ಕ್ರೀಡೆ

ಪ್ರೊ ಕಬಡ್ಡಿ ಲೀಗ್​ನಲ್ಲಿ ಬೆಂಗಳೂರು ಬುಲ್ಸ್ ಗೆಲುವಿನ ಓಟ; ಪ್ಲೇಆಫ್​ ಸನಿಹ

ನವದೆಹಲಿ: ಇರಾನ್​ ಆಲ್ರೌಂಡರ್​ ಅಲಿರೇಜಾ ಮಿರ್ಜಾಯಿನ್​ (18 ಅಂಕ) ಭರ್ಜರಿ ಆಟದ ಬಲದಿಂದ ಬೆಂಗಳೂರು ಬುಲ್ಸ್​ ತಂಡ ಪ್ರೊ ಕಬಡ್ಡಿ ಲೀಗ್​ 12ನೇ ಆವೃತ್ತಿಯಲ್ಲಿ ಮತ್ತೊಮ್ಮೆ ಹ್ಯಾಟ್ರಿಕ್​ ಗೆಲುವಿನ ಸಂಭ್ರಮ ಕಂಡಿದೆ. ಬೆಂಗಾಲ್​ ವಾರಿಯರ್ಸ್​ ವಿರುದ್ಧ ಭಾನುವಾರ ನಡೆದ ಪಂದ್ಯದಲ್ಲಿ ಬುಲ್ಸ್​ ತಂಡ 43-32 ಅಂಕಗಳಿಂದ ಗೆಲುವು ದಾಖಲಿಸಿತು. 14ನೇ ಪಂದ್ಯದಲ್ಲಿ 8ನೇ ಗೆಲುವು ದಾಖಲಿಸಿ ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನಕ್ಕೇರಿದ ಕನ್ನಡಿಗ ಬಿ.ಸಿ. ರಮೇಶ್​ ಮಾರ್ಗದರ್ಶನದ ತಂಡ ಪ್ಲೇಆಫ್​​ ಅವಕಾಶ ವೃದ್ಧಿಸಿಕೊಂಡಿದೆ.

ತ್ಯಾಗರಾಜ ಸ್ಟೇಡಿಯಂಯಲ್ಲಿ ನಡೆದ ದಿನದ 2ನೇ ಪಂದ್ಯದಲ್ಲಿ ಬುಲ್ಸ್​ ಮೊದಲಾರ್ಧದಲ್ಲಿ 22-15ರಿಂದ ಮುನ್ನಡೆ ಸಾಧಿಸಿತು. ನಂತರ ದ್ವೀತಿಯಾರ್ಧದಲ್ಲೂ ಪಂದ್ಯದ ಮೇಲಿನ ಹಿಡಿತವನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಯಿತು. ಅಲಿರೇಜಾಗೆ ಆಶಿಶ್​ ಮಲಿಕ್​ (7) ಮತ್ತು ಕನ್ನಡಿಗ ಗಣೇಶ್​ ಹನಮಂತಗೋಳ್​ (5) ಉತ್ತಮ ಬೆಂಬಲ ಒದಗಿಸಿದರು.

ಅಗ್ರಸ್ಥಾನಕ್ಕೇರಿದ ಪುಣೇರಿ: ಈಗಾಗಲೆ ಪ್ಲೇಆಫ್​ ಪ್ರವೇಶ ಖಾತ್ರಿಪಡಿಸಿಕೊಂಡಿರುವ ತಂಡಗಳ ನಡುವಿನ ಜಿದ್ದಾಜಿದ್ದಿನ ಕಾದಾಟದಲ್ಲಿ ಪುಣೇರಿ ಪಲ್ಟಾನ್​ ತಂಡ ದಬಾಂಗ್​ ಡೆಲ್ಲಿ ವಿರುದ್ಧ ಟೈಬ್ರೇಕರ್​ನಲ್ಲಿ 6-5 ಅಂಕಗಳಿಂದ ರೋಚಕ ಗೆಲುವು ದಾಖಲಿಸಿತು. 15ನೇ ಪಂದ್ಯದಲ್ಲಿ ಕಂಡ 12ನೇ ಜಯದೊಂದಿಗೆ ಪುಣೇರಿ 12ನೇ ಆವೃತ್ತಿಯ ಪ್ರೊ ಕಬಡ್ಡಿ ಲೀಗ್​ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದರೆ, 15ನೇ ಪಂದ್ಯದಲ್ಲಿ 3ನೇ ಸೋಲು ಕಂಡ ಡೆಲ್ಲಿ 2ನೇ ಸ್ಥಾನಕ್ಕಿಳಿಯಿತು. ಉಭಯ ತಂಡಗಳು ತಲಾ 24 ಅಂಕ ಹೊಂದಿವೆ. ಆದರೆ ಸ್ಕೋರ್​ ವ್ಯತ್ಯಾಸದಲ್ಲಿ ಪುಣೇರಿ ಮೇಲುಗೈ ಸಾಧಿಸಿದೆ. ಪುಣೇರಿಗೆ ಇದು ಸತತ 6ನೇ ಗೆಲುವಾಗಿದೆ.

ತ್ಯಾಗರಾಜ ಸ್ಟೇಡಿಯಂಯಲ್ಲಿ ಭಾನುವಾರ ನಡೆದ ಪಂದ್ಯ 38-38 ಅಂಕಗಳಿಂದ ರೋಚಕ ಟೈಗೊಂಡಿತು. ಮೊದಲಾರ್ಧದಲ್ಲಿ ಡೆಲ್ಲಿ 21-20ರಿಂದ ಅಲ್ಪ ಮುನ್ನಡೆ ಸಾಧಿಸಿದರೆ, ದ್ವೀತಿಯಾರ್ಧದ ಕೊನೇ ನಿಮಿಷದಲ್ಲಿ ಪುಣೇರಿ ಸಮಬಲ ಸಾಧಿಸುವಲ್ಲಿ ಯಶಸ್ವಿಯಾಯಿತು. ಡೆಲ್ಲಿ ಪರ ಅಜಿಂಕ್ಯ ಪವಾರ್​ ಗರಿಷ್ಠ 10 ಅಂಕ ಕಲೆಹಾಕಿದರೆ, ಪುಣೇರಿ ಪರ ಪಂಕಜ್​ ಮೋಹಿತೆ (7), ನಾಯಕ ಅಸ್ಲಾಂ ಇನಾಮ್ದಾರ್​ (6), ಆದಿತ್ಯ ಶಿಂಧೆ (5), ಮೋಹಿತ್​ ಗೋಯತ್​ (5) ಸಂಟಿತ ಹೋರಾಟ ಪ್ರದರ್ಶಿಸಿದರು.

ಡೆಲ್ಲಿ ಗ್ರೀನ್​ ಜೆರ್ಸಿ: ದಬಾಂಗ್​ ಡೆಲ್ಲಿ ತಂಡ ಪರಿಸರ ಜಾಗೃತಿಗಾಗಿ ಪುಣೇರಿ ವಿರುದ್ಧದ ಪಂದ್ಯವನ್ನು ಹಸಿರು ಬಣ್ಣದ ಜೆರ್ಸಿಯಲ್ಲಿ ಆಡಿತು.