ಕ್ರೀಡೆ

ಅಹರ್ನಿಶಿ ಅಭ್ಯಾಸ ಪಂದ್ಯದ ಮೊದಲ ದಿನ ಬುಮ್ರಾ ಆಲ್ರೌಂಡ್ ಶೋ!

ಸಿಡ್ನಿ: ಟೀಮ್ ಇಂಡಿಯಾದ ಪ್ರಧಾನ ವೇಗಿ ಜಸ್‌ಪ್ರೀತ್ ಬುಮ್ರಾ (55* ರನ್, 57 ಎಸೆತ, 6 ಬೌಂಡರಿ, 2 ಸಿಕ್ಸರ್, 33 ರನ್‌ಗೆ 2 ವಿಕೆಟ್) ಆಸ್ಟ್ರೇಲಿಯಾ ಪ್ರವಾಸದ ಟೆಸ್ಟ್ ಸರಣಿಗೆ ಪೂರ್ವಭಾವಿಯಾಗಿ ನಡೆಯುತ್ತಿರುವ ಅಹರ್ನಿಶಿ ಅಭ್ಯಾಸ ಪಂದ್ಯದ ಮೊದಲ ದಿನ ಆಲ್ರೌಂಡ್ ನಿರ್ವಹಣೆಯೊಂದಿಗೆ ಗಮನಸೆಳೆದಿದ್ದಾರೆ. ಭಾರತೀಯ ಬ್ಯಾಟಿಂಗ್ ವಿಭಾಗ ಕುಸಿತ ಕಂಡಾಗ ವೃತ್ತಿಜೀವನದ ಚೊಚ್ಚಲ ಅರ್ಧಶತಕ ಸಿಡಿಸಿ ಆಸರೆಯಾದ ಬುಮ್ರಾ ಬಳಿಕ ಆತಿಥೇಯ ಆಸ್ಟ್ರೇಲಿಯಾ ಎ ತಂಡವನ್ನು ಅಲ್ಪಮೊತ್ತಕ್ಕೆ ನಿಯಂತ್ರಿಸಿ ತ್ರಿದಿನ ಪಂದ್ಯದ ಮೇಲೆ ಸಂಪೂರ್ಣ ನಿಯಂತ್ರಣ ಸಾಧಿಸಲು ನೆರವಾದರು.

ಟಾಸ್ ಗೆದ್ದು ಬ್ಯಾಟಿಂಗ್ ಆಯ್ದ ಭಾರತ ತಂಡ 48.3 ಓವರ್‌ಗಳಲ್ಲಿ 194 ರನ್ ಪೇರಿಸಿತು. ಒಂದು ಹಂತದಲ್ಲಿ 2 ವಿಕೆಟ್‌ಗೆ 102 ರನ್ ಗಳಿಸಿ ಸುಸ್ಥಿತಿಯಲ್ಲೇ ಇದ್ದ ಭಾರತ ತಂಡ ಬಳಿಕ ದಿಢೀರ್ ಕುಸಿತ ಕಂಡು, 123 ರನ್‌ಗಳಿಗೆ 9 ವಿಕೆಟ್ ಕಳೆದುಕೊಂಡಿತು. ಆಗ ವೇಗಿಗಳಾದ ಬುಮ್ರಾ ಮತ್ತು ಮೊಹಮದ್ ಸಿರಾಜ್ (22) ಕೊನೆಯ ವಿಕೆಟ್‌ಗೆ ಅಮೂಲ್ಯ 71 ರನ್ ಸೇರಿಸಿ ಭಾರತ ತಂಡದ ಮೊತ್ತವನ್ನು 200ರ ಸನಿಹಕ್ಕೇರಿಸಿದರು. ಬಳಿಕ ಆಸ್ಟ್ರೇಲಿಯಾ ಎ ತಂಡ ದಿನದಂತ್ಯಕ್ಕೆ 108 ರನ್‌ಗಳಿಗೆ ಸರ್ವಪತನ ಕಂಡಿತು. ಪಿಂಕ್ ಪಂದ್ಯದ ಮೊದಲ ದಿನ ಮಳೆ ಅಡಚಣೆಯ ನಡುವೆಯೂ ಒಟ್ಟು 20 ವಿಕೆಟ್‌ಗಳು ಉರುಳಿದವು.

ನಾಯಕ ವಿರಾಟ್ ಕೊಹ್ಲಿ ಈ ಪಂದ್ಯದಿಂದ ವಿಶ್ರಾಂತಿ ಪಡೆದಿರುವುದರಿಂದ ಭಾರತ ತಂಡ, ಅಜಿಂಕ್ಯ ರಹಾನೆ ಸಾರಥ್ಯದಲ್ಲಿ ಕಣಕ್ಕಿಳಿದಿದೆ.

ಬುಮ್ರಾ ಬ್ಯಾಟಿಂಗ್ ಕಮಾಲ್

ಭಾರತ ತಂಡದ ಪರ ಗರಿಷ್ಠ ಸ್ಕೋರರ್ ಎನಿಸಿದ ಬುಮ್ರಾ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಸಿಡಿಸಿದ ಚೊಚ್ಚಲ ಅರ್ಧಶತಕ ಇದಾಗಿದೆ. ಅಜೇಯ 16 ರನ್ ಅವರ ಹಿಂದಿನ ಗರಿಷ್ಠ ಗಳಿಕೆಯಾಗಿತ್ತು. ವಿಲ್ ಸದರ್‌ಲ್ಯಾಂಡ್ ಎಸೆದ ಬೌನ್ಸರ್‌ನಲ್ಲಿ ಸಿಕ್ಸರ್ ಸಿಡಿಸುವ ಮೂಲಕ ಬುಮ್ರಾ ಅರ್ಧಶತಕ ಪೂರೈಸಿದರು. ವಿದೇಶಿ ನೆಲದ ಪಿಂಕ್ ಬಾಲ್ ಪಂದ್ಯದಲ್ಲಿ ಅರ್ಧಶತಕ ಸಿಡಿಸಿದ ಮೊದಲ ಭಾರತೀಯರೆಂಬ ಹೆಗ್ಗಳಿಕೆಯೂ ಅವರದಾಗಿದೆ.

ಭಾರತ: 48.3 ಓವರ್‌ಗಳಲ್ಲಿ 194 (ಪೃಥ್ವಿ ಷಾ 40, ಮಯಾಂಕ್ ಅಗರ್ವಾಲ್ 2, ಶುಭಮಾನ್ ಗಿಲ್ 43, ಹನುಮ ವಿಹಾರಿ 43, ರಹಾನೆ 4, ರಿಷಭ್ ಪಂತ್ 5, ಸಾಹ 0, ಬುಮ್ರಾ 55*, ಸಿರಾಜ್ 22, ಅಬೋಟ್ 46ಕ್ಕೆ 3, ವೈಲ್ಡರ್‌ಮತ್ 13ಕ್ಕೆ 3, ಗ್ರೀನ್ 20ಕ್ಕೆ 1), ಆಸ್ಟ್ರೇಲಿಯಾ ಎ: 32.2 ಓವರ್‌ಗಳಲ್ಲಿ 108 (ಮಾರ್ಕಸ್ ಹ್ಯಾರಿಸ್ 26, ಮ್ಯಾಡಿನ್‌ಸನ್ 19, ಕ್ಯಾರಿ 32, ಶಮಿ 29ಕ್ಕೆ 3, ಸೈನಿ 19ಕ್ಕೆ 3, ಬುಮ್ರಾ 33ಕ್ಕೆ 2, ಸಿರಾಜ್ 26ಕ್ಕೆ 1).