ಐಚಿ-ನಗೋಯಾ: ಚಿನ್ನದ ಪದಕ ಗೆಲುವಿನೊಂದಿಗೆ 2028ರ ಲಾಸ್ ಏಂಜಲೀಸ್ ಒಲಿಂಪಿಕ್ಸ್ಗೆ ನೇರ ಅರ್ಹತೆ ಸಂಪಾದಿಸುವ ಹಂಬಲದಲ್ಲಿದ್ದ ಅನಾಹತ್ ಸಿಂಗ್ ಮತ್ತು ಅಭಯ್ ಸಿಂಗ್ ನಿರಾಸೆ ಅನುಭವಿಸಿದರು. ಏಷ್ಯಾಡ್ ಸ್ಕ್ವಾಷ್ ಸ್ಪರ್ಧೆಯ ಸಿಂಗಲ್ಸ್ ವಿಭಾಗದ ಫೈನಲ್ನಲ್ಲಿ ಅವರು ಭಾನುವಾರ ಮಲೇಷ್ಯಾ ತಾರೆಯರ ಎದುರು ಪರಾಭವಗೊಂಡು ರಜತ ಪದಕಕ್ಕೆ ಸಮಾಧಾನ ಕಂಡರು.
ಜೂನಿಯರ್ ವಿಶ್ವ ಚಾಂಪಿಯನ್ 18 ವರ್ಷದ ಅನಾಹತ್ ಸ್ವರ್ಣ ಪದಕದ ಹೋರಾಟದಲ್ಲಿ ವಿಶ್ವ ನಂ. 5 ಸಿವಸಂಗರಿ ಸುಬ್ರಹ್ಮಣ್ಯಂ ವಿರುದ್ಧ 4-11, 4-11, 7-11 ಅಂತರದಿಂದ ಪರಾಭವಗೊಂಡರು. ವಿಶ್ವ ನಂ. 17 ಅನಾಹತ್ ಫೈನಲ್ನಲ್ಲಿ ನಿರೀಕ್ಷಿತ ನಿರ್ವಹಣೆ ತೋರಲು ವಿಫಲರಾದರು. ದೆಹಲಿಯ ಅನಾಹತ್ ಏಷ್ಯಾಡ್ನಲ್ಲಿ ರಜತ ಗೆದ್ದ ಭಾರತದ ಮೊದಲ ಸ್ಕ್ವಾಷ್ ಆಟಗಾರ್ತಿ ಎನಿಸಿದರು. ಈ ಮುನ್ನ ಜೋಶ್ನಾ ಚಿನ್ನಪ್ಪ, ದೀಪಿಕಾ ಪಲ್ಲಿಕಲ್ ಕಂಚಿಗೆ ತೃಪ್ತಿಪಟ್ಟಿದ್ದರು.
ತಮಿಳುನಾಡಿನ ಅಭಯ್ ಸಿಂಗ್ 9-11, 5-11, 5-11ರಿಂದ ಹಾಲಿ ಚಾಂಪಿಯನ್ ಹಾಗೂ ವಿಶ್ವ ನಂ. 18 ಐನ್ ಯೌ ಎನ್ಜಿ ವಿರುದ್ಧ ಶರಣಾದರು. ಸಿವಸಂಗರಿ ಮತ್ತು ಐನ್ ಯೌ 2028ರ ಒಲಿಂಪಿಕ್ಸ್ಗೆ ನೇರ ಅರ್ಹತೆ ಗಳಿಸಿದರು. ವಿಶ್ವ ನಂ. 26 ಅಭಯ್ ಸಿಂಗ್ ಏಷ್ಯಾಡ್ ಸ್ಕ್ವಾಷ್ ನಲ್ಲಿ ರಜತ ಗೆದ್ದ ಭಾರತದ 2ನೇ ಆಟಗಾರ ಎನಿಸಿದರು. ಸೌರವ್ ಘೋಷಾಲ್ ಮೊದಲಿಗ.
ಸ್ಕ್ವಾಷ್ನಲ್ಲಿ ಇನ್ನು ಸೋಮವಾರದಿಂದ ಪುರುಷ-ಮಹಿಳಾ ತಂಡ ವಿಭಾಗದ ಸ್ಪರ್ಧೆ ಆರಂಭವಾಗಲಿದೆ.