ಕ್ರೀಡೆ

ಪ್ರತಿ ತಂಡಗಳಿಗೆ ಐವರು ಕ್ರಿಕೆಟಿಗರ ಉಳಿಕೆಗೆ ಅವಕಾಶ? ಬಿಸಿಸಿಐನಿಂದ ಐಪಿಎಲ್​ ರಿಟೇನ್ ನಿಯಮ ಬಹುತೇಕ ಅಂತಿಮ!

ನವದೆಹಲಿ: ಮುಂಬರುವ ಐಪಿಎಲ್​ 18ನೇ ಆವೃತ್ತಿಯ ಹರಾಜು ಪ್ರಕ್ರಿಯೆಗೆ ಮುನ್ನ ಪ್ರತಿ ತಂಡಗಳು ರಿಟೇನ್​ ಮಾಡಿಕೊಳ್ಳಬಹುದಾದ ಆಟಗಾರರ ಸಂಖ್ಯೆಯನ್ನು ಬಿಸಿಸಿಐ ಬಹುತೇಕ ಅಂತಿಮಗೊಳಿಸಿದೆ. ಬುಧವಾರ ನಡೆದ ಬಿಸಿಸಿಐ ಅಪೆಕ್ಸ್​ ಕೌನ್ಸಿಲ್​ ಸಭೆಯಲ್ಲಿ ರಿಟೇನ್​ ನಿಯಮಾವಳಿಯನ್ನು ಸಿದ್ಧಪಡಿಸಲಾಗಿದ್ದು, ಬೆಂಗಳೂರಿನಲ್ಲಿ ಭಾನುವಾರ ನಡೆಯಲಿರುವ ವಾರ್ಷಿಕ ಮಹಾಸಭೆಯಲ್ಲಿ ಇದಕ್ಕೆ ಅಂಗೀಕಾರ ಪಡೆದುಕೊಳ್ಳುವ ನಿರೀಕ್ಷೆ ಇದೆ. ಸಿದ್ಧಪಡಿಸಲಾದ ನಿಯಮಾವಳಿ ಪ್ರಕಾರ, ಪ್ರತಿ ತಂಡ ಗರಿಷ್ಠ ಐವರು ಆಟಗಾರರನ್ನು ರಿಟೇನ್​ ಮಾಡಿಕೊಳ್ಳಲು ಬಿಸಿಸಿಐ ಅವಕಾಶ ನೀಡಲಿದೆ ಎನ್ನಲಾಗಿದೆ.

ಈ ಮುನ್ನ 2022ರ ಹರಾಜಿಗೆ ಮುನ್ನ ಪ್ರತಿ ತಂಡಕ್ಕೆ ಗರಿಷ್ಠ ನಾಲ್ವರು ಆಟಗಾರರನ್ನು ಮಾತ್ರ ರಿಟೇನ್​ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿತ್ತು. ಈ ಪೈಕಿ ಗರಿಷ್ಠ 3 ಭಾರತೀಯರು ಮತ್ತು ಗರಿಷ್ಠ ಇಬ್ಬರು ವಿದೇಶಿಯರು ಆಗಿರಬೇಕೆಂದು ಸೂಚಿಸಿತ್ತು. ಆದರೆ ಈ ಬಾರಿ ಪ್ರತಿ ತಂಡ ಗರಿಷ್ಠ ಎಷ್ಟು ವಿದೇಶಿ ಆಟಗಾರರನ್ನು ಉಳಿಸಿಕೊಳ್ಳಬಹುದು ಎಂಬ ಬಗ್ಗೆ ಬಿಸಿಸಿಐನಿಂದ ಸ್ಪಷ್ಟತೆ ಸಿಕ್ಕಿಲ್ಲ.

ಇತ್ತೀಚೆಗೆ ಎಲ್ಲ 10 ತಂಡಗಳ ಮಾಲೀಕರು ಬಿಸಿಸಿಐ ಪದಾಧಿಕಾರಿಗಳ ಜತೆಗೆ ನಡೆಸಿದ ಸಭೆಯಲ್ಲಿ, 5-6 ಆಟಗಾರರ ರಿಟೇನ್​ ಅವಕಾಶಕ್ಕೆ ಬೇಡಿಕೆ ಇಟ್ಟಿದ್ದರು. ಅದರನ್ವಯ ಬಿಸಿಸಿಐ ಐವರು ಆಟಗಾರರ ರಿಟೇನ್​ಗೆ ಅವಕಾಶ ನೀಡುವ ಮೂಲಕ ತಂಡಗಳಿಗೆ ತಮ್ಮ ಬ್ರಾ$್ಯಂಡ್​ ಮೌಲ್ಯವನ್ನೂ ರಕ್ಷಿಸಿಕೊಳ್ಳಲು ಅವಕಾಶ ಕಲ್ಪಿಸಲಿದೆ ಎನ್ನಲಾಗಿದೆ.

ಮತ್ತೆ ಆರ್​ಟಿಎಂ ಇಲ್ಲ?

ಹರಾಜಿನಲ್ಲಿ ತಂಡಗಳು ತನ್ನ ಮೂಲ ಆಟಗಾರರನ್ನು ಮಾರಾಟವಾಗುವ ಗರಿಷ್ಠ ಮೊತ್ತಕ್ಕೆ ತನ್ನಲ್ಲೇ ಉಳಿಸಿಕೊಳ್ಳಲು ಅವಕಾಶ ನೀಡುವ ರೈಟ್​ ಟು ಮ್ಯಾಚ್​ (ಆರ್​ಟಿಎಂ) ಕಾರ್ಡ್​ಅನ್ನು ಬಿಸಿಸಿಐ ಈ ಸಲವೂ ಬಳಸಿಕೊಳ್ಳಲು ಅವಕಾಶ ನೀಡುವುದಿಲ್ಲ ಎನ್ನಲಾಗಿದೆ. 2018ರಿಂದ ಬಿಸಿಸಿಐ ಹರಾಜಿನಲ್ಲಿ ಈ ನಿಯಮದ ಬಳಕೆಗೆ ಅವಕಾಶ ಕಲ್ಪಿಸಿಲ್ಲ.

ಮುಂಬೈ ಇಂಡಿಯನ್ಸ್​ಗೆ ಅನುಕೂಲ!

ಪ್ರತಿ ತಂಡ ಗರಿಷ್ಠ 5 ಆಟಗಾರರನ್ನು ಉಳಿಸಿಕೊಳ್ಳಲು ಬಿಸಿಸಿಐ ಅವಕಾಶ ನೀಡುವುದರಿಂದ ಮುಂಬೈ ಇಂಡಿಯನ್ಸ್​ ತಂಡಕ್ಕೆ ತನ್ನ ಪ್ರಮುಖ ಆಟಗಾರರಾದ ರೋಹಿತ್​ ಶರ್ಮ, ಜಸ್​ಪ್ರೀತ್​ ಬುಮ್ರಾ, ಸೂರ್ಯಕುಮಾರ್​ ಯಾದವ್​ ಮತ್ತು ನಾಯಕ ಹಾರ್ದಿಕ್​ ಪಾಂಡ್ಯರನ್ನು ರಿಟೇನ್​ ಮಾಡಲು ನೆರವಾಗಲಿದೆ ಎನ್ನಲಾಗಿದೆ. ಮೂವರು ಭಾರತೀಯ ಆಟಗಾರರನ್ನಷ್ಟೇ ಉಳಿಸಿಕೊಳ್ಳಲು ಬಿಸಿಸಿಐ ಅವಕಾಶ ನೀಡಿದರೆ ಮುಂಬೈಗೆ ಇಕ್ಕಟ್ಟು ಎದುರಾಗುತ್ತಿತ್ತು. ಆದರೆ ಈಗ ತನ್ನ ನಾಲ್ಕೂ ಪ್ರಮುಖ ಆಟಗಾರರನ್ನು ಉಳಿಸಿಕೊಳ್ಳಲು ಅವಕಾಶ ಲಭಿಸಿದೆ. ಆದರೆ ರೋಹಿತ್​ ಶರ್ಮ, ಸೂರ್ಯಕುಮಾರ್​ರಂಥ ಆಟಗಾರರು ಇದನ್ನು ಒಪ್ಪಿಕೊಳ್ಳುವರೇ ಎಂಬ ಕುತೂಹಲವಿದೆ.