ಕ್ರೀಡೆ

ಬೆಂಗಳೂರು ಬುಲ್ಸ್‌ ಸಂಘಟಿತ ಹೋರಾಟಕ್ಕೆ ಸಂದ ಗೆಲುವು: ಅಲಿರೇಜಾ ಮಿರ್ಜಾಯಿನ್‌ ಸೂಪರ್‌ ಟೆನ್‌ ಸಾಹಸ

ನವದೆಹಲಿ: ಸಾಂಘಿಕ ಹೋರಾಟ ನೀಡಿದ ಬೆಂಗಳೂರು ಬುಲ್ಸ್‌ ತಂಡ ಪ್ರೊ ಕಬಡ್ಡಿ ಲೀಗ್‌ನ 12ನೇ ಆವೃತ್ತಿಯ ತನ್ನ 13ನೇ ಪಂದ್ಯದಲ್ಲಿ ಜೈಪುರ ಪಿಂಕ್‌ ಪ್ಯಾಂಥರ್ಸ್‌ ವಿರುದ್ಧ 21 ಅಂಕಗಳ ಭರ್ಜರಿ ಗೆಲುವು ಸಾಧಿಸಿತು. ಇದರೊಂದಿಗೆ ಟೂರ್ನಿಯಲ್ಲಿ ಏಳನೇ ಜಯ ದಾಖಲಿಸಿದ ಯೋಗೇಶ್‌ ಸಾರಥ್ಯದ ಬುಲ್ಸ್‌, ಒಟ್ಟು 14 ಅಂಕಗಳನ್ನು ಕಲೆಹಾಕಿ ಅಗ್ರ ಐದರಲ್ಲಿ ಸ್ಥಾನ ಉಳಿಸಿಕೊಂಡಿದೆ.

ಶನಿವಾರದಿಂದ ಟೂರ್ನಿಯ ನಾಲ್ಕನೇ ಹಾಗೂ ಅಂತಿಮ ಚರಣಕ್ಕೆ ವೇದಿಕೆಯಾದ ದಿಲ್ಲಿಯ ತ್ಯಾಗರಾಜ್‌ ಒಳಾಂಗಣ ಕ್ರೀಡಾಂಗಣದಲ್ಲಿನಡೆದ ಮೊದಲ ಪಂದ್ಯದಲ್ಲಿಬೆಂಗಳೂರು ಬುಲ್ಸ್‌ ತಂಡ 47-26 ಅಂಕಗಳಿಂದ ಜೈಪುರ ಪಿಂಕ್‌ ಪ್ಯಾಂಥರ್ಸ್‌ ತಂಡವನ್ನು ಪರಾಭವಗೊಳಿಸಿತು. ಮೊದಲಾವಧಿಯಲ್ಲಿಒಮ್ಮೆ ಮತ್ತು ದ್ವಿತೀಯಾರ್ಧದಲ್ಲಿ ಎರಡು ಬಾರಿ ಪ್ಯಾಂಥರ್ಸ್‌ ತಂಡವನ್ನು ಆಲೌಟ್‌ ಮಾಡಿದ್ದು ಬುಲ್ಸ್‌ನ ಆಕ್ರಮಣಕಾರಿ ಆಟಕ್ಕೆ ಸಾಕ್ಷಿಯಾಯಿತು.

ಬುಲ್ಸ್‌ ತಂಡದ ಪರ ಅಲಿರೇಜಾ ಮಿರ್ಜಾಯಿನ್‌ 12 ಅಂಕಗಳನ್ನು ಗಳಿಸಿ ಮತ್ತೊಮ್ಮೆ ಸೂಪರ್‌ ಟೆನ್‌ ಸಾಹಸ ಮಾಡಿದರು. ಆಶಿಶ್‌ ಮಲಿಕ್‌ ಮತ್ತು ದೀಪಕ್‌ ಶಂಕರ್‌ ತಲಾ 5 ಅಂಕಗಳ ಕೊಡುಗೆ ನೀಡಿದರೆ, ಯೋಗೇಶ್‌ 8 ಅಂಕಗಳ ಕಾಣಿಕೆ ನೀಡಿದರು. ಅತ್ತ ಅಲಿ (9 ಅಂಕ) ಮತ್ತು ವಿನಯ್‌(6 ಅಂಕ) ಸೋಲಿನ ಅಂತರ ತಗ್ಗಿಸಲು ಹೋರಾಡಿದರು.

ಇದಕ್ಕೂ ಮುನ್ನ ಪೂರ್ವಾರ್ಧದ ಮುನ್ನಡೆಯಿಂದ ಆತ್ಮವಿಶ್ವಾಸದೊಂದಿಗೆ ಉತ್ತರಾರ್ಧ ಆರಂಭಿಸಿದ ಬುಲ್ಸ್‌, ಕೇವಲ 3 ನಿಮಿಷಗಳ ಅಂತರದಲ್ಲಿ ಎರಡನೇ ಬಾರಿ ಪ್ಯಾಂಥರ್ಸ್‌ ಆಟಗಾರರ ಮನೆಯನ್ನು ಖಾಲಿ ಮಾಡಿಸಿತು. ಇದು ಸಹಜವಾಗಿ ಬುಲ್ಸ್‌ ಪ್ರಭುತ್ವಕ್ಕೆ ನೆರವಾದರೆ, ಜೈಪುರ ಒತ್ತಡಕ್ಕೆ ಸಿಲುಕಿತು.ಅಲಿ ಸಮಾದಿ ಮತ್ತು ವಿನಯ್‌ ಹೊರತುಪಡಿಸಿ ಬೇರೆ ಯಾರೂ ಜೈಪುರ ಪರ ನಿರೀಕ್ಷಿತ ಪ್ರದರ್ಶನ ನೀಡಲಿಲ್ಲ.30 ನಿಮಿಷಗಳ ಅಂತ್ಯಕ್ಕೆ 32-19ರಲ್ಲಿ ಸ್ಪಷ್ಟ ಮುನ್ನಡೆ ಕಂಡುಕೊಂಡ ಕೋಚ್‌ ಬಿ. ಸಿ. ರಮೇಶ್‌ ಸಾರಥ್ಯದ ಬುಲ್ಸ್‌ ತಂಡ 7ನೇ ಗೆಲುವಿಗೆ ವೇದಿಕೆ ನಿರ್ಮಿಸಿಕೊಂಡಿತು.

ತಂಡದ ಎಲ್ಲಾ ಸದಸ್ಯರು ಖಾತೆ ತೆರೆದ ಪರಿಣಾಮ ಬೆಂಗಳೂರು ಬುಲ್ಸ್‌ ತಂಡ ಪಂದ್ಯದ ಮೊದಲಾರ್ಧದ ಅಂತ್ಯಕ್ಕೆ ಜೈಪುರ ಪಿಂಕ್‌ ಪ್ಯಾಂಥರ್ಸ್‌ ವಿರುದ್ಧ 4 (18-13)ಅಂಕಗಳ ಅಂತರ ಕಾಯ್ದುಕೊಂಡು ಮೇಲುಗೈ ಸಾಧಿಸಿತು.ಪಂದ್ಯದ ಆರಂಭದಿಂದಲೇ ಆಕ್ರಮಣಕಾರಿ ಆಟಕ್ಕೆ ಆದ್ಯತೆ ನೀಡಿದ ಬುಲ್ಸ್‌, ಎದುರಾಳಿ ತಂಡದ ಮೇಲೆ ನಿರಂತರ ಒತ್ತಡ ಹೇರಿದರು. ವಿಶೇಷ ಎಂದರೆ ತಂಡದ ಏಳೂ ಸದಸ್ಯರೂ ಮೊದಲಾರ್ಧದಲ್ಲಿ ಖಾತೆ ತೆರೆದಿದ್ದು, ತಂಡದ ಮೇಲುಗೈಗೆ ಕಾರಣವಾಯಿತು. ಅದರಲ್ಲೂಮೊದಲ ಹತ್ತು ನಿಮಿಷಗಳ ಆಟದಲ್ಲಿಜೈಪುರ ಪಿಂಕ್‌ ಪ್ಯಾಂಥರ್ಸ್‌ ತಂಡವನ್ನು ಆಲೌಟ್‌ ಮಾಡಿದ ಮಾಜಿ ಚಾಂಪಿಯನ್ಸ್‌ ಬುಲ್ಸ್‌, ದ್ವಿತೀಯಾರ್ಧಕ್ಕೆ ಮುನ್ನ ಆತ್ಮಸ್ಥೈರ್ಯವನ್ನು ವೃದ್ಧಿಸಿಕೊಂಡಿತು. ರೈಡರ್‌ ವಿನಯ್‌ ಅವರನ್ನು ಟ್ಯಾಕಲ್‌ ಮಾಡಿದ ದೀಪಕ್‌ ಶಂಕರ್‌ ಬುಲ್ಸ್‌ ತಂಡಕ್ಕೆ ಎರಡು ಆಲೌಟ್‌ ಅಂಕ ತಂದುಕೊಟ್ಟರು. ಇದಕ್ಕೂ ಮುನ್ನ ಬುಲ್ಸ್‌ ನಾಲ್ಕು ಅಂಕಗಳ ಅಂತರ ಕಾಯ್ದುಕೊಂಡಿತು.

ಬೆಂಗಳೂರು ಬುಲ್ಸ್‌ ತನ್ನ ಮುಂದಿನ ಪಂದ್ಯದಲ್ಲಿಅಕ್ಟೋಬರ್‌ 12ರಂದು ಬೆಂಗಾಲ್‌ ವಾರಿಯರ್ಸ್‌ ತಂಡದ ಸವಾಲು ಎದುರಿಸಲಿದೆ