ನವದೆಹಲಿ: ಐಪಿಎಲ್ 14ನೇ ಆವೃತ್ತಿಗೆ ಪೂರ್ವಭಾವಿಯಾಗಿ ಫೆಬ್ರವರಿ 18ರಂದು ಚೆನ್ನೈನಲ್ಲಿ ನಡೆಯಲಿರುವ ಆಟಗಾರರ ಹರಾಜು ಪ್ರಕ್ರಿಯೆಗೆ 292 ಕ್ರಿಕೆಟಿಗರ ಹೆಸರು ಅಂತಿಮಗೊಂಡಿದೆ. ಈ ಪೈಕಿ 164 ಭಾರತೀಯರಾಗಿದ್ದರೆ, 128 ವಿದೇಶಿ ಕ್ರಿಕೆಟಿಗರಾಗಿದ್ದಾರೆ. 2013ರ ಸ್ಪಾಟ್ ಫಿಕ್ಸಿಂಗ್ ಪ್ರಕರಣದಲ್ಲಿ ನಿಷೇಧ ಶಿಕ್ಷೆ ಮುಗಿಸಿ ಐಪಿಎಲ್‌ಗೆ ಮರಳಲು ಸಜ್ಜಾಗಿದ್ದ ಟೀಮ್ ಇಂಡಿಯಾ ಮಾಜಿ ವೇಗಿ ಎಸ್. ಶ್ರೀಶಾಂತ್ ಅಚ್ಚರಿಯ ರೀತಿಯಲ್ಲಿ ಹರಾಜು ಪಟ್ಟಿಯಿಂದ ಹೊರಬಿದ್ದಿದ್ದಾರೆ. ಶ್ರೀಶಾಂತ್ 75 ಲಕ್ಷ ರೂ. ಮೂಲಬೆಲೆಗೆ ಹೆಸರು ನೋಂದಾಯಿಸಿಕೊಂಡಿದ್ದರು. ಆದರೆ ಅವರು ಹರಾಜಿನಲ್ಲಿ ಕಾಣಿಸಿಕೊಳ್ಳಬೇಕೆಂದು ಯಾವ ಫ್ರಾಂಚೈಸಿಯೂ ಆಸಕ್ತಿ ವ್ಯಕ್ತಪಡಿಸಿಲ್ಲ.
ಹರಾಜಿಗೆ ಹೆಸರು ನೋಂದಾಯಿಸಿಕೊಂಡಿದ್ದ ಒಟ್ಟು 1,114 ಆಟಗಾರರ ಪಟ್ಟಿಯಿಂದ 8 ತಂಡಗಳ ಆಸಕ್ತಿಯನ್ನು ಗಮನಿಸಿ ಈ ಹೆಸರುಗಳನ್ನು ಅಂತಿಮಗೊಳಿಸಲಾಗಿದೆ. ಗರಿಷ್ಠ 2 ಕೋಟಿ ರೂ. ಮೂಲಬೆಲೆಗೆ ಇಬ್ಬರು ಭಾರತೀಯರಾದ ಹರ್ಭಜನ್ ಸಿಂಗ್ ಮತ್ತು ಕೇದಾರ್ ಜಾಧವ್ ಸಹಿತ ಒಟ್ಟು 10 ಆಟಗಾರರ ಹೆಸರು ಪಟ್ಟಿಯಲ್ಲಿದೆ. ಆಸ್ಟ್ರೇಲಿಯಾದ ಸ್ಟೀವನ್ ಸ್ಮಿತ್, ಗ್ಲೆನ್ ಮ್ಯಾಕ್ಸ್‌ವೆಲ್, ಇಂಗ್ಲೆಂಡ್‌ನ ಜೇಸನ್ ರಾಯ್, ಲಿಯಾಮ್ ಪ್ಲಂಕೆಟ್, ಮಾರ್ಕ್ ವುಡ್, ಸ್ಯಾಮ್ ಬಿಲ್ಲಿಂಗ್ಸ್, ಮೊಯಿನ್ ಅಲಿ, ಬಾಂಗ್ಲಾದೇಶದ ಶಕೀಬ್ ಅಲ್ ಹಸನ್ 2 ಕೋಟಿ ರೂ. ಮೂಲಬೆಲೆಯ ವಿದೇಶಿ ಆಟಗಾರರಾಗಿದ್ದಾರೆ.
12 ಆಟಗಾರರು 1.5 ಕೋಟಿ ರೂ. ಮೂಲಬೆಲೆ ಹೊಂದಿದ್ದಾರೆ. ಟೆಸ್ಟ್ ಬ್ಯಾಟ್ಸ್‌ಮನ್ ಹನುಮ ವಿಹಾರಿ ಮತ್ತು ವೇಗಿ ಉಮೇಶ್ ಯಾದವ್ ಸಹಿತ 11 ಆಟಗಾರರು ತಲಾ 1 ಕೋಟಿ ರೂ. ಮೂಲಬೆಲೆಯ ಆಟಗಾರರ ಪಟ್ಟಿಯಲ್ಲಿದ್ದಾರೆ. ಆರ್‌ಸಿಬಿ ತಂಡದಿಂದ ಹೊರಬಿದ್ದಿರುವ ಆಸೀಸ್ ಸೀಮಿತ ಓವರ್ ತಂಡದ ನಾಯಕ ಆರನ್ ಫಿಂಚ್ 1 ಕೋಟಿ ರೂ. ಮೂಲಬೆಲೆಯೊಂದಿಗೆ ಹರಾಜಿನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಹರಾಜಿಗೆ 50 ಲಕ್ಷ ರೂ. ಮೂಲಬೆಲೆಯೊಂದಿಗೆ ಹೆಸರು ನೋಂದಾಯಿಸಿಕೊಂಡಿದ್ದ ಟೆಸ್ಟ್ ಬ್ಯಾಟ್ಸ್‌ಮನ್ ಚೇತೇಶ್ವರ ಪೂಜಾರ ಅಂತಿಮ ಪಟ್ಟಿಯಲ್ಲಿ ಸ್ಥಾನ ಪಡೆದಿಲ್ಲ.15 ಆಟಗಾರರು 75 ಲಕ್ಷ ರೂ. ಮತ್ತು 65 ಆಟಗಾರರು 50 ಲಕ್ಷ ರೂ. ಮೂಲಬೆಲೆ ಹೊಂದಿದ್ದಾರೆ.
ಹರಾಜಿನಲ್ಲಿ 8 ತಂಡಗಳು 22 ವಿದೇಶಿಯರ ಸಹಿತ ಗರಿಷ್ಠ 61 ಆಟಗಾರರನ್ನು ಖರೀದಿಸಲು ಅವಕಾಶವಿದೆ. ಆರ್‌ಸಿಬಿ ತಂಡ ಗರಿಷ್ಠ 13 ಆಟಗಾರರನ್ನು ಖರೀದಿಸಬಹುದಾಗಿದೆ. ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ಗರಿಷ್ಠ 5 ವಿದೇಶಿ ಆಟಗಾರರನ್ನು ಸೇರಿಸಿಕೊಳ್ಳಬಹುದಾಗಿದೆ. ಅಲ್ಲದೆ ಗರಿಷ್ಠ 53.2 ಕೋಟಿ ರೂ. ಬಜೆಟ್ ಕೂಡ ಉಳಿಸಿಕೊಂಡಿದೆ.
17 ಹೊಸ ಆಟಗಾರರ ಸೇರ್ಪಡೆ
ಬಿಸಿಸಿಐ ಈ ಹಿಂದೆ 1,097 ಆಟಗಾರರು ಹರಾಜಿಗೆ ಹೆಸರು ನೋಂದಾಯಿಸಿಕೊಂಡಿದ್ದಾರೆ ಎಂದು ತಿಳಿಸಿತ್ತು. ನಂತರದಲ್ಲಿ 17 ಹೊಸ ಆಟಗಾರರನ್ನು ಈ ಪಟ್ಟಿಗೆ ಸೇರಿಸಿಕೊಂಡಿತ್ತು. ಅವರೆಲ್ಲರೂ ಈಗ ಹರಾಜಿನಲ್ಲೂ ಕಾಣಿಸಿಕೊಳ್ಳಲಿದ್ದಾರೆ. ಆಸ್ಟ್ರೇಲಿಯಾದ ಶಾನ್ ಮಾರ್ಷ್, ಜಾಕ್ ವಿಲ್ಡರ್‌ಮುತ್, ನ್ಯೂಜಿಲೆಂಡ್‌ನ ಕೋರಿ ಆಂಡರ್‌ಸನ್, ದಕ್ಷಿಣ ಆಫ್ರಿಕಾದ ಮಾರ್ನ್ ಮಾರ್ಕೆಲ್ ಇವರಲ್ಲಿ ಪ್ರಮುಖರಾದವರು.
ಐಪಿಎಲ್ ಕ್ರಿಕೆಟಿಗರ ಹರಾಜು ಪ್ರಕ್ರಿಯೆ
ಯಾವಾಗ: ಫೆಬ್ರವರಿ 18
ಸಮಯ: ಮಧ್ಯಾಹ್ನ 3.00ರಿಂದ ರಾತ್ರಿ 9.00
ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್
ಎಲ್ಲಿ: ಚೆನ್ನೈ
ರೇಸ್‌ನಲ್ಲಿ ಸಚಿನ್ ಪುತ್ರ ಅರ್ಜುನ್
ಕ್ರಿಕೆಟ್ ದಿಗ್ಗಜ ಸಚಿನ್ ತೆಂಡುಲ್ಕರ್ ಪುತ್ರ ಅರ್ಜುನ್ ತೆಂಡುಲ್ಕರ್ ಐಪಿಎಲ್ ಆಟಗಾರರ ಹರಾಜಿಗೆ ಅಂತಿಮ ಪಟ್ಟಿಯಲ್ಲೂ ಸ್ಥಾನ ಉಳಿಸಿಕೊಳ್ಳುವಲ್ಲಿ ಸಲರಾಗಿದ್ದಾರೆ. ಅವರು 20 ಲಕ್ಷ ರೂ. ಮೂಲಬೆಲೆ ಹೊಂದಿದ್ದಾರೆ. ಕಳೆದ ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿ ಟಿ20 ಟೂರ್ನಿಯಲ್ಲಿ ಮುಂಬೈ ತಂಡದ ಪರ ಪದಾರ್ಪಣೆ ಮಾಡುವ ಮೂಲಕ 21 ವರ್ಷದ ಎಡಗೈ ವೇಗಿ ಅರ್ಜುನ್ ಐಪಿಎಲ್ ಹರಾಜಿಗೆ ಅರ್ಹತೆ ಸಂಪಾದಿಸಿದ್ದರು. ಅರ್ಜುನ್‌ರನ್ನು ಮುಂಬೈ ಇಂಡಿಯನ್ಸ್ ತಂಡ ಖರೀದಿಸುವ ನಿರೀಕ್ಷೆ ಇದೆ. ಇದಕ್ಕಾಗಿ ಈಗಾಗಲೆ ಸಚಿನ್ ತೆಂಡುಲ್ಕರ್ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಮುಂಬೈ ್ರಾಂಚೈಸಿಗೆ ಮನವಿಯನ್ನೂ ಸಲ್ಲಿಸಿದ್ದಾರೆ.
ಹರಾಜಿಗೆ ಕರ್ನಾಟಕದ 14 ಕ್ರಿಕೆಟಿಗರು
ಕರ್ನಾಟಕದಿಂದ ಒಟ್ಟು 14 ಕ್ರಿಕೆಟಿಗರು ಈ ಬಾರಿ ಹರಾಜಿನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅವರೆಂದರೆ ಕರುಣ್ ನಾಯರ್, ಅಭಿಮನ್ಯು ಮಿಥುನ್ (ಇಬ್ಬರಿಗೂ 50 ಲಕ್ಷ ರೂ. ಮೂಲಬೆಲೆ), ಕೆಸಿ ಕಾರ್ಯಪ್ಪ, ಜೆ. ಸುಚಿತ್, ಕೆ. ಗೌತಮ್, ಕೆಎಲ್ ಶ್ರೀಜಿತ್, ಕುಶಾಲ್ ವಧ್ವಾನಿ, ರೋಹನ್ ಕದಂ, ಮೊಹಮದ್ ತಾಹ, ಸಾದಿಕ್ ಕಿರ್ಮಾನಿ, ರೋನಿತ್ ಮೋರೆ, ಅರ್ಷದೀಪ್ ಬ್ರಾರ್, ಶುಭಾಂಗ್ ಹೆಗ್ಡೆ, ಅನಿರುದ್ಧ ಜೋಶಿ (ಎಲ್ಲರಿಗೂ 20 ಲಕ್ಷ ರೂ. ಮೂಲಬೆಲೆ).