟವಿರಲಿಲ್ಲ. ಹೀಗಾಗಿ ಆ ಹೆಸರು ಉಳಿಸಿಕೊಳ್ಳಲು ನನ್ನಿಂದ ಸಾಧ್ಯವಾದಷ್ಟು ಪ್ರಯತ್ನ ಪಟ್ಟೆ. ಅಂತಿಮವಾಗಿ ಪಟೌಡಿ ಪದಕದೊಂದಿಗೆ ಅವರ ಪರಂಪರೆ ಉಳಿಸಿಕೊಳ್ಳಲು ಶಕ್ತನಾದೆ ಎಂದು ಬ್ಯಾಟಿಂಗ್​ ದಿಗ್ಗಜ ಸಚಿನ್​ ತೆಂಡುಲ್ಕರ್​ ಹೇಳಿದ್ದಾರೆ. ಪಟೌಡಿ ಟ್ರೋಫಿಯ ಹೆಸರು ಬದಲಾವಣೆಯ ಸುದ್ದಿ ತಿಳಿದ ತಕ್ಷಣ ನಾನು ಮೊದಲಿಗೆ ಮನ್ಸೂರ್​ ಅಲಿ ಖಾನ್​ ಪಟೌಡಿ ಅವರ ಕುಟುಂಬವನ್ನು ಸಂಪರ್ಕಿಸಿದ್ದೆ. ಟೈಗರ್​ ಪಟೌಡಿ ಹಲವು ತಲೆಮಾರಿನ ಕ್ರಿಕೆಟಿಗರಿಗೆ ಸ್ಫೂರ್ತಿಯಾದವರು. ಅವರನ್ನು ಎಂದಿಗೂ ಯಾರೂ ಮರೆಯಬಾರದು ಎಂದು ಬಯಸಿದ್ದೆ. ಬಿಸಿಸಿಐ ಮತ್ತು ಇಂಗ್ಲೆಂಡ್​ ಕ್ರಿಕೆಟ್​ ಮಂಡಳಿ (ಇಸಿಬಿ) ಮತ್ತು ಐಸಿಸಿ ಚೇರ್ಮನ್​ ಜಯ್​ ಷಾರನ್ನು ಸಂಪರ್ಕಿಸಿ ಹೆಸರು ಉಳಿಸಿಕೊಳ್ಳಲು ಒತ್ತಾಯಿಸಿದೆ. ಆದರೆ ಅಂತಿಮವಾಗಿ ಇಸಿಬಿ ಪಟೌಡಿ ಪದಕದೊಂದಿಗೆ ಗೌರವ ಸಲ್ಲಿಸುವ ಆಯ್ಕೆಯನ್ನು ನೀಡಿತು ಎಂದು ಸಚಿನ್​ ವಿವರಿಸಿದ್ದಾರೆ.

> ಸಚಿನ್​ ತೆಂಡುಲ್ಕರ್​1988ರಲ್ಲಿ ನಾನು ಮೊದಲು ಪ್ರವಾಸ ಕೈಗೊಂಡಿದ್ದೇ ಇಂಗ್ಲೆಂಡ್​ಗೆ. ನನ್ನ ಮೊದಲ ವಿಮಾನ ಪ್ರಯಾಣ ಮುಂಬೈ&ಲಂಡನ್​ ನಡುವೆ ಆಗಿತ್ತು. ಹೀಗಾಗಿ ಟ್ರೋಫಿಗೆ ನನ್ನ ಹೆಸರು ಇಡಲಾಗುತ್ತಿದೆ ಎಂದು ತಿಳಿದಾಗ ಹೃದಯ ತುಂಬಿಬಂತು. ಸಂತೋಷವಾಯಿತು.