ಕ್ರೀಡೆ

#AusOpen2025 ಜೋಕೊವಿಕ್ ಪ್ರಶಸ್ತಿ ಬೇಟೆಗೆ ಇಂಜುರಿ ಅಡ್ಡಿ, ಪ್ರೇಕ್ಷಕರ ಅಪಹಾಸ್ಯ: ಸಿನ್ನರ್-ಜ್ವೆರೇವ್ ಫೈನಲ್ ಹಣಾಹಣಿ

ಮೆಲ್ಬೋರ್ನ್: ಏಳನೇ ಶ್ರೇಯಾಂಕಿತ, 10 ಬಾರಿ ಚಾಂಪಿಯನ್ ನೊವಾಕ್ ಜೋಕೊವಿಕ್ ದಾಖಲೆಯ 25ನೇ ಗ್ರಾಂಡ್ ಸ್ಲಾಂ ಪ್ರಶಸ್ತಿಯ ರೇಸ್‌ನಲ್ಲಿ ಗಾಯದ ಹೊಡೆತ ಎದುರಿಸಿದ್ದಾರೆ. ಇದರೊಂದಿಗೆ ವರ್ಷದ ಮೊದಲ ಗ್ರಾಂಡ್ ಸ್ಲಾಂ ಆಸ್ಟ್ರೇಲಿಯನ್ ಓಪನ್ ಟೆನಿಸ್ ಟೂರ್ನಿಯ ಪುರುಷರ ಸಿಂಗಲ್ಸ್ ಸೆಮಿಪೈನಲ್‌ನಲ್ಲಿ ಹೊರಬಿದ್ದಿದ್ದಾರೆ. ಎರಡನೇ ಶ್ರೇಯಾಂಕಿತ ಅಲೆಕ್ಸಾಂಡರ್ ಜ್ವೆರೇವ್ ಹಾಗೂ ಹಾಲಿ ಚಾಂಪಿಯನ್ ಜನ್ನಿಕ್ ಸಿನ್ನರ್ ಫೈನಲ್‌ಗೇರಿದ್ದು, ಭಾನುವಾರ ವಿಶ್ವದ ಅಗ್ರ ಇಬ್ಬರು ಆಟಗಾರರ ನಡುವೆ ಪ್ರಶಸ್ತಿ ಹೋರಾಟ ನಡೆಯಲಿದೆ.

ರಾಡ್ ಲೇವರ್ ಅರೆನಾದಲ್ಲಿ ಶುಕ್ರವಾರ ನಡೆದ ಸೆಮಿಫೈನಲ್ ಪಂದ್ಯದಲ್ಲಿ 24 ಗ್ರಾಂಡ್ ಸ್ಲಾಂ ವಿಜೇತ ಜೋಕೊವಿಕ್ 6-7ರಿಂದ ಜರ್ಮನಿಯ ಜ್ವೆರೇವ್ ಎದುರು ಮೊದಲ ಸೆಟ್‌ನಲ್ಲಿ ಹಿನ್ನಡೆ ಅನುಭವಿಸಿದರು. ತಕ್ಷಣವೇ ಪಂದ್ಯದಲ್ಲಿ ಮುಂದುವರಿಯಲು ಸಾಧ್ಯವಾಗದೆ ಎದುರಾಳಿಗೆ ಹಸ್ತಲಾಘವ ನೀಡಿದ ಜೋಕೊವಿಕ್ ಪಂದ್ಯವನ್ನು ತ್ಯಜಿಸಿದರು. ಇದರೊಂದಿಗೆ ಜ್ವೆರೇವ್ ಸುಲಭವಾಗಿ ಪೈನಲ್‌ಗೆ ಮುನ್ನಡೆದರು. ಜೋಕೊವಿಕ್ ಪಂದ್ಯ ತ್ಯಜಿಸಿದಾಗ ದುಬಾರಿ ಬೆಲೆ ನೀಡಿ ಟಿಕೆಟ್ ಖರೀದಿಸಿದ್ದ ಪ್ರೇಕ್ಷಕರು ಅವರನ್ನು ಅಪಹಾಸ್ಯ ಮಾಡಿದರು. ಆಸ್ಟ್ರೇಲಿಯಾದಲ್ಲಿ 11ನೇ ಪ್ರಶಸ್ತಿ ನಿರೀಕ್ಷೆಯಲ್ಲಿದ್ದ 37 ವರ್ಷದ ಜೋಕೋ, ಕ್ವಾರ್ಟರ್‌ೈನಲ್‌ನಲ್ಲಿ ಅಲ್ಕರಾಜ್ ವಿರುದ್ಧದ ಪಂದ್ಯದಲ್ಲಿ ಎಡಗಾಲಿನ ತೊಡೆಯ ಸ್ನಾಯುಸೆಳೆತಕ್ಕೆ ಒಳಗಾಗಿದ್ದರು. ನೋವಿನ ನಡುವೆಯೂ ಸೆಮೀಸ್‌ಗೇರಿ 25ನೇ ಪ್ರಶಸ್ತಿ ಆಸೆ ಜೀವಂತವಿಟ್ಟಿದ್ದರು.

ಹಿಂದಿನ ಪ್ರಮುಖ 4 ಟೂರ್ನಿಗಳಲ್ಲಿ ಜೋಕೊವಿಕ್ ಪಂದ್ಯವನ್ನು ಅರ್ಧಕ್ಕೆ ತ್ಯಜಿಸಿದ 2ನೇ ದೃಷ್ಟಾಂತ ಇದಾಗಿದೆ. ಕಳೆದ ವರ್ಷ ್ರೆಂಚ್ ಓಪನ್‌ನಲ್ಲಿ ಕೊನೆಯದಾಗಿ ಈ ದೃಷ್ಟಾಂತ ಎದುರಾಗಿತ್ತು. ಬಳಿಕ ಬಲ ಮೊಣಕಾಲಿನ ಶಸಚಿಕಿತ್ಸೆಯಿಂದ ಚೇತರಿಸಿಕೊಂಡು ಪ್ಯಾರಿಸ್‌ನಲ್ಲಿ ಚಿನ್ನದ ಪದಕಕ್ಕೆ ಕೊರಳೊಡ್ಡಿದ್ದರು.

27 ವರ್ಷದ ಜ್ವೆರೇವ್‌ಗೆ ಇದು ಮೂರನೇ ಮೇಜರ್ ಟೂರ್ನಿ ಫೈನಲ್ ಎನಿಸಿದ್ದು, 2020ರ ಯುಎಸ್ ಓಪನ್ ಹಾಗೂ 2024ರ ಫ್ರೆಂಚ್ ಓಪನ್‌ನಲ್ಲಿ ರನ್ನರ್ ಅಪ್ ಆಗಿದ್ದರು. ಮೆಲ್ಬೋರ್ನ್ ಪಾರ್ಕ್‌ನಲ್ಲಿ ಮೊದಲ ಫೈನಲ್ ಇದಾಗಿದೆ.

ಸಿನ್ನರ್ ಅಜೇಯ ಓಟ

ಇಟಲಿಯ ಜನ್ನಿಕ್ ಸಿನ್ನರ್ ಸತತ ಎರಡನೇ ವರ್ಷವೂ ಮೆಲ್ಬೋರ್ನ್ ಪಾರ್ಕ್‌ನಲ್ಲಿ ಫೈನಲ್‌ಗೇರಿದ ಸಾಧನೆ ಮಾಡಿದ್ದಾರೆ. ದಿನದ ಎರಡನೇ ಸೆಮಿೈನಲ್‌ನಲ್ಲಿ ವಿಶ್ವ ನಂ.1 ಸಿನ್ನರ್ 7-6(2), 6-2, 6-2 ನೇರ ಸೆಟ್‌ಗಳಿಂದ 21ನೇ ಶ್ರೇಯಾಂಕಿತ ಅಮೆರಿಕದ ಬೆನ್ ಶೆಲ್ಟನ್‌ರನ್ನು ಮಣಿಸಿದರು. 2 ಗಂಟೆ 26 ನಿಮಿಷ ನಡೆದ ಕಾದಾಟದಲ್ಲಿ 21 ವರ್ಷದ ಶೆಲ್ಟನ್ ಮೊದಲ ಸೆಟ್‌ನಲ್ಲಿ ಮಾತ್ರ ಹೋರಾಟ ತೋರಿದರು. ಕಳೆದ ವರ್ಷ ಆಸ್ಟ್ರೇಲಿಯಾದಲ್ಲಿ ಮೊದಲ ಗ್ರಾಂಡ್ ಸ್ಲಾಂ ಜಯಿಸಿದ್ದ ಸಿನ್ನರ್ ಬಳಿಕ ಯುಎಸ್ ಓಪನ್‌ನಲ್ಲಿ ಚಾಂಪಿಯನ್ ಆಗಿದ್ದರು. ೈನಲ್‌ನಲ್ಲಿ ಸಿನ್ನರ್‌ಗೆ ಜ್ವೆರೇವ್ ಎದುರಾಗಲಿದ್ದು, 2-4 ಜಯ-ಸೋಲಿನ ಹಿನ್ನಡೆ ಹೊಂದಿದ್ದಾರೆ.

2. ಜನ್ನಿಕ್ ಸಿನ್ನರ್ (23 ವರ್ಷ) ಸತತ 2ನೇ ಬಾರಿ ಆಸ್ಟ್ರೇಲಿಯನ್ ಓಪನ್ ಫೈನಲ್‌ಗೇರಿದ 2ನೇ ಕಿರಿಯ ಆಟಗಾರ. ಜಿಮ್ ಕೊರಿಯರ್ (22 ವರ್ಷ) ಮೊದಲ ಕಿರಿಯ ಆಟಗಾರ.

20: ಜನ್ನಿಕ್ ಸಿನ್ನರ್ ಮುಕ್ತ ಯುಗದಲ್ಲಿ ಸತತ 20 ಹಾರ್ಡ್ ಕೋರ್ಟ್ ಗ್ರಾಂಡ್ ಸ್ಲಾಂ ಪಂದ್ಯ ಗೆದ್ದ 2ನೇ ಕಿರಿಯ ಆಟಗಾರ. ಜಾನ್ ಮೆಕ್‌ಎನ್ರೋ (1981) ಮೊದಲಿಗ.