ಕ್ರೀಡೆ

ಅಮಿತ್ ಪಾಂಗಲ್ ವಿಶ್ವ ನಂ.1 ಬಾಕ್ಸರ್: ಟಾಸ್ಕ್ ಫೋರ್ಸ್ ರ‍್ಯಾಂಕಿಂಗ್ ದಶಕದ ಬಳಿಕ ಭಾರತೀಯರಿಗೆ ಗೌರವ

ನವದೆಹಲಿ: ವಿಶ್ವ ಚಾಂಪಿಯನ್​ಷಿಪ್ ರಜತ ಪದಕ ವಿಜೇತ ಅಮಿತ್ ಪಾಂಗಲ್ ಒಲಿಂಪಿಕ್ಸ್ ಅರ್ಹತಾ ಕೂಟದ ಐಒಸಿ ಬಾಕ್ಸಿಂಗ್ ಟಾಸ್ಕ್ ಫೋರ್ಸ್ ರ್ಯಾಂಕಿಂಗ್​ನಲ್ಲಿ ವಿಶ್ವ ನಂ. 1 ಎನಿಸಿದ್ದಾರೆ. ಅವರು ಕಳೆದೊಂದು ದಶಕದಲ್ಲಿ ವಿಶ್ವ ಬಾಕ್ಸಿಂಗ್​ನಲ್ಲಿ ಅಗ್ರಸ್ಥಾನ ಪಡೆದ ಮೊದಲ ಭಾರತೀಯರೆನಿಸಿದ್ದಾರೆ.

2009ರಲ್ಲಿ ಕೊನೆಯದಾಗಿ ವಿಜೇಂದರ್ ಸಿಂಗ್ ಈ ಸಾಧನೆ ಮಾಡಿದ್ದರು. 24 ವರ್ಷದ ಅಮಿತ್ 75 ಕೆಜಿ ವಿಭಾಗದಲ್ಲಿ ಒಟ್ಟು 420 ಅಂಕದೊಂದಿಗೆ ಅಗ್ರಸ್ಥಾನ ಪಡೆದಿದ್ದಾರೆ. ಅಂತಾರಾಷ್ಟ್ರೀಯ ಬಾಕ್ಸಿಂಗ್ ಸಂಸ್ಥೆ (ಎಐಬಿಎ) ಆರ್ಥಿಕ-ಆಡಳಿತಾತ್ಮಕ ಅವ್ಯವಹಾರದಿಂದಾಗಿ ಸದ್ಯ ಅಮಾನತಿನಲ್ಲಿರುವ ಕಾರಣ ಅಂತಾರಾಷ್ಟ್ರೀಯ ಒಲಿಂಪಿಕ್ಸ್ ಸಮಿತಿಯ (ಐಒಸಿ) ಬಾಕ್ಸಿಂಗ್ ಟಾಸ್ಕ್ ಫೋರ್ಸ್, ವಿಶ್ವ ಬಾಕ್ಸಿಂಗ್​ನ ಆಡಳಿತವನ್ನು ನೋಡಿಕೊಳ್ಳುತ್ತಿದೆ. ‘ಅರ್ಹತಾ ಕೂಟದಲ್ಲಿ ಅಗ್ರ ಶ್ರೇಯಾಂಕ ಪಡೆಯಲು ಕೂಡ ಇದು ನೆರವಾಗಲಿದೆ. ಸಾಕಷ್ಟು ಆತ್ಮವಿಶ್ವಾಸವನ್ನೂ ತುಂಬಲಿದೆ. ಮೊದಲ ಅರ್ಹತಾ ಕೂಟದಲ್ಲೇ ಒಲಿಂಪಿಕ್ಸ್ ಅರ್ಹತೆ ಸಂಪಾದಿಸುವ ಭರವಸೆಯಲ್ಲಿದ್ದೇನೆ’ ಎಂದು ರೋಹ್ಟಕ್​ನ ಬಾಕ್ಸರ್ ಅಮಿತ್ ಹೇಳಿದ್ದಾರೆ.

63 ಕೆಜಿ ವಿಭಾಗದಲ್ಲಿ ಮನೀಷ್ ಕೌಶಿಕ್ 12ನೇ ಸ್ಥಾನದಲ್ಲಿದ್ದರೆ, ಶಿವ ಥಾಪಾ 36ನೇ ಸ್ಥಾನದಲ್ಲಿದ್ದಾರೆ. 69 ಕೆಜಿ ವಿಭಾಗದಲ್ಲಿ ಮನೋಜ್ ಕುಮಾರ್ 71ನೇ ಸ್ಥಾನದಲ್ಲಿದ್ಧಾರೆ. -ಪಿಟಿಐ

ಮೇರಿ ಕೋಮ್ೆ 5ನೇ ಸ್ಥಾನ

ಆರು ಬಾರಿಯ ವಿಶ್ವ ಚಾಂಪಿಯನ್ ಮೇರಿ ಕೋಮ್ ಮಹಿಳೆಯರ 51 ಕೆಜಿ ವಿಭಾಗದ ರ್ಯಾಂಕಿಂಗ್​ನಲ್ಲಿ 5ನೇ ಸ್ಥಾನದಲ್ಲಿದ್ದಾರೆ. ಭಾರತದ ಮತ್ತೋರ್ವ ಬಾಕ್ಸರ್ ನಿಖತ್ ಜರೀನ್ 22ನೇ ಸ್ಥಾನದಲ್ಲಿದ್ದಾರೆ. 69 ಕೆಜಿ ವಿಭಾಗದಲ್ಲಿ 3ನೇ ಸ್ಥಾನದಲ್ಲಿರುವ ಲವ್ಲಿನಾ ಬೋರ್ಗೆಹೈನ್ ಮಹಿಳೆಯರಲ್ಲಿ ಭಾರತದ ಉನ್ನತ ಶ್ರೇಯಾಂಕಿತ ಬಾಕ್ಸರ್ ಆಗಿದ್ದಾರೆ.