ನ್ಯೂಯಾರ್ಕ್: ಸತತ ಎರಡನೇ ಗ್ರಾಂಡ್ ಸ್ಲಾಂ ಪ್ರಶಸ್ತಿ ಜಯಿಸುವ ನಿಟ್ಟಿನಲ್ಲಿ ಗೆಲುವಿನ ಓಟ ಮುಂದುವರಿಸಿರುವ ವಿಶ್ವ ನಂ. 1 ಕಾರ್ಲೋಸ್ ಅಲ್ಕರಾಜ್, 3ನೇ ಶ್ರೇಯಾಂಕಿತ ಡೆನಿಲ್ ಮೆಡ್ವೆಡೇವ್, ಮಹಿಳಾ ಸಿಂಗಲ್ಸ್ ವಿಭಾಗದ 2ನೇ ಶ್ರೇಯಾಂಕಿತೆ ಹಾಗೂ ಭಾವಿ ವಿಶ್ವ ನಂ. 1 ಅರಿನಾ ಸಬಲೆಂಕಾ, ಆತಿಥೇಯ ತಾರೆ ಮ್ಯಾಡಿಸನ್ ಕೀಯ್ಸ ಯುಎಸ್ ಓಪನ್ ಗ್ರಾಂಡ್ ಸ್ಲಾಂ ಟೆನಿಸ್ ಟೂರ್ನಿಯಲ್ಲಿ ಸೆಮಿಫೈನಲ್ ಹಂತಕ್ಕೆ ಲಗ್ಗೆಯಿಟ್ಟಿದ್ದಾರೆ. ವಿಂಬಲ್ಡನ್ ಚಾಂಪಿಯನ್ ಮಾರ್ಕೆಟಾ ವೊಂಡ್ರೊಸೊವಾ, 8ನೇ ಶ್ರೇಯಾಂಕಿತ ಆಂಡ್ರೆ ರುಬ್ಲೆವ್ ಕ್ವಾರ್ಟರ್ ಫೈನಲ್ ನಲ್ಲಿ ಸೋತು ಟೂರ್ನಿಯಿಂದ ನಿರ್ಗಮನ ಕಂಡಿದ್ದಾರೆ.
ಹಾಲಿ ಚಾಂಪಿಯನ್ ಸ್ಪೇನ್ ತಾರೆ ಅಲ್ಕರಾಜ್ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಜರ್ಮನಿಯ ಅಲೆಕ್ಸಾಂಡರ್ ಜ್ವೆರೇವ್ ಎದುರು 6-3, 6-2, 6-4 ನೇರ ಸೆಟ್‌ಗಳಿಂದ ಗೆಲುವು ದಾಖಲಿಸಿದರು. 26 ವರ್ಷದ ಜ್ವೆರೇವ್ 2 ಗಂಟೆ 30 ನಿಮಿಷಗಳ ಹೋರಾಟದಲ್ಲಿ 20 ವರ್ಷದ ಅಲ್ಕರಾಜ್ ಸವಾಲು ಹಿಮ್ಮೆಟ್ಟಿಸುವಲ್ಲಿ ವಿಲರಾದರು. ಸತತ ಎರಡನೇ ಬಾರಿಗೆ ಟೂರ್ನಿಯ ಉಪಾಂತ್ಯಕ್ಕೆ ಪ್ರವೇಶಿಸಿದ ಅಲ್ಕರಾಜ್, ರೋಜರ್ ಫೆಡರರ್ ಬಳಿಕ ಪ್ರಶಸ್ತಿ ಉಳಿಸಿಕೊಂಡ ಮೊದಲ ಆಟಗಾರ ಎನಿಸುವ ಹಂಬಲದಲ್ಲಿದ್ದಾರೆ. 2004-08ರವರೆಗೆ ಸತತ ಐದು ಬಾರಿ ಫೆಡರರ್ ಚಾಂಪಿಯನ್ ಎನಿಸಿದ್ದರು. ಅಂತಿಮ 4ರ ಘಟ್ಟದಲ್ಲಿ 2021ರ ಚಾಂಪಿಯನ್ ಡೆನಿಲ್ ಮೆಡ್ವೆಡೇವ್ ಹಾಗೂ ಅಲ್ಕರಾಜ್ ಮುಖಾಮುಖಿಯಾಗಲಿದ್ದಾರೆ.
ಧೋನಿ ಹಾಜರಿ: ಅಲ್ಕರಾಜ್-ಜ್ವೆರೇವ್ ನಡುವಿನ ಕ್ವಾರ್ಟರ್ ಫೈನಲ್ ಪಂದ್ಯ ವೇಳೆ ಪ್ರೇಕ್ಷಕರ ಗ್ಯಾಲರಿಯಲ್ಲಿ ಟೀಮ್ ಇಂಡಿಯಾ ಮಾಜಿ ನಾಯಕ ಧೋನಿ ಹಾಜರಿದ್ದರು.
ಮೆಡ್ವೆಡೇವ್‌ಗೆ ಮುನ್ನಡೆ: ರಷ್ಯಾದ ಡೆನಿಲ್ ಮೆಡ್ವೆಡೇವ್ 6-4, 6-3, 6-4 ನೇರಸೆಟ್‌ಗಳಿಂದ ಗೆಳೆಯ ಹಾಗೂ ದೇಶ ಬಾಂಧವ ಆಂಡ್ರೆ ರುಬ್ಲೆವ್‌ರನ್ನು ಪರಾಭವಗೊಳಿಸಿದರು. 2 ಗಂಟೆ 48 ನಿಮಿಷಗಳ ಹೋರಾಟದಲ್ಲಿ ಗೆಲುವು ದಾಖಲಿಸಿದ ಮೆಡ್ವೆಡೇವ್ 4ನೇ ಬಾರಿಗೆ ಸೆಮಿಫೈನಲ್‌ಗೇರಿದ ಸಾಧನೆ ಮಾಡಿದರು.
ಸಬಲೆಂಕಾ, ಕೀಯ್ಸಗೆ ಸುಲಭ ಜಯ: ಮುಂಬರುವ ಪರಿಷ್ಕೃತ ಡಬ್ಲುೃಟಿಎ ರ‌್ಯಾಂಕಿಂಗ್‌ನಲ್ಲಿ ನಂ.1 ಸ್ಥಾನಕ್ಕೇರಲಿರುವ ಆಸ್ಟ್ರೇಲಿಯನ್ ಓಪನ್ ಚಾಂಪಿಯನ್ ಅರಿನಾ ಸಬಲೆಂಕಾ 6-1, 6-4ರಿಂದ 23ನೇ ಶ್ರೇಯಾಂಕಿತೆ ಚೀನಾದ ಕಿನ್ವೆನ್ ಝೆಂಗ್ ಎದುರು ಸುಲಭ ಗೆಲುವು ದಾಖಲಿಸಿದರು. 1 ಗಂಟೆ 13 ನಿಮಿಷ ಹೋರಾಟದಲ್ಲಿ ಮೇಲುಗೈ ಸಾಧಿಸಿದ ಸಬಲೆಂಕಾ ವರ್ಷದ ಎರಡನೇ ಗ್ರಾಂಡ್ ಸ್ಲಾಂ ಪ್ರಶಸ್ತಿಯ ಹಂಬಲದಲ್ಲಿದ್ದಾರೆ. ವರ್ಷದ ಎಲ್ಲ ಗ್ರಾಂಡ್ ಸ್ಲಾಂಗಳಲ್ಲಿ ಸೆಮಿೈನಲ್ ತಲುಪಿದ ಸಾಧನೆ ಮಾಡಿರುವ ಬೆಲಾರಸ್ ತಾರೆ ಸಬಲೆಂಕಾ, ಸೆರೇನಾ ವಿಲಿಯಮ್ಸ್ ಬಳಿಕ ಈ ಸಾಧನೆ ಮಾಡಿದ ಮೊದಲ ಆಟಗಾರ್ತಿ ಎನಿಸಿದ್ದಾರೆ. ಸೆರೇನಾ 2016ರಲ್ಲಿ ಎಲ್ಲ ಗ್ರಾಂಡ್ ಸ್ಲಾಂಗಳಲ್ಲಿ 4ರ ಘಟ್ಟಕ್ಕೇರಿದ್ದರು. ಸಬಲೆಂಕಾ ಮುಂದಿನ ಸುತ್ತಿನಲ್ಲಿ ಅಮೆರಿಕದ ಮ್ಯಾಡಿಸನ್ ಕೀಯ್ಸ ವಿರುದ್ಧ ಸೆಣಸಲಿದ್ದಾರೆ. 9ನೇ ಶ್ರೇಯಾಂಕಿತೆ ಮಾರ್ಕೆಟಾ ವೊಂಡ್ರೊಸೊವಾ 6-1, 6-4ರಿಂದ ಮ್ಯಾಡಿಸನ್ ಕೀಯ್ಸ ಎದುರು ಆಘಾತ ಎದುರಿಸಿದರು.