ಅನಾಹತ್​ ಸಿಂಗ್ ಪಂದ್ಯದ ನೋಟ ಪಿಟಿಐ
ಕ್ರೀಡೆ

ASIAN GAMES: ಸ್ಕ್ವಾಷ್​ನಲ್ಲಿ ಫೈನಲ್​ಗೇರಿದ ಅನಾಹತ್​, ಅಭಯ್​ ಸಿಂಗ್​

ಸ್ಕ್ವಾಷ್​ನಲ್ಲಿ ಅವಳಿ ಚಿನ್ನದೊಂದಿಗೆ ಒಲಿಂಪಿಕ್ಸ್​ ಅರ್ಹತೆ ನಿರೀಕ್ಷೆ

ಐಚಿ-ನಗೋಯಾ: ಜೂನಿಯರ್​ ವಿಶ್ವ ಚಾಂಪಿಯನ್​ ಅನಾಹತ್​ ಸಿಂಗ್​ ಮತ್ತು ಅನುಭವಿ ಆಟಗಾರ ಅಭಯ್​ ಸಿಂಗ್​ ಏಷ್ಯಾಡ್​ ಸ್ಕ್ವಾಷ್​ ಸ್ಪರ್ಧೆಯಲ್ಲಿ ಕ್ರಮವಾಗಿ ಮಹಿಳೆಯರ ಮತ್ತು ಪುರುಷರ ಸಿಂಗಲ್ಸ್​ ವಿಭಾಗದಲ್ಲಿ ಫೈನಲ್​ಗೇರಿದ್ದು, ಕನಿಷ್ಠ ರಜತ ಪದಕ ಖಚಿತಪಡಿಸಿಕೊಂಡಿದ್ದಾರೆ. ಅವರಿಬ್ಬರು ಚಿನ್ನದ ಪದಕ ಗೆದ್ದರೆ 2028ರ ಲಾಸ್​ ಏಂಜಲೀಸ್​ ಒಲಿಂಪಿಕ್ಸ್​ಗೆ ನೇರ ಅರ್ಹತೆ ಸಂಪಾದಿಸುವ ಅವಕಾಶವನ್ನೂ ಹೊಂದಿದ್ದಾರೆ.

18 ವರ್ಷದ ಅನಾಹತ್​ ಶನಿವಾರ ನಡೆದ ಸೆಮಿಫೈನಲ್​ನಲ್ಲಿ ತನ್ನಗಿಂತ ಉನ್ನತ ಶ್ರೇಯಾಂಕಿತ ಜಪಾನ್​ನ ಸಟೊಮಿ ವತನಬೆ ವಿರುದ್ಧ ಮೊದಲ ಗೇಮ್​ ಸೋಲಿನ ಹಿನ್ನಡೆ ಎದುರಿಸಿದರೂ, ಅಂತಿಮವಾಗಿ 3-2ರಿಂದ ಜಯ ಸಾಧಿಸುವಲ್ಲಿ ಯಶಸ್ವಿಯಾದರು. 2023ರ ಏಷ್ಯಾಡ್​ ತಂಡ ವಿಭಾಗದಲ್ಲಿ ಚಿನ್ನ ಗೆದ್ದಿದ್ದ 28 ವರ್ಷದ ಅಭಯ್​, ಸೆಮೀಸ್​ನಲ್ಲಿ ಪಾಕಿಸ್ತಾನದ ಮುಹಮ್ಮದ್​ ಇರ್ಫಾನ್​ ಎದುರು 3-0ಯಿಂದ ಗೆದ್ದರು. ಭಾನುವಾರ ನಡೆಯಲಿರುವ ಫೈನಲ್​ನಲ್ಲಿ ದೆಹಲಿಯ ಅನಾಹತ್​ಗೆ ವಿಶ್ವ ನಂ. 5 ಮಲೇಷ್ಯಾದ ಸಿವಸಂಗರಿ ಸುಬ್ರಹ್ಮಣ್ಯಂ ಮತ್ತು ತಮಿಳುನಾಡಿನ ಅಭಯ್​ಗೆ ಮಲೇಷ್ಯಾದ ಎನ್​ಜಿ ಈನ್​ ಯೌ ಸವಾಲು ಎದುರಾಗಲಿದೆ.

ಜೋಶ್ನಾ-ಸೆಂಥಿಲ್​ ಜೋಡಿ

ಜೋಶ್ನಾ-ಸೆಂಥಿಲ್​ ಕಂಚಿಗೆ ತೃಪ್ತಿ

ಕೊಡಗು ಮೂಲದ ಜೋಶ್ನಾ ಚಿನ್ನಪ್ಪ ಮತ್ತು ವೆಲವನ್​ ಸೆಂಥಿಲ್​ ಕುಮಾರ್​ ಜೋಡಿ ಏಷ್ಯಾಡ್​ ಸ್ಕ್ವಾಷ್​​ ಸ್ಪರ್ಧೆಯ ಮಿಶ್ರ ಡಬಲ್ಸ್​ ವಿಭಾಗದಲ್ಲಿ ಕಂಚಿನ ಪದಕಕ್ಕೆ ತೃಪ್ತಿಪಟ್ಟಿತು. 40 ವರ್ಷದ ಜೋಶ್ನಾ ಮತ್ತು ತಮಿಳುನಾಡಿನ 28 ವರ್ಷದ ಸೆಂಥಿಲ್​ ಜೋಡಿ ಶನಿವಾರ ನಡೆದ ಸೆಮೀಸ್​ನಲ್ಲಿ ಹಾಂಕಾಂಗ್​ನ ಟಂಗ್​ ಮಿಂಗ್​ ಹಾಂಗ್​ ಮತ್ತು ಲೀ ಕಯಿ ವಿರುದ್ಧ 1-2ರಿಂದ ಪರಾಭವಗೊಂಡಿತು. ಜೋಶ್ನಾಗೆ ಇದು ಏಷ್ಯಾಡ್​ನಲ್ಲಿ 6ನೇ ಪದಕ ಗೆಲುವಾಗಿದೆ. ಅವರು ಈ ಮುನ್ನ 2 ಬೆಳ್ಳಿ, 3 ಕಂಚು ಜಯಿಸಿದ್ದರು. "ತೀವ್ರ ನಿರಾಸೆಯೊಂದಿಗೆ ಅಪಾರ ಹೆಮ್ಮಯೂ ಆಗುತ್ತಿದೆ. ನಾವು ಉತ್ತಮವಾಗಿ ಆಡಿದರೂ, ಫೈನಲ್​ಗೇರಲಿಲ್ಲ. ನಮ್ಮ ಎದುರಾಳಿಗಳು ನಿಟಕ ಹೋರಾಟ ತೋರಿದರು' ಎಂದು ಜೋಶ್ನಾ ಹೇಳಿದರು.